ಅಕ್ಟೋಬರ್ 17ರಿಂದ ತೇಜಸ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭ
ನವದೆಹಲಿ, ಅಕ್ಟೋಬರ್ 12 : ತೇಜಸ್ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಅಕ್ಟೋಬರ್ 17ರಿಂದ ಆರಂಭವಾಗಲಿದೆ ಎಂದು ರೈಲ್ವೆ ಇಲಾಖೆ ಘೋಷಣೆ ಮಾಡಿದೆ. ಖಾಸಗಿಯವರು ನಿರ್ವಹಣೆ ಮಾಡುವ ರೈಲು ತೇಜಸ್ ಆಗಿದೆ.
ಭಾರತೀಯ ರೈಲ್ವೆ ಈ ಕುರಿತು ಪ್ರಕಟಣೆ ಹೊರಡಿಸಿದೆ. ದೆಹಲಿ-ಲಕ್ನೋ ಮತ್ತು ಅಹಮದಾಬಾದ್- ಮುಂಬೈ ನಡುವೆ ಅಕ್ಟೋಬರ್ 17ರಿಂದ ತೇಜಸ್ ಎಕ್ಸ್‌ಪ್ರೆಸ್ ರೈಲು ಸಂಚಾರ ನಡೆಸಲಿದೆ ಎಂದು ಹೇಳಿದೆ.
ಅಹಮದಾಬಾದ್-ಮುಂಬೈ ನಡುವೆ ಸಂಚಾರ ನಡೆಸುವ ತೇಜಸ್ ರೈಲಿಗೆ ಎರಡು ಹೊಸ ನಿಲ್ದಾಣಗಳನ್ನು ನೀಡಲಾಗಿದೆ. ಅಂಧೇರಿ ಮತ್ತು ಮುಂಬೈ ನಿಲ್ದಾಣಗಳಲ್ಲಿಯೂ ರೈಲು ನಿಲುಗಡೆಗೊಳ್ಳಲಿದೆ ಎಂದು ರೈಲ್ವೆ ಹೇಳಿದೆ.

ಕೋವಿಡ್ ಲಾಕ್ ಡೌನ್ ಘೋಷಣೆಯಾದ ಸಂದರ್ಭದಲ್ಲಿ ದೇಶದಲ್ಲಿ ರೈಲುಗಳ ಸಂಚಾರ ರದ್ದುಗೊಳಿಸಲಾಗಿತ್ತು. ಬಳಿಕ ಹಂತ-ಹಂತವಾಗಿ ರೈಲುಗಳನ್ನು ಓಡಿಸಲಾಗುತ್ತಿದೆ. ಈಗ ಖಾಸಗಿ ರೈಲುಗಳ ಸಂಚಾರಕ್ಕೂ ಅವಕಾಶ ನೀಡಲಾಗಿದೆ.
ಬೇಡಿಕೆ ಹೆಚ್ಚಿರುವ ಮಾರ್ಗದಲ್ಲಿ ಮಾತ್ರ ರೈಲುಗಳನ್ನು ಓಡಿಸಲಾಗುತ್ತಿದೆ. ಸೆಪ್ಟೆಂಬರ್ 12ರಿಂದ 80 ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ. ಲಾಕ್ ಡೌನ್ ಅವಧಿಯಲ್ಲಿ ತವರು ರಾಜ್ಯಕ್ಕೆ ಹೋಗಿರುವ ಕಾರ್ಮಿಕರು ವಾಪಸ್ ಬರಲು ಅನುಕೂಲವಾಗುವಂತೆ ರೈಲು ಓಡಿಸಲಾಗುತ್ತಿದೆ.
ಪ್ರಸ್ತುತ ಭಾರತೀಯ ರೈಲ್ವೆ 310 ವಿಶೇಷ ರೈಲು, 20 ಜೋಡಿ ಕ್ಲೋನ್ ರೈಲುಗಳನ್ನು ಓಡಿಸಲಾಗುತ್ತಿದೆ. ರೈಲುಗಳ ಸಂಚಾರ ಯಾವಾಗ ಸಾಮಾನ್ಯ ಸ್ಥಿತಿಗೆ ಬರಲಿದೆ? ಎಂಬುದು ಇನ್ನೂ ಅಂತಿಮಗೊಂಡಿಲ್ಲ.
ಲಕ್ನೋ ಮತ್ತು ದೆಹಲಿ ನಡುವೆ ದೇಶದ ಮೊದಲ ಖಾಸಗಿ ರೈಲು ತೇಜಸ್ ಸಂಚಾರವನ್ನು ಆರಂಭಿಸಿತ್ತು. ಮುಂಬೈ-ಅಹಮದಾಬಾದ್ ನಡುವಿನ ತೇಜಸ್ ರೈಲು ಸಂಚಾರಕ್ಕೆ 2020ರ ಜನವರಿಯಲ್ಲಿ ಚಾಲನೆ ಕೊಡಲಾಗಿತ್ತು.












Click it and Unblock the Notifications