ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ ತಮಿಳುನಾಡು ಸಿಎಂ ವಿಜಯ್
ತಮಿಳುನಾಡು ಸರ್ಕಾರವು ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಸರ್ಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಬರೋಬ್ಬರಿ 5 ವರ್ಷಗಳ ಸಡಿಲಿಕೆಯನ್ನು ಘೋಷಿಸಿದೆ. ಇದು ಮುಂದಿನ ಐದು ವರ್ಷಗಳ ಅವಧಿಗೆ ಜಾರಿಯಲ್ಲಿರಲಿದೆ ಎಂದು ಸರ್ಕಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಉದ್ಯೋಗಾಕಾಂಕ್ಷಿಗಳು ಮತ್ತು ಪರೀಕ್ಷಾರ್ಥಿಗಳು ಸಲ್ಲಿಸಿದ್ದ ಸಾಲು ಸಾಲು ಮನವಿಗಳನ್ನು ಆಲಿಸಿದ ತಮಿಳುನಾಡು ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಅವರು ಈ ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ. ಪ್ರಸ್ತುತ ಜಾರಿಯಲ್ಲಿರುವ ವಯೋಮಿತಿ ನಿಯಮಗಳ ಹೊರತಾಗಿಯೂ, ಈ 5 ವರ್ಷಗಳ ಹೆಚ್ಚುವರಿ ಸಡಿಲಿಕೆಯು ಅನ್ವಯವಾಗಲಿದೆ ಎಂದು ಸರ್ಕಾರಿ ಸ್ಪಷ್ಟಪಡಿಸಿದೆ.

ಈ ನಿಯಮ ಹೇಗೆ ಅನ್ವಯ ಆಗಲಿದೆ?
* ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈ ನಿಯಮ ಹೇಗೆ ಅನ್ವಯವಾಗಲಿದೆ ಎಂಬುದಕ್ಕೆ ಸರ್ಕಾರ ಕೆಲವು ಉದಾಹರಣೆಗಳೊಂದಿಗೆ ವಿವರಿಸಿದೆ. ಸಾಮಾನ್ಯ ವರ್ಗ (General Category): ಗ್ರೂಪ್-1 ಪರೀಕ್ಷೆಗಳಿಗೆ ಪ್ರಸ್ತುತ ಇರುವ ಗರಿಷ್ಠ ವಯೋಮಿತಿ 32 ವರ್ಷ. 5 ವರ್ಷಗಳ ಸಡಿಲಿಕೆಯ ನಂತರ ಇದು 37 ವರ್ಷಕ್ಕೆ ಏರಿಕೆಯಾಗಲಿದೆ.
* ಮೀಸಲಾತಿ ವರ್ಗ (Reserved Categories): ಪ್ರಸ್ತುತ ಇರುವ 37 ವರ್ಷಗಳ ಗರಿಷ್ಠ ವಯೋಮಿತಿಯು ನೂತನ ಸಡಿಲಿಕೆಯೊಂದಿಗೆ 42 ವರ್ಷಕ್ಕೆ ಹೆಚ್ಚಾಗಲಿದೆ.
* ವಿಕಲಚೇತನ ಅಭ್ಯರ್ಥಿಗಳು (ವಿಶೇಷ ಚೇತನರು): ಗ್ರೂಪ್-1 ಸೇವೆಗಳಿಗೆ ಸಾಮಾನ್ಯ ವರ್ಗದ ವಿಕಲಚೇತನ ಅಭ್ಯರ್ಥಿಗಳ ವಯೋಮಿತಿ 42 ರಿಂದ 47 ವರ್ಷಕ್ಕೆ ಹಾಗೂ ಮೀಸಲಾತಿ ವರ್ಗದ ವಿಕಲಚೇತನ ಅಭ್ಯರ್ಥಿಗಳ ವಯೋಮಿತಿ 47 ರಿಂದ 52 ವರ್ಷಕ್ಕೆ ಹೆಚ್ಚಾಗಲಿದೆ.
ಗ್ರೂಪ್-2 ಮತ್ತು ಗ್ರೂಪ್-2A ಹುದ್ದೆಗಳ ವಯೋಮಿತಿ
* ಸಾಮಾನ್ಯ ವರ್ಗ: ಗ್ರೂಪ್-2 ಮತ್ತು 2A ಪರೀಕ್ಷೆಗಳಿಗೆ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಪ್ರಸ್ತುತ ಇರುವ ಗರಿಷ್ಠ ವಯೋಮಿತಿ 30 ವರ್ಷ. ನೂತನ ನಿಯಮದಿಂದಾಗಿ ಇದು 35 ವರ್ಷಕ್ಕೆ ಹೆಚ್ಚಾಗಲಿದೆ.
* ಸಾಮಾನ್ಯ ವರ್ಗದ ವಿಕಲಚೇತನರು: ಇವರಿಗೆ ಇದ್ದ 40 ವರ್ಷಗಳ ವಯೋಮಿತಿ ಮಿತಿಯು ಈಗ 45 ವರ್ಷಕ್ಕೆ ಏರಿಕೆಯಾಗಲಿದೆ.
* ಮೀಸಲಾತಿ ವರ್ಗ: ಈ ಹುದ್ದೆಗಳಿಗೆ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಯಾವುದೇ ಗರಿಷ್ಠ ವಯೋಮಿತಿ ಇರುವುದಿಲ್ಲ ಎಂಬ ನಿಯಮವೇ ಮುಂದುವರೆಯಲಿದೆ.
ಎಲ್ಲಾ ವಿಭಾಗಗಳ ಪರೀಕ್ಷೆಗಳಿಗೂ ಅನ್ವಯ
ಸರ್ಕಾರ ನೀಡಿರುವ ಪ್ರಕಟಣೆಯ ಪ್ರಕಾರ, ಗ್ರೂಪ್-1 ಮತ್ತು ಗ್ರೂಪ್-2 ಸೇವೆಗಳಿಗೆ ನೀಡಲಾದ ಈ ಉದಾಹರಣೆಗಳ ಮಾದರಿಯಲ್ಲೇ, ತಮಿಳುನಾಡು ಸರ್ಕಾರದ ಇತರ ಎಲ್ಲಾ ಗ್ರೂಪ್ಗಳ ನೇಮಕಾತಿ ಪರೀಕ್ಷೆಗಳು ಮತ್ತು ಸಾಮಾಜಿಕ ವರ್ಗಗಳಿಗೂ (Social Categories) ಇದೇ 5 ವರ್ಷಗಳ ಹೆಚ್ಚುವರಿ ವಯೋಮಿತಿ ಸಡಿಲಿಕೆ ಸೌಲಭ್ಯ ಅನ್ವಯವಾಗಲಿದೆ.
ಒಟ್ಟಿನಲ್ಲಿ ಹೇಳುವುದಾದರೆ, ಕಳೆದ ಕೆಲವು ವರ್ಷಗಳಿಂದ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದ ಸಾವಿರಾರು ಯುವಜನರಿಗೆ ಹಾಗೂ ವಯೋಮಿತಿ ಮುಗಿಯುವ ಹಂತದಲ್ಲಿದ್ದ ಉದ್ಯೋಗಾಕಾಂಕ್ಷಿಗಳಿಗೆ ಈ ನಿರ್ಧಾರವು ದೊಡ್ಡ ಮಟ್ಟದ ನಿರಾಳತೆ ನೀಡಿದೆ ಅಂದರೆ ತಪ್ಪಾಗಲಾರದು.


Click it and Unblock the Notifications
