ನರೇಂದ್ರ ಮೋದಿ ಅವರನ್ನ ಏಕಾಏಕಿ ಭೇಟಿ ಮಾಡಿದ್ದು ಯಾಕೆ? ಡಿ ಕೆ ಶಿವಕುಮಾರ್ ನಡೆಗೆ ಹೈಕಮಾಂಡ್ ಸಂಶಯ
ಬೆಂಗಳೂರು, ಸೆಪ್ಟೆಂಬರ್ 10: ಮುಡಾ ಹಗರಣ ಹಾಗೂ ವಾಲ್ಮೀಕಿ ನಿಗಮ ಹಗರಣ ಕಾಂಗ್ರೆಸ್ ಪಕ್ಷಕ್ಕೆ ಕಳಂಕವನ್ನು ತಂದಿದೆ. ಭ್ರಷ್ಟಾಚಾರದ ಆರೋಪದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಿಪಕ್ಷಗಳು ತಿರುಗಿ ಬಿದ್ದಿದ್ದು, ಕೈ ಪಾಳಯದಲ್ಲಿ ಸಂಚಲನ ಸೃಷ್ಟಿಸಿದೆ. ಈ ಹೊತ್ತಲಿ ಮೋದಿ ಅವರನ್ನ ಡಿ ಕೆ ಶಿವಕುಮಾರ್ ಭೇಟಿ ಕುರಿತು ಕೈ ಹೈಕಮಾಂಡ್ ಸಂಶಯ ವ್ಯಕ್ತಪಡಿಸಿದೆ.
ರಾಜಕೀಯ ಎದುರಾಳಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನ ಏಕಾಏಕಿ ಭೇಟಿ ಮಾಡಿರುವುದರ ಕುರಿತು ರಂದೀಪ್ ಸಿಂಗ್ ಸುರ್ಜೇವಲಾ ಹಾಗು ಕೆ.ಸಿ.ವೇಣುಗೋಪಾಲ್ ಅವರು ಡಿ ಕೆ ಶಿವಕುಮಾರ್ ಅವರನ್ನ ಪ್ರಶ್ನಿಸಿದ್ದು, ಡಿ ಕೆ ಶಿವಕುಮಾರ್ ನಡೆ ಕುರಿತು ಸಂಶಯವನ್ನ ವ್ಯಕ್ತಪಡಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳಿಗೆ ಪ್ರಧಾನಿ ಭೇಟಿಗೆ ಸಿಗದ ಅವಕಾಶ ನಿಮಗೆ ಹೇಗೆ ಸಿಕ್ಕಿತ್ತು ಎಂದು ಹೈಕಮಾಂಡ್ ನಾಯಕರು ಪ್ರಶ್ನಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಸಿಎಂಗಳಿಗೇ ಸಿಗೋದಿಲ್ಲ ನಿಮಗೆ ಸಿಕ್ಕಿದ್ದು ಹೇಗೆ? ನೀವೇಕೆ ಮೋದಿ ಭೇಟಿಯಾಗಿದ್ರಿ? ಅವರನ್ನ ಭೇಟಿಯಾಗಲು ನಿಮಗೆ ಹೇಳಿದ್ಯಾರು? ಅವರು ನಮ್ಮ ರಾಜಕೀಯ ಎದುರಾಳಿ, ಈಗವರ ಭೇಟಿಗೆ ಅವಶ್ಯಕತೆ ಏನಿತ್ತು? ರಾಜ್ಯ ಸಂಘಟನೆಯಲ್ಲಿ ಉನ್ನತ ಹುದ್ದೆಯಲ್ಲಿದ್ದೀರಿ, ಅನುಮಾನ ಹುಟ್ಟಿಸುತ್ತೆ. ಸರ್ಕಾರದಲ್ಲಿ ಉಪಮುಖ್ಯಮಂತ್ರಿಗಳಾಗಿದ್ದು, ಇಂತಹ ಕೆಲಸ ಮಾಡಬಾರದು ಎಂದು ಡಿ ಕೆ ಶಿವಕುಮಾರ್ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಅಸಮಾಧಾನ ಹೊರಹಾಕಿದೆ.
ಕಾಂಗ್ರೆಸ್ ಹೈಕಮಾಂಡ್ ಪ್ರಶ್ನೆಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಉತ್ತರಿಸಿದ್ದು, ನರೇಂದ್ರ ಮೋದಿ ಅವರ ಭೇಟಿ ಯಾವುದೇ ರಾಜಕೀಯ ಉದ್ದೇಶಕ್ಕಾಗಿ ಮಾಡಿಲ್ಲ. ನನ್ನ ಹಾಗೂ ಪ್ರಧಾನಿ ಭೇಟಿಯಲ್ಲಿ ಯಾವುದೇ ರಾಜಕಾರಣವನ್ನು ಬೆರೆಸುವ ಅಗತ್ಯವಿಲ್ಲ. ಇಲ್ಲಿನ ರಾಜಕೀಯ ಬೆಳವಣೆಗೆಗೂ, ನನ್ನ ಭೇಟಿಗೂ ಯಾವುದೇ ಸಂಬಂಧವಿಲ್ಲ. ನಾನು, ನನ್ನ ಇಲಾಖೆಯ ಕೆಲಸದ ವಿಚಾರವಾಗಿ ಅವರನ್ನು ಭೇಟಿಯಾಗಿದ್ದೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ನಂತರ ರಾಜ್ಯದ ಮುಖ್ಯಮಂತ್ರಿ ಯಾರಾಗಬೇಕು ಎಂಬ ಚರ್ಚೆ ಕಾಂಗ್ರೆಸ್ ಪಕ್ಷದಲ್ಲಿ ಜೋರಾಗುತ್ತಿರುವ ನಡುವೆಯೇ, ಹೈಕಮಾಂಡ್ ಏಜೆಂಟ್ ಗಳಾದ ರಂದೀಪ್ ಸಿಂಗ್ ಸುರ್ಜೇವಲಾ ಹಾಗು ಕೆ.ಸಿ.ವೇಣುಗೋಪಾಲ್ ಅವರಿಗೆ ಡಿಸಿಎಂ ಡಿ ಕೆ ಶಿವಕುಮಾರ್ ಅವರ ಮೇಲೆ ಅನುಮಾನ ಹುಟ್ಟಿಕೊಂಡಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ತಿಳಿಸಿದ್ದಾರೆ.
ಡಿಸಿಎಂ ಡಿ ಕೆ ಶಿವಕುಮಾರ್ ಅವರೇ, ಕಾಂಗ್ರೆಸ್ ಪಕ್ಷದ ಸಂಪ್ರದಾಯದಲ್ಲಿ ಪಲ್ಲಕ್ಕಿ ಹೊರುವವರೇ ಬೇರೆ, ಉತ್ಸವ ಮೂರ್ತಿ ಆಗುವವರೇ ಬೇರೆ. ಜೀವನವೆಲ್ಲಾ ಕಾಂಗ್ರೆಸ್ ಪಕ್ಷದ ಪಲ್ಲಕ್ಕಿ ಹೊತ್ತು ಕಡೆಗೆ ಮೂಲೆ ಗುಂಪಾದವರ ಪಟ್ಟಿ ಬಹಳ ದೊಡ್ಡದಿದೆ, ಜೋಪಾನ. ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಅವರಿಂದ ಹಿಡಿದು ಪಕ್ಕದ ಆಂಧ್ರ ಪ್ರದೇಶದ ಜಗನ್ ರೆಡ್ಡಿ ಅವರವರೆಗೂ ಅನೇಕ ನಾಯಕರು ಕಾಂಗ್ರೆಸ್ ಪಕ್ಷದಿಂದ ಹೊರಗೆ ಬಂದ ಮೇಲೆಯೇ ಮುಖ್ಯಮಂತ್ರಿ ಆಗಲಿಕ್ಕೆ ಸಾಧ್ಯವಾಗಿದ್ದು. ಇತಿಹಾಸದ ಅರಿವಿದ್ದವರಿಂದ ಮಾತ್ರ ಇತಿಹಾಸ ಸೃಷ್ಟಿಸಲು ಸಾಧ್ಯ. ಕಾಂಗ್ರೆಸ್ ಪಕ್ಷದ ಇತಿಹಾಸ ನಿಮಗೆ ಚೆನ್ನಾಗಿ ಗೊತ್ತಿದೆ ಎಂದು ಭಾವಿಸಿದ್ದೇನೆ ಎಂದು ಆರ್ ಅಶೋಕ್ ತಿಳಿಸಿದ್ದಾರೆ.












Click it and Unblock the Notifications