ತಾಯಿಯಾಗುವುದು ಹೆಣ್ಣಿನ ಹಕ್ಕು, ಒತ್ತಾಯ ಸಲ್ಲದು: 30ನೇ ವಾರದಲ್ಲಿಯೂ ಗರ್ಭಪಾತಕ್ಕೆ ಅವಕಾಶ ಕೊಟ್ಟ ಸುಪ್ರೀಂ ಕೋರ್ಟ್
ನವದೆಹಲಿ: 30 ವಾರಗಳ ಗರ್ಭಧಾರಣೆಯಲ್ಲಿದ್ದ 17 ವರ್ಷದ ಅಪ್ರಾಪ್ತ ಬಾಲಕಿಗೆ ವೈದ್ಯಕೀಯ ಗರ್ಭಪಾತಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡುವ ಮೂಲಕ ಮಹತ್ವದ ಹೆಜ್ಜೆ ಇಟ್ಟಿದೆ. ಮಹಿಳೆ ಅಥವಾ ಅಪ್ರಾಪ್ತೆಯನ್ನು ಅವಳು ಇಚ್ಛಿಸದ ಗರ್ಭಧಾರಣೆಯನ್ನು ಮುಂದುವರಿಸಲು ನ್ಯಾಯಾಲಯಗಳು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಮೂಲಕ ಮಹಿಳೆಯರ, ವಿಶೇಷವಾಗಿ ಅಪ್ರಾಪ್ತೆಯರ ಸಂತಾನೋತ್ಪತ್ತಿ ಸ್ವಾಯತ್ತತೆ (Reproductive Autonomy) ಅತ್ಯಂತ ಮಹತ್ವದ್ದು ಎಂದು ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಉಜ್ಜಲ್ ಭುಯನ್ ಅವರನ್ನೊಳಗೊಂಡ ಪೀಠವು ಈ ವಿಚಾರಣೆಯನ್ನು ನಡೆಸಿತು. ಪ್ರಕರಣದಲ್ಲಿ ಬಾಲಕಿ ಗರ್ಭವನ್ನು ಮುಂದುವರಿಸಲು ಸ್ಪಷ್ಟವಾಗಿ ನಿರಾಕರಿಸಿದ್ದಾಳೆ ಎಂಬುದನ್ನು ಗಮನಿಸಿದ ಪೀಠವು ಆಕೆಯ ನಿರ್ಧಾರಕ್ಕೆ ಕಾನೂನಿನ ಮನ್ನಣೆ ನೀಡಿತು.

ಬಾಲಕಿಯ ಇಚ್ಛೆಗೆ ಆದ್ಯತೆ
ಈ ಪ್ರಕರಣದಲ್ಲಿ ಆಸ್ಪತ್ರೆಯ ವೈದ್ಯಕೀಯ ಮಂಡಳಿ ನೀಡಿದ ವರದಿಯಂತೆ, ಗರ್ಭವನ್ನು ಮುಂದುವರಿಸಿದರೆ ತಾಯಿ ಅಥವಾ ಮಗು ಜೀವಕ್ಕೆ ಅಪಾಯವಿಲ್ಲ ಎಂದು ಹೇಳಲಾಗಿತ್ತು. ಆದರೆ ನ್ಯಾಯಮೂರ್ತಿಗಳು ಕೇವಲ ವೈದ್ಯಕೀಯ ಅಂಶಗಳಷ್ಟೇ ನಿರ್ಣಾಯಕವಲ್ಲ, ಬಾಲಕಿಯ ಮಾನಸಿಕ ಸ್ಥಿತಿ, ಭವಿಷ್ಯ ಮತ್ತು ಆಕೆಯ ಇಚ್ಛೆಯೂ ಅತ್ಯಂತ ಮುಖ್ಯ ಎಂದು ಅಭಿಪ್ರಾಯಪಟ್ಟರು.
"ಇಂತಹ ಪ್ರಕರಣಗಳು ನೈತಿಕ ಹಾಗೂ ಕಾನೂನು ಮಟ್ಟದಲ್ಲಿ ಕಠಿಣ ಪ್ರಶ್ನೆಗಳನ್ನು ಎತ್ತುತ್ತವೆ. ಆದರೆ ಮಹಿಳೆ ಅಥವಾ ಅಪ್ರಾಪ್ತೆ ಬಯಸದ ಗರ್ಭಧಾರಣೆಯನ್ನು ಮುಂದುವರಿಸಲು ಒತ್ತಾಯಿಸುವುದು ಸರಿಯಲ್ಲ. ಸುರಕ್ಷಿತ ವೈದ್ಯಕೀಯ ಗರ್ಭಪಾತಕ್ಕೆ ಅವಕಾಶ ನೀಡದಿದ್ದರೆ, ಜನರು ಅಕ್ರಮ ಹಾಗೂ ಅಪಾಯಕಾರಿ ಚಿಕಿತ್ಸೆಗಳತ್ತ ತಿರುಗುವ ಸಾಧ್ಯತೆ ಇದೆ" ಎಂದು ನ್ಯಾಯಮೂರ್ತಿ ನಾಗರತ್ನ ಅವರು ಎಚ್ಚರಿಸಿದರು.
ಎಂಟಿಪಿ ಕಾಯ್ದೆಯ ಪ್ರಕಾರ, ಭಾರತದಲ್ಲಿ ವೈದ್ಯಕೀಯ ಗರ್ಭಪಾತಕ್ಕೆ 2021ರ ವೈದ್ಯಕೀಯ ಗರ್ಭಪಾತ (ತಿದ್ದುಪಡಿ) ಕಾಯ್ದೆ ಅವಕಾಶ ಕಲ್ಪಿಸಿದೆ. 20 ವಾರಗಳವರೆಗೆ ಒಬ್ಬ ವೈದ್ಯರ ಅಭಿಪ್ರಾಯದೊಂದಿಗೆ ಗರ್ಭಪಾತ ಸಾಧ್ಯವಿದೆ. ಅತ್ಯಾಚಾರ ಸಂತ್ರಸ್ತರು, ಅಪ್ರಾಪ್ತರು, ಅಂಗವಿಕಲ ಮಹಿಳೆಯರು ಸೇರಿ ನಿರ್ದಿಷ್ಟ ವರ್ಗಗಳಿಗೆ 20ರಿಂದ 24 ವಾರಗಳವರೆಗೆ ಇಬ್ಬರು ವೈದ್ಯರ ಅಭಿಪ್ರಾಯ ಅಗತ್ಯ. ವಿವಾಹಿತ ಮತ್ತು ಅವಿವಾಹಿತ ಮಹಿಳೆಯರಿಗೂ ಈ ಕಾಯ್ದೆ ಅನ್ವಯಿಸುತ್ತದೆ.
ತೀರ್ಪಿನ ಮಹತ್ವ
ಈ ತೀರ್ಪು ಪ್ರತಿಯೊಂದು ಪ್ರಕರಣವೂ ಅದರ ಸನ್ನಿವೇಶಗಳ ಆಧಾರದ ಮೇಲೆ ಪರಿಗಣಿಸಬೇಕು ಎಂಬುದನ್ನು ಸ್ಪಷ್ಟಪಡಿಸಿದೆ. ವಿಶೇಷವಾಗಿ ಅಪ್ರಾಪ್ತ ಬಾಲಕಿಯರ ವಿಷಯದಲ್ಲಿ ಅವರ ಸುರಕ್ಷತೆ, ಗೌರವ ಮತ್ತು ಭವಿಷ್ಯವನ್ನು ಕಾಪಾಡುವುದು ನ್ಯಾಯಾಲಯಗಳ ಜವಾಬ್ದಾರಿ ಎಂಬ ಸಂದೇಶವನ್ನು ಸುಪ್ರೀಂ ಕೋರ್ಟ್ ನೀಡಿದೆ. ಈ ಮೂಲಕ ಮಹಿಳೆಯರ ದೇಹದ ಮೇಲೆ ಅವರದೇ ಹಕ್ಕು ಎಂಬ ತತ್ವವನ್ನು ಪುನಃ ಒತ್ತಿ ಹೇಳಿರುವ ಸುಪ್ರೀಂ ಕೋರ್ಟ್ ತೀರ್ಪು, ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳಿಗೆ ಮಹತ್ವದ ಕಾನೂನು ದಿಕ್ಕು ನೀಡುವ ಸಾಧ್ಯತೆ ಇದೆ.
---------
ಕ್ರಿಕೆಟ್ ಬಗ್ಗೆ ನಿಮಗೇನು ಬೇಕೋ ಅದೆಲ್ಲ 'ಮೈಖೇಲ್' ವೆಬ್‌ಸೈಟ್‌ನಲ್ಲಿದೆ
ಕ್ರಿಕೆಟ್ ಆಟವನ್ನು ಲೈವ್ ನೋಡುವುದಷ್ಟೇ ಅಲ್ಲ, ರಿಪೋರ್ಟ್ ಓದುವುದೂ ಸಹ ಅಭಿಮಾನಿಗಳ ಪಾಲಿಗೆ ಸುಖ. ಕನ್ನಡದಲ್ಲಿ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ 'ಮೈಖೇಲ್' ಜಾಲತಾಣದಲ್ಲಿ ಲಭ್ಯ. ಇಲ್ಲಿ ಲೈವ್ ಸ್ಕೋರ್, ಬ್ರೇಕಿಂಗ್ ನ್ಯೂಸ್, ಪಂದ್ಯಗಳ ವೇಳಾಪಟ್ಟಿ, ಮ್ಯಾಚ್ ರಿಪೋರ್ಟ್, ಆಟಗಾರರ ಹೇಳಿಕೆ, ವಿವಾದ, ಗಾಸಿಪ್, ಪ್ರೊಫೈಲ್, ಆಕರ್ಷಕ ಫೋಟೊಗಳು, ಇನ್‌ಫೋಗ್ರಾಫಿಕ್ಸ್ ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಬಯಸುವ ಎಲ್ಲವೂ ಇದೆ. ಕ್ರಿಕೆಟ್ ಬಗ್ಗೇ ಏನೇ ಬೇಕಿದ್ದರೂ 'ಮೈಖೇಲ್' ವೆಬ್‌ಸೈಟ್ ನೋಡಿ. ನೆನಪಿರಲಿ: ಕನ್ನಡದಲ್ಲಿ ಕ್ರಿಕೆಟ್, 'ಮೈಖೇಲ್' ವೆಬ್‌ಸೈಟ್ ಬೆಸ್ಟ್.
ಕ್ರೀಡಾಲೋಕದ ತಾಜಾ ಮಾಹಿತಿಗಾಗಿ ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲೂ ಮೈಖೇಲ್ ಫಾಲೊ ಮಾಡಿ.












Click it and Unblock the Notifications