Tirupati laddu ತಿರುಪತಿ ದೇವಸ್ಥಾನ ಶುದ್ಧೀಕರಣ: ಆಂಧ್ರ ಸಿ.ಎಂ ಚಂದ್ರಬಾಬು ನಾಯ್ಡು ಹೇಳಿದ್ದೇನು
ತಿರುಪತಿ ತಿರುಮಲ ದೇವಸ್ಥಾನದ ಪ್ರಸಾದವಾದ ಲಡ್ಡಿನಲ್ಲಿ ಬಳಸುವ ತಪ್ಪದಲ್ಲಿ ಪ್ರಾಣಿ ಕೊಬ್ಬು ಬಳಸಲಾಗಿದೆ ಎನ್ನುವ ವಿಷಯ ಚರ್ಚೆಯ ಮುನ್ನೆಲೆಗೆ ಬಂದ ಮೇಲೆ ತಿರುಪತಿ ದೇವಸ್ಥಾನದ ಶುದ್ಧೀಕರಣದ ಬಗ್ಗೆಯೂ ಹೆಚ್ಚು ಚರ್ಚೆಯಾಗುತ್ತಿದೆ. ಇದೀಗ ಆಂಧ್ರಪ್ರದೇಶದ ಸರ್ಕಾರವೇ ಶುದ್ಧೀಕರಣಕ್ಕೆ ಬೇಕಾದ ಸಿದ್ಧತೆಗಳನ್ನು ನಾವು ಮಾಡಿಕೊಳ್ಳುತ್ತಿದ್ದೇವೆ. ಈ ಬಗ್ಗೆ ಸನಾತನ ಧರ್ಮದ ಹಿರಿಯರೊಂದಿಗೆ ಚರ್ಚೆ ಮಾಡುತ್ತಿದ್ದೇವೆ ಎಂದು ಸಹ ಹೇಳಿದೆ.
ತಿರುಪತಿ ತಿರುಮಲ ದೇವಸ್ಥಾನ ಹಾಗೂ ತಿರುಪತಿಯಲ್ಲಿ ಪ್ರಸಾದವಾಗಿ ನೀಡುವ ಲಡ್ಡಿನ ಬಗ್ಗೆ ಹಿಂದೂ ಧರ್ಮೀಯರಲ್ಲಿ ವಿಶೇಷ ಗೌರವ ಹಾಗೂ ಭಕ್ತಿ ಇದೆ. ಆದರೆ, ಇತ್ತೀಚೆಗೆ ಬಂದ ವರದಿಯು ಹಿಂದೂ ಧರ್ಮೀಯರನ್ನು ಆಘಾತಕ್ಕೆ ದೂಡಿದೆ. ದೇಶದಲ್ಲಿ ಕೋಟ್ಯಾಂತರ ಹಿಂದೂ ಧರ್ಮೀಯರು ಒಮ್ಮೆಯಾದರೂ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆಯಬೇಕು ಎಂದು ಇಚ್ಛಿಸುತ್ತಾರೆ. ಅದೆಷ್ಟೋ ಜನ ತಿರುಪತಿ ತಿರುಮಲ ದೇವಸ್ಥಾನದ ಬೆಟ್ಟವನ್ನು ಹತ್ತಿ ಹೋಗುವುದು ಇದೆ.

ದೇವಸ್ಥಾನಕ್ಕೆ ಹೋದರೆ ನೆಮ್ಮದಿಯ ಭಾವ ಮೂಡುತ್ತದೆ ಎಂದು ಕೋಟ್ಯಾಂತರ ಜನರು ನಂಬಿದ್ದಾರೆ. ಭಾರತದಲ್ಲಿ ಮಾತ್ರವಲ್ಲ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ತಿರುಪತಿ ತಿಮ್ಮಪ್ಪನ ಭಕ್ತಾಧಿಗಳು ಇದ್ದಾರೆ. ಈಚೆಗೆ ಚರ್ಚೆಯಾಗುತ್ತಿರುವ ವಿಷಯ ಭಕ್ತಾಧಿಗಳಲ್ಲಿ ದಿಗ್ಭ್ರಮೆ ಮೂಡಿಸಿದೆ. ತಿರುಪತಿ ಲಡ್ಡಿನಲ್ಲಿ ದನದ ಕೊಬ್ಬು ಹಾಗೂ ಮೀನಿನ ಎಣ್ಣೆಯನ್ನು ಬಳಸಲಾಗಿತ್ತು ಎನ್ನುವ ವಿಷಯ ಚರ್ಚೆಗೆ ಬರುತ್ತಿದ್ದಂತೆಯೇ ತಿರುಪತಿ ದೇವಸ್ಥಾನವನ್ನು ಶುದ್ಧೀಕರಿಸಬೇಕು ಎನ್ನುವಲ್ಲಿಗೆ ಬಂದಿದೆ.
ತಿರುಪತಿ ಶುದ್ಧೀಕರಣಕ್ಕೆ ಕ್ರಮ
ತಿರುಪತಿಯ ಲಡ್ಡು ತಯಾರಿಕೆಯಲ್ಲಿ ದನದ, ಹಂದಿಯ ಹಾಗೂ ಮೀನಿನ ಎಣ್ಣೆ ಬಳಕೆ ವಿಷಯ ಚರ್ಚೆಯಾಗುತ್ತಿದ್ದಂತೆಯೇ ದೇವಸ್ಥಾನವನ್ನು ಶುದ್ಧೀಕರಿಸಬೇಕು ಎನ್ನುವ ಚರ್ಚೆಗಳು ನಡೆದಿವೆ. ಟಿಟಿಡಿ ಈ ವಿಚಾರವಾಗಿ ಚರ್ಚೆ ನಡೆಸಿದ್ದು ಶೀಘ್ರವೇ ದೇವಸ್ಥಾನದ ಶುದ್ಧೀಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಈ ಸಂಬಂಧ ಸನಾತನ ಧರ್ಮದ ವಿದ್ವಾಂಸರನ್ನು ಸಹ ಸಂಪರ್ಕಿಸಲಾಗುತ್ತಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಹೇಳಿದ್ದಾರೆ. ಅಲ್ಲದೇ ಮೂರು ದಿನಗಳ ಕಾಲ ಹೋಮ ನಡೆಸುವ ವಿಚಾರವೂ ಸಹ ಚರ್ಚೆಯಾಗಿದೆ. ಶುದ್ಧೀಕರಣ ಪ್ರಕ್ರಿಯೆಯಿಂದ ದೇವರ ಆಶೀರ್ವಾದ ಸಿಗಲಿದ್ದು, ಕ್ಷೇತ್ರದಲ್ಲಿ ಪಾವಿತ್ರ್ಯತೆ ನೆಲೆಸಲಿದೆ ಎನ್ನುವುದು ನಂಬಿಕೆ ಇದರ ಭಾಗವಾಗಿ ಶುದ್ಧೀಕರಣದ ಬಗ್ಗೆ ಗಂಭೀರ ಚರ್ಚೆಗಳು ನಡೆದಿವೆ.
ಭಕ್ತರ ಭಾವನೆಯನ್ನು ಗೌರವಿಸುತ್ತೇವೆ: ಚಂದ್ರಬಾಬು ನಾಯ್ಡು
ಭಕ್ತರ ಭಾವನೆಯನ್ನು ನಾವು ಅತ್ಯಂತ ಶ್ರದ್ಧೆಯಿಂದ ಗೌರವಿಸುತ್ತೇವೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಪ್ರತಿಯೊಂದು ಧರ್ಮಕ್ಕೆ ತನ್ನದೇ ಆದ ಸಂಪ್ರದಾಯಗಳು, ಭಕ್ತಿ ಹಾಗೂ ಪಾವಿತ್ರ್ಯತೆ ಎನ್ನುವುದು ಇರುತ್ತದೆ ಅದನ್ನು ಸರ್ಕಾರಗಳು ಗೌರವಿಸಬೇಕು. ನಮ್ಮ ಸರ್ಕಾರ ಭಕ್ತಾಧಿಗಳ ಭಾವನೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ. ಭಕ್ತಾಧಿಗಳ ಭಾವನೆಯನ್ನು ಗೌರವಿಸುತ್ತದೆ ಎಂದು ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಗೆ ಟಾಂಗ್ ನೀಡಿದ್ದಾರೆ.












Click it and Unblock the Notifications