ಇಂಡಿಯಾ ಬದಲು ಭಾರತ ಎಂದು ಬದಲಾಯಿಸಿ ಎಂದಿದ್ದ ಅರ್ಜಿ ವಜಾ!
ನವದೆಹಲಿ, ಜೂನ್ 3: ಬ್ರಿಟಿಷರು ನೀಡಿದ ಹೆಸರನ್ನು ತಗೆದು ಹಾಕಿ ದೇಶಕ್ಕೆ ಭಾರತ್ ಅಥವಾ ಹಿಂದೂಸ್ತಾನ್ ಎಂಬ ನಾಮಕರಣ ಮಾಡಬೇಕು ಎಂದು ದೆಹಲಿ ಮೂಲದ ವಕೀಲ ಅಶ್ವಿನ್ ವೈಶ್ಯ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿ ಹಾಕಿದೆ.
"ಇಂಡಿಯಾ'', ''ರಿಪಬ್ಲಿಕ್ ಆಫ್ ಇಂಡಿಯಾ'', ''ಭಾರತ್ ಗಣರಾಜ್ಯ'' ಇತ್ಯಾದಿ ಹೆಸರುಗಳಿಂದ ದೇಶವನ್ನು ಕರೆಯಲಾಗುತ್ತಿದೆ. ಈ ಹೆಸರುಗಳ ಬದಲಾಗಿ ''ಭಾರತ್'' ಒಂದೇ ಹೆಸರನ್ನು ಬಳಸುವಂತೆ ಕೇಂದ್ರ ಸರ್ಕಾರ ಸೂಚಿಸಬೇಕು. ಇದಕ್ಕಾಗಿ ಸಂವಿಧಾನದಲ್ಲಿ ಸೂಕ್ತ ತಿದ್ದುಪಡಿ ಮಾಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.
ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಭಾರತದ ಸಂವಿಧಾನದಲ್ಲಿ 'ಭಾರತ್' ಹೆಸರು ಉಲ್ಲೇಖವಾಗಿದೆ. ಹೆಸರು ಬದಲಾವಣೆ ಮಾಡುವುದು ಕೋರ್ಟ್ ವ್ಯಾಪ್ತಿ ಮೀರಿದ ವಿಷಯ. ನೀವು ಸರ್ಕಾರದ ಸಂಬಂಧ ಪಟ್ಟ ಸಚಿವಾಲಯಯಕ್ಕೆ ಅರ್ಜಿ ಸಲ್ಲಿಸಿ, ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಚಿವಾಲಯವನ್ನು ಕೋರಬಹುದು ಎಂದು ಅರ್ಜಿದಾರಿಗೆ ಮುಖ್ಯ ನ್ಯಾ. ಎಸ್.ಎ. ಬೊಬ್ಡೆ ನೇತೃತ್ವದ ತ್ರಿಸದಸ್ಯ ಪೀಠವು ಸೂಚಿಸಿ, ಅರ್ಜಿಯನ್ನು ವಜಾಗೊಳಿಸಿತು.

ಅರ್ಜಿಯಲ್ಲಿ ಏನಿದೆ?:
ಭಾರತ್ ಅಥವಾ ಹಿಂದೂಸ್ತಾನ್ ಬದಲು ಬ್ರಿಟಿಷರು ನೀಡಿದ ಇಂಡಿಯಾ ಎಂಬ ಹೆಸರನ್ನು ಈಗಲೂ ಬಳಕೆ ಮಾಡಲಾಗುತ್ತಿದೆ. ಈ ಮೂಲಕ ಬ್ರಿಟಿಷ್ ಗುಲಾಮಗಿರಿಯ ಸಂಕೇತವನ್ನು ನಿರ್ಮೂಲನೆ ಮಾಡಲು ಕೇಂದ್ರ ಸರ್ಕಾರ ವಿಫಲವಾಗಿದೆ.
ಆಧಾರ್ ಕಾರ್ಡ್‍ನಲ್ಲಿ 'ಭಾರತ್ ಸರ್ಕಾರ್', ಡ್ರೈವಿಂಗ್ ಲೈಸನ್ಸ್ ನಲ್ಲಿ 'ಇಂಡಿಯನ್ ಯೂನಿಯನ್' ಪಾಸ್ ಪೋರ್ಟ್ ನಲ್ಲಿ 'ರಿಪಬ್ಲಿಕ್ ಆಫ್ ಇಂಡಿಯಾ' ಎಂದು ನಮೂದಿಸಲಾಗಿದೆ. ಏಕರೂಪದ ಹೆಸರು ಇಲ್ಲದ ಕಾರಣ ಗೊಂದಲಗಳು ಉಂಟಾಗಿದೆ ಎಂದು ವಿವರಿಸಿದ್ದರು.
ದೇಶದ ಹೆಸರನ್ನು ಇಂಡಿಯಾ ಬದಲು ಭಾರತ್ ಎಂದು ಬದಲಾಯಿಸುವ ಸಲುವಾಗಿ ಸಂವಿಧಾನದ ಪರಿಚ್ಛೇದ 1ಕ್ಕೆ ತಿದ್ದುಪಡಿ ಮಾಡುವಂತೆ ವಕೀಲ ಅಶ್ವಿನ್ ಪಿಐಎಲ್ ನಲ್ಲಿ ಕೋರಿದ್ದರು.












Click it and Unblock the Notifications