Telangana Opinion Poll 2023: ಕರ್ನಾಟಕದಂತೆ ತೆಲಂಗಾಣದಲ್ಲೂ ಒನ್‌ಸೈಡೆಡ್ ಗೇಮ್- ನಿಖರ ಸಮೀಕ್ಷೆಯ ಅಂಕಿಅಂಶ, ವಿವರ
ಹೈದರಾಬಾದ್, ಅಕ್ಟೋಬರ್ 30: ನವೆಂಬರ್‌ನಲ್ಲಿ ನಡೆಯಲಿರುವ ತೆಲಂಗಾಣ ವಿಧಾನಸಭೆ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ಆಡಳಿತಾರೂಢ ಬಿಆರ್‌ಎಸ್ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಡುವುದು ಖಚಿತವಾಗಿದೆ. ಈಗಾಗಲೇ ಚುನಾವಣಾ ದಿನಾಂಕ ಪ್ರಕಟಗೊಂಡಿದ್ದು, ಹಲವು ಮಹತ್ವದ ಸಮೀಕ್ಷೆಗಳು ಹೊರಬಿದ್ದಿವೆ.
ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಕಾಂಗ್ರೆಸ್ ಪಕ್ಷವು ತೆಲಂಗಾಣದಲ್ಲಿ ಭಾರೀ ಪ್ರಚಾರದಲ್ಲಿ ತೊಡಗಿದೆ. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರು ಈಗಾಗಲೇ ಪ್ರಚಾರವನ್ನು ಆರಂಭಿಸಿದ್ದಾರೆ. ಭಾನುವಾರ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪ್ರಚಾರವನ್ನು ಮಾಡಿದ್ದಾರೆ. ಡಿಕೆಶಿ ಅವರ ತಂತ್ರಗಾರಿಕೆಯನ್ನು ಬಳಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ.

ಕರ್ನಾಟಕದಂತೆಯೇ ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷವು ಹಲವು ಉಚಿತ ಗ್ಯಾರಂಟಿಗಳನ್ನು ಘೋಷಿಸಿದೆ. ಇದು ಮತದಾರರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಬಹುದು ಎಂಬ ಅಭಿಪ್ರಾಯಗಳು ರಾಜಕೀಯ ವಲಯದಲ್ಲಿ ಓಡಾಡುತ್ತಿವೆ.
ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸೆಪ್ಟೆಂಬರ್‌ನಲ್ಲಿಯೇ ತೆಲಂಗಾಣ ಜನತೆಗೆ ಆರು ಖಾತರಿಗಳನ್ನು ಭಾನುವಾರ ಘೋಷಿಸಿದ್ದಾರೆ. ಇದು ಕರ್ನಾಟಕದಂತೆಯೇ ತೆಲಂಗಾಣದಲ್ಲಿಯೂ ಕೆಲಸ ಮಾಡಬಹುದು ಎಂಬ ಮಾತುಗಳು ಕೇಳಿಬಂದಿವೆ.
ಆಡಳಿತಾರೂಢ ಬಿಆರ್‌ಎಸ್ ಪಕ್ಷವು ಈ ಬಾರಿಯ ಚುನಾವಣೆಯಲ್ಲಿ ಹಲವು ಸಂಕಷ್ಟಗಳನ್ನು ಎದುರಿಸುತ್ತಿರುವ ಮೇಲ್ನೊಟಕ್ಕೆ ಕಂಡುಬಂದಿದೆ. ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರಿಗೆ ಅಧಿಕಾರ ವಿರೋಧಿ ಅಲೆ ಎದುರಾಗಿದೆ ಎಂದು ಹೇಳಲಾಗುತ್ತಿದೆ.

ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಿ ಬಿಆರ್‌ಎಸ್ ಪಕ್ಷದ ಕೆಲ ಪ್ರಮುಖ ನಾಯಕರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಇದರಿಂದ ಬಿಆರ್‌ಎಸ್ ಪಕ್ಷಕ್ಕೆ ತೀವ್ರ ಹಿನ್ನೆಡೆಯಾಗಬಹುದು ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿದೆ.
ಪೋಲ್ ಟ್ರ್ಯಾಕರ್ ಸಮೀಕ್ಷೆ ಹೇಳುವುದೇನು?
ಕರ್ನಾಟಕದ ಚುನಾವಣೆಯ ಸಮೀಕ್ಷೆಯನ್ನು ನೀಡಿದ್ದ ಪೋಲ್ ಟ್ರ್ಯಾಕರ್ ಸಂಸ್ಥೆ ತೆಲಂಗಾಣ ವಿಧಾನಸಭೆಯ ಸಮೀಕ್ಷೆಯನ್ನು ನೀಡಿದೆ.
ಈ ಸಮೀಕ್ಷೆಯ ಪ್ರಕಾರ, ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಏರುವುದು ನಿಶ್ಚಿತವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ಸಿಗಲಿದೆ ಎಂದು ಸಮೀಕ್ಷೆ ತಿಳಿಸಿದೆ.

ಸಮೀಕ್ಷೆಯ ಪ್ರಕಾರ, ಕಾಂಗ್ರೆಸ್‌ಗೆ 64 ರಿಂದ 71 ಸ್ಥಾನಗಳು ದೊರೆಯಲಿವೆ. ಬಿಆರ್‌ಎಸ್ ಪಕ್ಷಕ್ಕೆ 39 ರಿಂದ 43 ಸ್ಥಾನಗಳು ಸಿಗಲಿವೆ. ಬಿಜೆಪಿ ಕೇವಲ 3 ರಿಂದ 5 ಕ್ಷೇತ್ರಗಳಲ್ಲಿ ಜಯಗಳಿಸಲಿದೆ. ಎಐಎಂಐಎಂ ಪಕ್ಷವು 2 ರಿಂದ 5 ಸ್ಥಾನಗಳನ್ನು ಪಡೆಯಲಿದೆ. ಪಕ್ಷೇತರರು 2 ರಿಂದ 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ.
ಮತ ಹಂಚಿಕೆ ಪ್ರಮಾಣ
ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶೇ 43 ರಷ್ಟು ಮತಗಳು ದೊರೆಯಲಿವೆ. ಆಡಳಿತಾರೂಢ ಬಿಆರ್‌ಎಸ್ ಪಕ್ಷಕ್ಕೆ ಶೇ 34 ರಷ್ಟು ಮತಗಳು ಸಿಗಲಿವೆ. ಬಿಜೆಪಿ ಹಾಗೂ ಎಐಎಂಐಎಂ ಪಕ್ಷಗಳಿಗೆ ಕೇವಲ ಶೇ 10 ರಷ್ಟು ಮತಗಳು ಬರಲಿವೆ ಎಂದು ಪೋಲ್ ಟ್ರ್ಯಾಕರ್ ಸಮೀಕ್ಷೆ ಹೇಳಿದೆ.
ತೆಲಂಗಾಣ ವಿಧಾನಸಭೆ ಚುನಾವಣೆ 2023: ಪ್ರಮುಖ ದಿನಾಂಕಗಳು
ಗೆಜೆಟ್ ಅಧಿಸೂಚನೆಯ ದಿನಾಂಕ: 3ನೇ ನವೆಂಬರ್ 2023 ( ಶುಕ್ರವಾರ )
ನಾಮನಿರ್ದೇಶನಗಳ ಕೊನೆಯ ದಿನಾಂಕ: 10ನೇ ನವೆಂಬರ್, 2023 ( ಶುಕ್ರವಾರ )
ನಾಮನಿರ್ದೇಶನಗಳ ಪರಿಶೀಲನೆಯ ದಿನಾಂಕ: 13ನೇ ನವೆಂಬರ್ 2023 ( ಸೋಮವಾರ )
ಉಮೇದುವಾರಿಕೆಗಳನ್ನು ಹಿಂಪಡೆಯಲು ಕೊನೆಯ ದಿನಾಂಕ: 15ನೇ ನವೆಂಬರ್ 2023 ( ಬುಧವಾರ )
ಮತದಾನದ ದಿನಾಂಕ: 30ನೇ ನವೆಂಬರ್, 2023 ( ಗುರುವಾರ )
ಎಣಿಕೆಯ ದಿನಾಂಕ: 3ನೇ ಡಿಸೆಂಬರ್, 2023 ( ಭಾನುವಾರ )












Click it and Unblock the Notifications