ಜಮ್ಮು-ಕಾಶ್ಮೀರ ಚುನಾವಣೆ; ಕಾಂಗ್ರೆಸ್ ಜತೆ ಮೈತ್ರಿ ಘೋಷಿಸಿದ ಎನ್‌ಸಿ
ಜಮ್ಮು-ಕಾಶ್ಮೀರ, ಆಗಸ್ಟ್ 22: ಜಮ್ಮು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣಾ ಕಣ ರಂಗೇರಿದ್ದು, ಈ ಬಾರಿ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಹಾಗೂ ಕಾಂಗ್ರೆಸ್ ಪಕ್ಷ ಮೈತ್ರಿಯಾಗಿ ಚುನಾವಣೆ ಎದುರಿಸಲು ಸಜ್ಜಾಗಿವೆ. 90 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್‌ನ (ಎನ್‌ಸಿ) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಇಂದು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಶ್ರೀನಗರದ ಮಾತುಕತೆ ನಡೆಸಿದ ಬಳಿಕ ಫಾರೂಕ್ ಅವರು ಕಾಂಗ್ರೆಸ್ ಜತೆಗಿನ ಮೈತ್ರಿ ಘೋಷಿಸಿದ್ದಾರೆ. ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಕಾಂಗ್ರೆಸ್ ನಡುವಿನ ಈ ಮೈತ್ರಿಯು ದೇಶದ ವಿಭಜನೆ ಮಾಡಲು ಹೊರಟಿರುವ ಶಕ್ತಿಗಳನ್ನು ಮಣಿಸುವ ಉದ್ದೇಶ ಹೊಂದಿದೆ ಎಂದು ಫಾರೂಕ್ ಹೇಳಿದ್ದಾರೆ.

ಈ ಚುನಾವಣೆಯಲ್ಲಿ ನಾವು ಬಹುಮತದಿಂದ ಗೆಲ್ಲುವ ನಿರೀಕ್ಷೆಯಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸುವುದು ಕಾಂಗ್ರೆಸ್ ಮತ್ತು ಇಂಡಿಯಾ ಕೂಟದ ಆದ್ಯತೆಯಾಗಿದೆ. ಈ ಚುನಾವಣೆಯಲ್ಲಿ ಗೆದ್ದು, ಎಲ್ಲಾ ಅಧಿಕಾರಗಳೊಂದಿಗೆ ಪೂರ್ಣ ರಾಜ್ಯತ್ವವನ್ನು ಮರುಸ್ಥಾಪಿಸಲಾಗುವುದು ಎಂದು ಫಾರೂಕ್ ಭರವಸೆ ವ್ಯಕ್ತಪಡಿಸಿದ್ದಾರೆ. ಜಮ್ಮುಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಬಹಳ ಮುಖ್ಯವಾಗಿದೆ. ನಮ್ಮ ರಾಜ್ಯವು ಅತ್ಯಂತ ಕೆಟ್ಟ ದಿನಗಳನ್ನು ಕಂಡಿದ್ದು, ಇದಕ್ಕೆ ಸಂಪೂರ್ಣ ಅಧಿಕಾರದ ಜೊತೆಗೆ ಪುನರ್ ಸ್ಥಾಪಿಸುವ ವಿಶ್ವಾಸ ನಮಗಿದೆ. ಅದಕ್ಕಾಗಿ ನಾವು ಇಂಡಿಯಾ ಬಣದ ಜೊತೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ ಎಂದು ಹೇಳಿದ್ದಾರೆ.
#WATCH | Srinagar, J&K: Congress President Mallikarjun Kharge, Lok Sabha LoP and Congress MP Rahul Gandhi met National Conference President Farooq Abdullah and Vice President Omar Abdullah at the residence in Srinagar.
— ANI (@ANI) August 22, 2024
(Video: AICC) pic.twitter.com/u5v5ULq5W7
ನಿನ್ನೆ ಶ್ರೀನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ್ದ ರಾಹುಲ್ ಗಾಂಧಿ, ಜಮ್ಮು ಕಾಶ್ಮೀರದಲ್ಲಿ ಆದಷ್ಟು ಬೇಗ ರಾಜ್ಯತ್ವವನ್ನು ಮರುಸ್ಥಾಪಿಸಬೇಕು. ಇದಕ್ಕೆ ನಾವು ಹಾಗೂ ಇಂಡಿಯಾ ಬಣ ಆದ್ಯತೆ ನೀಡುತ್ತದೆ. ಜಮ್ಮು ಕಾಶ್ಮೀರ ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಪುನಃಸ್ಥಾಪಿಸುವ ಆಶಯ ಹೊಂದಿದ್ದೇವೆ ಎಂದು ಹೇಳಿದ್ದರು.

ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಬಿಜೆಪಿ ಕೂಡ ಕಣಿವೆ ರಾಜ್ಯದಲ್ಲಿ ಮಿಂಚಿನ ತಯಾರಿ ನಡೆಸಲಾರಂಭಿಸಿದೆ. ಮುಂದಿನ ವಾರದಿಂದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಚುನಾವಣಾ ಪ್ರಚಾರವನ್ನು ಆರಂಭಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಕಣಿವೆ ರಾಜ್ಯದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಂವಿಧಾನದ 370ನೇ ವಿಧಿ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಕಲ್ಪಿಸಿದ್ದ ವಿಶೇಷ ಸ್ಥಾನಮಾನವನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ 2019ರ ಆಗಸ್ಟ್ 5ರಂದು ರದ್ದುಪಡಿಸಿತ್ತು. ಇದಾದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದ್ದು, ಬಿಜೆಪಿ ಏಕಾಂಗಿಯಾಗಿ ಜಮ್ಮು ಕಾಶ್ಮೀರದಲ್ಲಿ ಚುನಾವಣೆಯನ್ನು ಎದುರಿಸುತ್ತಿದೆ. ಮತ್ತೊಂದೆಡೆ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಪಕ್ಷಗಳ ಚುನಾವಣಾ ಪೂರ್ವ ಮೈತ್ರಿ ಯಶಸ್ವಿಯಾಗಿದೆ. ಹಾಗಾಗಿ ಈ ವಿಧಾನಸಭಾ ಚುನಾವಣೆಯು ತೀವ್ರ ಕುತೂಹಲ ಮೂಡಿಸಿದೆ.
ಜಮ್ಮು ಕಾಶ್ಮೀರದಲ್ಲಿ ಮೂರು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಕ್ರಮವಾಗಿ ಸೆಪ್ಟೆಂಬರ್ 18, ಸೆಪ್ಟೆಂಬರ್ 25 ಹಾಗೂ ಅಕ್ಟೋಬರ್ 1ರಂದು ಚುನಾವಣೆ ನಿಗದಿಯಾಗಿದೆ. ಅಕ್ಟೋಬರ್ 4ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.












Click it and Unblock the Notifications