ಶ್ರೀಮಂತರ ಪಟ್ಟಿ: ಸೋನಿಯಾ ಆಸ್ತಿ ಘೋಷಿಸುತ್ತಾರಾ?

HuffPost World ಪೋಸ್ಟ್ ಈ ಹಿಂದೆ ಹೇಳಿದ್ದಂತೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆಸ್ತಿಯ ಪ್ರಮಾಣ 2 ಶತಕೋಟಿ ಡಾಲರೋ ಅದು ಬೇರೆ ವಿಷಯ. ಆದರೆ ಈ ಸಂದರ್ಭದಲ್ಲಿ ರಾಜಕಾರಣಿಗಳ ಆಸ್ತಿಪಾಸ್ತಿ ಮತ್ತು ಅವರು ಆಗಾಗ ಅಧಿಕೃತವಾಗಿ ಘೋಷಿಸುವ ಆಸ್ತಿ ವಿವರ ಬಗ್ಗೆ ಚರ್ಚೆ ನಡೆಸುವುದು ಸೂಕ್ತವೆನಿಸುತ್ತದೆ.
ಈಗ್ಗೆ ಹತ್ತು ವರ್ಷಗಳ ಹಿಂದೆಯೇ ಸುಪ್ರೀಂಕೋರ್ಟ್ ಒಂದು ಆದೇಶ ನೀಡಿ, ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ಎಲ್ಲ ರಾಜಕಾರಣಿಗಳೂ ತಮ್ಮ ಆಸ್ತಿ ವಿವರವನ್ನು ಘೋಷಿಸಬೇಕು ಎಂದು ಸೂಚಿಸಿತ್ತು. ಈ ಆದೇಶವನ್ನು ಸಮಸ್ತ ರಾಜಕಾರಣಿಗಳು ಶಿರಸಾವಹಿಸಿ ಪಾಲಿಸಿಕೊಂಡುಬರುತ್ತಿದ್ದಾರೆ. ಆದರೆ ಅದರಲ್ಲಿ ಸತ್ಯವೆಷ್ಟು ಮಿಥ್ಯವೆಷ್ಟು ಎಂಬುದೇ ಮುಖ್ಯ ಸಂಗತಿ.
ಏಕೆಂದರೆ ನಾಮ್ ಕೆ ವಾಸ್ತೆ ಆಸ್ತಿ ವಿವರದ ಅಫಿಡವಿಟ್ ಸಲ್ಲಿಸುವ ಅಭ್ಯರ್ಥಿಗಳು ಮತದಾರನ ಕಣ್ಣಿಗೆ ರಾಚುವಂತೆ/ಕೋರ್ಟಿನ ಕಣ್ಣಿಗೆ ಕಾಣುವಂತೆ ಸರ್ವೋಚ್ಛ ನ್ಯಾಯಾಲಯದ ಸದಾದೇಶಕ್ಕೆ ಚ್ಯುತಿ ಬರುವಂತೆ ಸುಳ್ಳಿನ ಕಂತೆಯನ್ನೇ ಪೋಣಿಸುತ್ತಾರೆ.
ಅನೇಕ ಪ್ರಮುಖ ರಾಜಕಾರಣಿಗಳು ತಮ್ಮ ಆಸ್ತಿಯನ್ನು ಅಲ್ಪ ಪ್ರಮಾಣದಲ್ಲಿ ಘೋಷಿಸುತ್ತಾರೆ. ಸರಿಯಾದ/ ಸಮಗ್ರ ಆಸ್ತಿ ಲೆಕ್ಕವನ್ನು ಮಾತ್ರ ಪ್ರಕಟಿಸುವುದಿಲ್ಲ ಎಂಬುದು ಬಹಿರಂಗ ಸತ್ಯ. ಆ ಪಕ್ಷದವರು ಈ ಪಕ್ಷದವರು ಅಂತಲ್ಲ. ಕಾಂಗ್ರೆಸ್, ಬಿಜೆಪಿ ಹೀಗೆ ಎಲ್ಲ ರಾಜಕೀಯ ಪಕ್ಷಗಳ ಮಹಾಮಹಿಮ ನಾಯಕರು ಮಾಡುವ ಆಸ್ತಿ ಘೋಷಣೆ ಅಪ್ಪಟ ಸುಳ್ಳು ಎಂಬುದು ಮತದಾರನಿಗೆ ಚೆನ್ನಾಗಿ ಮನದಟ್ಟಾದ ವಿಷಯ.
ಮುಂದುವರಿದು ಹೇಳುವುದಾದರೆ ಯಾವೊಬ್ಬ ಜನಪ್ರತಿನಿಧಿಯೂ ಇದುವರೆಗೂ ತನ್ನ ನಿಜ ಆಸ್ತಿಯನ್ನು ಪ್ರಕಟಿಸಿಲ್ಲ ಎನ್ನಬಹುದು. ಅಥವಾ ಅಂಥವರು ಯಾರಾದರೂ ಇದ್ದು, ಅವರ ಕುರಿತು ಮಾಹಿತಿಯಿದ್ದು ನಮಗೆ ಕಳುಹಿಸಿಕೊಟ್ಟರೆ ಖಂಡಿತ ನಾವು ಪ್ರಕಟಿಸುತ್ತೇವೆ. ಆದೇನೇ ಇರಲಿ, ಇನ್ನಾದರೂ ಸರ್ವೋಚ್ಛ ನ್ಯಾಯಾಲಯದ ಸದಾದೇಶಕ್ಕೆ ಚ್ಯುತಿ ಬಾರದಂತೆ ಜನಪ್ರತಿನಿಧಿಗಳು ತಮ್ಮ ನಿಜ ಆಸ್ತಿಯನ್ನು ಘೋಷಿಸವಂತಾಗಲಿ.


Click it and Unblock the Notifications
