Just in: ಧೂಮಪಾನದ ವಯಸ್ಸು ಹೆಚ್ಚಳ ಕೋರಿದ್ದ ಅರ್ಜಿ ವಜಾ
ನವದೆಹಲಿ, ಜುಲೈ 22: ಧೂಮಪಾನ ಮಾಡುವ ವಯಸ್ಸನ್ನು 18 ರಿಂದ 21ಕ್ಕೆ ಹೆಚ್ಚಿಸಲು ನಿರ್ದೇಶನ ನೀಡುವಂತೆ ಮನವಿ ಮಾಡಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ.
ನ್ಯಾಯಮೂರ್ತಿಗಳಾದ ಎಸ್. ಕೆ. ಕೌಲ್ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ದ್ವಿ-ಸದಸ್ಯ ಪೀಠವು ಇಬ್ಬರು ವಕೀಲರು ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿದೆ.
ಮನವಿಯಲ್ಲಿ ಧೂಮಪಾನ ಮಾಡುವ ವಯಸ್ಸನ್ನು 18 ರಿಂದ 21ಕ್ಕೆ ಹೆಚ್ಚಿಸಲು ನಿರ್ದೇಶನ ನೀಡುವಂತೆ ಮತ್ತು ಚಿಲ್ಲರೆ ಸಿಗರೇಟ್ ಮಾರಾಟವನ್ನು ನಿಷೇಧಿಸುವಂತೆ ಕೋರಿ, ಧೂಮಪಾನ ನಿಯಂತ್ರಣಕ್ಕೆ ಮಾರ್ಗಸೂಚಿಗಳನ್ನು ನೀಡಬೇಕು ಎಂದು ವಕೀಲರಾದ ಶುಭಂ ಅವಸ್ತಿ ಮತ್ತು ಸಪ್ತ ಋಷಿ ಮಿಶ್ರಾ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೋರ್ಟ್‌ಗೆ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ದ್ವಿ-ಸದಸ್ಯ ಪೀಠ ನಿಮಗೆ ಪ್ರಚಾರ ಬೇಕಾದರೆ ಒಳ್ಳೆಯ ಪ್ರಕರಣ ತೆಗೆದುಕೊಂಡು ವಾದ ಮಾಡಿರಿ. ಪ್ರಚಾರ ಹಿತಾಸಕ್ತಿ ಮೊಕದ್ದಮೆ ಹೂಡಬೇಡಿ ಎಂದು ಅರ್ಜಿಯನ್ನು ವಜಾಗೊಳಿಸಿದೆ.
ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಗಳು ಮತ್ತು ಪೂಜಾ ಸ್ಥಳಗಳ ಬಳಿ ಅಂಗಡಿಗಳಲ್ಲಿ ಚಿಲ್ಲರೆ ಸಿಗರೇಟ್ ಮಾರಾಟವನ್ನು ನಿಷೇಧಿಸುವುದರ ಜೊತೆಗೆ ವಾಣಿಜ್ಯ ಸ್ಥಳಗಳಿಂದ ಧೂಮಪಾನ ವಲಯಗಳನ್ನು ತೆಗೆದುಹಾಕಲು ನಿರ್ದೇಶನಗಳನ್ನು ನೀಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.












Click it and Unblock the Notifications