Maha Kumbh Mela: ಗುಜರಾತ್‌ನಿಂದ ಪ್ರಯಾಗ್‌ರಾಜ್‌ಗೆ ತೆರಳುತ್ತಿದ್ದ ರೈಲಿನ ಮೇಲೆ ಕಲ್ಲು ತೂರಾಟ
ಮಹಾಕುಂಭ ಮೇಳ ಆರಂಭವಾಗಲು ಇನ್ನೊಂದು ದಿನ ಮಾತ್ರ ಬಾಕಿ ಉಳಿದಿದ್ದು, ಈಗಾಗಲೇ ಲಕ್ಷ ಲಕ್ಷ ಜನ ಪ್ರಯಾಗ್ ರಾಜ್ ಕಡೆ ಹೋಗುತ್ತಿದ್ದಾರೆ. ಮಹಾ ಕುಂಭ ಮೇಳಕ್ಕಾಗಿಯೇ ದೇಶದ ಮೂಲೆ ಮೂಲೆಯಿಂದ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ. ಗುಜರಾತ್‌ನ ಹಲವು ಕಡೆಗಳಿಂದ ಕೂಡ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದ್ದು, ಭಾನುವಾರ ಸೂರತ್‌ನಿಂದ ಪ್ರಯಾಗ್‌ರಾಜ್‌ಗೆ ತೆರಳುತ್ತಿದ್ದ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ನಡೆದಿದೆ.
ಸೂರತ್‌ನಿಂದ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ಗೆ ತೆರಳುತ್ತಿದ್ದ ರೈಲಿನ ಮೇಲೆ ಕಲ್ಲು ತೂರಲಾಗಿದೆ. ರೈಲಿನ ಲ್ಯಾಮಿನೇಟೆಡ್ ಗಾಜಿನ ಮೇಲ್ಮೈಗೆ ಕಲ್ಲು ತಗುಲಿದ್ದು ಕಿಟಕಿಗೆ ಹಾನಿಯಾಗಿದೆ. ಮಹಾರಾಷ್ಟ್ರದ ಜಲಗಾಂವ್ ಸಮೀಪದಲ್ಲಿ ಕಲ್ಲು ತೂರಾಟ ನಡೆಸಿದ್ದು ಕುಂಭ ಮೇಳಕ್ಕಾಗಿ ಹೋಗುತ್ತಿದ್ದ ಭಕ್ತರಲ್ಲಿ ಭಯ ಉಂಟುಮಾಡಿದೆ.

ಕಿಟಕಿಗೆ ಕಲ್ಲು ತೂರಿರುವ ಬಗ್ಗೆ ರೈಲಿನ ಪ್ರಯಾಣಿಕರೊಬ್ಬರು ವಿಡಿಯೋ ಮಾಡಿದ್ದು ಆತಂಕ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದ್ದು ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರಯಾಗ್‌ರಾಜ್ ತಪತಿ ಗಂಗಾ ಎಕ್ಸ್‌ಪ್ರೆಸ್‌ನ ಬಿ6 ಕೋಚ್ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಮಹಿಳೆಯರು, ಮಕ್ಕಳು ಮತ್ತು ಭಕ್ತರು ಸೇರಿದಂತೆ 13 ಜನರು ಈ ಕೋಚ್‌ನಲ್ಲಿ ಪ್ರಯಾಣ ಮಾಡುತ್ತಿದ್ದರು ಎಂದು ವರದಿಯಾಗಿದೆ.
"ಸೂರತ್‌ನ ಉದ್ನಾದಿಂದ ಪ್ರಯಾಗ್‌ರಾಜ್‌ಗೆ ಹೋಗುತ್ತಿದ್ದೇವೆ. ಜನವರಿ 12, ಭಾನುವಾರ, ಎಲ್ಲಾ ಪ್ರಯಾಣಿಕರು ನಮ್ಮ ಜೊತೆ ಇದ್ದಾರೆ. ಜಲಗಾಂವ್‌ನಿಂದ 3 ಕಿಲೋ ಮೀಟರ್ ಮುಂದೆ, ಕೆಲವು ಸಮಾಜ ವಿರೋಧಿ ಶಕ್ತಿಗಳು ಕಲ್ಲೆಸೆದು ದಾಳಿ ಮಾಡಿದ್ದಾರೆ. ನಮಗೆ ಸೂಕ್ತ ಭದ್ರತೆ ಒದಗಿಸುವಂತೆ ನಾವು ರೈಲ್ವೆ ಸಚಿವರಿಗೆ ಮನವಿ ಮಾಡುತ್ತೇವೆ" ಎಂದು ಹಾನಿಗೊಳಗಾದ ಕೋಚ್‌ನಲ್ಲಿದ್ದ ಪ್ರಯಾಣಿಕ ರಾಜೇಂದ್ರ ಗುಪ್ತಾ ಮನವಿ ಮಾಡಿದ್ದಾರೆ.
ಈ ರೈಲಿನಲ್ಲಿರುವ ಅರ್ಧಕ್ಕೂ ಹೆಚ್ಚೂ ಮಂದಿ ಮಹಾ ಕುಂಭ ಮೇಳಕ್ಕಾಗಿ ಪ್ರಯಾಗ್ ರಾಜ್‌ಗೆ ತೆರಳುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಘಟನೆ ವಿಡಿವೋ ವೈರಲ್ ಆಗುತ್ತಿದ್ದ ಕೇಂದ್ರ ರೈಲ್ವೆ ಮತ್ತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
"ಜಲಗಾಂವ್‌ನ ಸಮೀಪದಲ್ಲಿ ಸೂರತ್‌ನ ಉದ್ನಾದಿಂದ ಪ್ರಯಾಗ್‌ರಾಜ್‌ಗೆ ತೆರಳುತ್ತಿದ್ದ ರೈಲಿನ ಮೇಲೆ ಕಲ್ಲೆಸೆಯಲಾಗಿದೆ. ರೈಲ್ವೆ ರಕ್ಷಣಾ ಪಡೆ ತಕ್ಷಣ ಕ್ರಮ ತೆಗೆದುಕೊಂಡಿದ್ದು, ರೈಲಿನಲ್ಲಿ ನಾಲ್ಕು ತಂಡಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ದೂರು ಕೂಡ ದಾಖಲು ಮಾಡಲಾಗಿದೆ" ಎಂದು ಕೇಂದ್ರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸ್ವಪ್ನಿಲ್ ನೀಲಾ ಮಾಹಿತಿ ನೀಡಿದ್ದಾರೆ.
ರೈಲು ಸೋಮವಾರ ಬೆಳಗ್ಗೆ ಪ್ರಯಾಗ್ ರಾಜ್‌ಗೆ ತಲುಪಲಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡುತ್ತಿದ್ದು, ತಪ್ಪಿತಸ್ಥರನ್ನು ಶೀಘ್ರದಲ್ಲೇ ಬಂಧಿಸುವ ಭರವಸೆ ನೀಡಿದ್ದಾರೆ.












Click it and Unblock the Notifications