ದೇಶದಲ್ಲಿ 23,950 ಹೊಸ ಕೋವಿಡ್ ಪ್ರಕರಣಗಳು ಪತ್ತೆ
ನವದೆಹಲಿ, ಡಿಸೆಂಬರ್ 23: ಭಾರತದಲ್ಲಿ 24 ಗಂಟೆಗಳಲ್ಲಿ 23,950 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಒಟ್ಟು ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 1,00,99,066ಕ್ಕೆ ತಲುಪಿದೆ. ಒಂದೇ ದಿನ 333 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಜತೆಗೆ 26,895 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 1,46,444ಕ್ಕೆ ಏರಿಕೆಯಾಗಿದೆ. ಹಾಗೆಯೇ ಒಟ್ಟು ಚೇತರಿಕೆ 96,63,382ಕ್ಕೆ ತಲುಪಿದೆ. ಖಚಿತಗೊಂಡ ಪ್ರಕರಣಗಳ ಪೈಕಿ 2,89,240 ಸಕ್ರಿಯ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವಾಲಯದ ವರದಿ ತಿಳಿಸಿದೆ.
ಡಿಸೆಂಬರ್ 22ರವರೆಗೂ ದೇಶದಾದ್ಯಂತ ಒಟ್ಟು 16,42,68,721 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇವುಗಳಲ್ಲಿ 10,98,164 ಮಾದರಿಗಳನ್ನು ಮಂಗಳವಾರ ಪರೀಕ್ಷಿಸಲಾಗಿದೆ.

ಈ ನಡುವೆ ಭಾರತವು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನಿಕಾ ಕಂಪೆನಿಗಳು ದೇಶದಲ್ಲಿ ಸೆರಮ್ ಇನ್‌ಸ್ಟಿಟ್ಯೂಟ್ ಸಹಯೋಗದಲ್ಲಿ ಉತ್ಪಾದಿಸಿರುವ ಕೋವಿಶೀಲ್ಡ್ ಲಸಿಕೆಯ ತುರ್ತುಬಳಕೆಗೆ ಅನುಮತಿ ನೀಡುವ ಸಾಧ್ಯತೆ ಇದೆ. ಭಾರತದ್ದೇ ಆದ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೂ ಅನುಮತಿ ಕೋರಲಾಗಿದೆ. ಇವುಗಳಲ್ಲಿ ಕೋವಿಶೀಲ್ಡ್ ಲಸಿಕೆ ಮೊದಲು ಅನುಮೋದನೆ ಪಡೆದುಕೊಳ್ಳಬಹುದು ಎನ್ನಲಾಗಿದೆ.
ಮುಂದಿನ ವಾರ ಲಸಿಕೆ ಬಳಕೆಗೆ ಅನುಮತಿ ಸಿಗುವ ನಿರೀಕ್ಷೆಯಿದೆ. ಬ್ರಿಟನ್‌ನಲ್ಲಿ ರೂಪಾಂತರ ವೈರಸ್ ತಳಿ ಪ್ರಭಾವ ಹೆಚ್ಚುತ್ತಿರುವ ಕಾರಣ ಭಾರತದಲ್ಲಿಯೂ ಅದು ಹರಡದಂತೆ ತಡೆಯಲು ಲಸಿಕೆ ಬಳಕೆಗೆ ಸರ್ಕಾರ ಮುಂದಾಗಲಿದೆ ಎನ್ನಲಾಗಿದೆ.












Click it and Unblock the Notifications