ತೆಲಂಗಾಣ ಚುನಾವಣೆ; 500 ಬೂತ್‌ಗಳಲ್ಲಿ ಹೆಚ್ಚಿನ ಬಂದೋಬಸ್ತ್
ಹೈದರಾಬಾದ್, ಅಕ್ಟೋಬರ್ 30: ತೆಲಂಗಾಣ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. 119 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ನವೆಂಬರ್ 30ರಂದು ಮತದಾನ ನಡೆಯಲಿದೆ. ಈಗಾಗಲೇ ಚುನಾವಣಾ ಪ್ರಚಾರ ಬಿರುಸುಗೊಂಡಿದ್ದು, ಡಿಸೆಂಬರ್ 3ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ರಾಜ್ಯದಲ್ಲಿ ಚುನಾವಣೆ ನಡೆಸಲು ಆಯೋಗ ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ. 500 ಮತಗಟ್ಟೆಗಳಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲು ಯೋಜನೆ ರೂಪಿಸಲಾಗಿದೆ. ಈ ಮತಗಟ್ಟೆಗಳು ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ರಾಜ್ಯದ ಗಡಿ ಪ್ರದೇಶದಲ್ಲಿ ಬರುತ್ತವೆ.

119 ಕ್ಷೇತ್ರಗಳ ಪೈಕಿ 19 ಕ್ಷೇತ್ರಗಳನ್ನು ಸೂಕ್ಷ್ಮ ಎಂದು ಗುರುತಿಸಲಾಗಿದೆ. 8 ಜಿಲ್ಲೆಗಳ 511 ಮತಗಟ್ಟೆಗಳನ್ನು ಎಡಪಂಥೀಯ ಪ್ರಭಾವ ಇರುವ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. ಛತ್ತೀಸ್‌ಗಢದಲ್ಲಿ ನಕ್ಸಲರ ಪ್ರಭಾವ ಇರುವ ಕಾರಣ ಗಡಿಭಾಗದ ಜಿಲ್ಲೆಗಳ ಮತಗಟ್ಟೆಗಳಿಗೆ ಭದ್ರತೆ ಹೆಚ್ಚಿಸಲಾಗಿದೆ.
ಹೇಗಿರಲಿದೆ ಭದ್ರತೆ; ಚುನಾವಣಾ ಆಯೋಗದ ಅಧಿಕಾರಿಗಳ ಮಾಹಿತಿ ಪ್ರಕಾರ 511 ಮತಗಟ್ಟೆಗಳಲ್ಲಿ ರಾಜ್ಯ ಪೊಲೀಸರ ಜೊತೆ ಕೇಂದ್ರದ ಭದ್ರತಾ ಪಡೆಗಳ ಸಿಬ್ಬಂದಿ ನಿಯೋಜನೆಗೊಳ್ಳಲಿದ್ದಾರೆ. ಬೇರೆ ಮತಗಟ್ಟೆಗಳಿಗೆ ಹೋಲಿಕೆ ಮಾಡಿದರೆ ಎಡಪಂಥೀಯ ಪ್ರಭಾವ ಇರುವ ಮತಗಟ್ಟೆಗಳಲ್ಲಿ ಭದ್ರತೆ ಹೆಚ್ಚಿರಲಿದೆ.
ತೆಲಂಗಾಣ ರಾಜ್ಯದ ಮುಖ್ಯ ಚುನಾವಣಾ ಆಯುಕ್ತ ವಿಕಾಸ್ ರಾಜ್ ಪಿಟಿಐ ಜೊತೆ ಮಾತನಾಡಿ, "ಈ ಸೂಕ್ಷ್ಮ ಮತಗಟ್ಟೆಗಳಲ್ಲಿ ಸಾಮಾನ್ಯ ಮತಗಟ್ಟೆಗಿಂತ ಹೆಚ್ಚಿನ ಭದ್ರತಾ ಸಿಬ್ಬಂದಿ ಇರಲಿದ್ದಾರೆ. ಇದಕ್ಕಾಗಿಯೇ ಕೇಂದ್ರದ ಭದ್ರತಾ ಪಡೆಗಳ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತದೆ" ಎಂದು ಹೇಳಿದ್ದಾರೆ.
"ಇದುವರೆಗೂ ಮಾವೋವಾದಿಗಳಿಂದ ಯಾವುದೇ ಬೆದರಿಕೆ ಬಂದಿಲ್ಲ. ಶಾಂತಿಯುತವಾಗಿ ಚುನಾವಣೆ ನಡೆಸಬೇಕು ಎಂಬುದು ನಮ್ಮ ಗುರಿಯಾಗಿದೆ. ಪೊಲೀಸರು ಚುನಾವಣೆ ನಡೆಸಲು ಸಕಲ ರೀತಿಯಲ್ಲಿ ಸಜ್ಜಾಗಿದ್ದಾರೆ. ಗುಪ್ತಚರ ಇಲಾಖೆ ಮಾಹಿತಿಗಳ ಮೇಲೆ ನಿಗಾವಹಿಸಲಾಗಿದೆ" ಎಂದು ವಿಕಾಸ್ ರಾಜ್ ತಿಳಿಸಿದ್ದಾರೆ.
ಕೇಂದ್ರದ ಭದ್ರತಾ ಪಡೆಗಳ 100 ತುಕಡಿಗಳು ಚುನಾವಣೆಗಾಗಿ ತೆಲಂಗಾಣ ರಾಜ್ಯಕ್ಕೆ ಆಗಮಿಸಿವೆ. ಚೆಕ್‌ಪೋಸ್ಟ್ ಸೇರಿದಂತೆ ವಿವಿಧ ಕಡೆ ಭದ್ರತೆಗಾಗಿ ಆ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಕೆಲವು ಪ್ರದೇಶಗಳಲ್ಲಿ ರೂಟ್ ಮಾರ್ಚ್ ಮಾಡಿ ಜನರಿಗೆ ಸಹ ಪಡೆಗಳು ಅಭಯ ನೀಡಿವೆ.
ಸದ್ಯದ ಪರಿಸ್ಥಿತಿಯಲ್ಲಿ 10000 ಮತಗಟ್ಟೆಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗುತ್ತಿದೆ. ಚುನಾವಣೆ ಸಮೀಪ ಬಂದಾಗ ಪರಿಸ್ಥಿತಿಗೆ ಅನುಗುಣವಾಗಿ ಮತಗಟ್ಟೆ ಭದ್ರತೆಯ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ. ಚೆಕ್‌ಪೋಸ್ಟ್‌ಗಳಲ್ಲಿ ಸಹ ಕಟ್ಟೆಚ್ಚರ ಕೈಗೊಂಡಿದ್ದು, ಚುನಾವಣಾ ಅಕ್ರಮಕ್ಕೆ ಕಡಿವಾಣ ಹಾಕಲಾಗುತ್ತಿದೆ.
ರಾಜ್ಯದಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ರಾಜ್ಯ ಮತ್ತು ಕೇಂದ್ರದ 21 ಇಲಾಖೆಗಳ ಸಿಬ್ಬಂದಿಗಳ ಜಂಟಿ ತಂಡಗಳು ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರವಹಿಸಿವೆ.












Click it and Unblock the Notifications