Breaking; ಹಿಮಾಚಲ ಸಿಎಂ ಆಗಿ ಸುಖ್ವಿಂದರ್ ಸಿಂಗ್ ಸುಖು ಪ್ರಮಾಣ ವಚನ
ನವದೆಹಲಿ, ಡಿಸೆಂಬರ್ 11; ಹಿಮಾಚಲ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಸುಖ್ವಿಂದರ್ ಸಿಂಗ್ ಸುಖು ಪ್ರಮಾಣ ವಚನ ಸ್ವೀಕರಿಸಿದರು. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 40 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.
ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಸುಖ್ವಿಂದರ್ ಸಿಂಗ್ ಸುಖು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಮುಕೇಶ್ ಅಗ್ನಿಹೋತ್ರಿ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ನೂತನ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಸೇರಿದಂತೆ ಇತರ ನಾಯಕರು ಪಾಲ್ಗೊಂಡಿದ್ದರು.
Congress leader Sukhwinder Singh Sukhu takes oath as the chief minister of Himachal Pradesh at a ceremony in Shimla pic.twitter.com/ImX8kmkl3n
— ANI (@ANI) December 11, 2022
ಸುಖ್ವಿಂದರ್ ಸಿಂಗ್ ಸುಖು ಹಿಮಾಚಲ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದರು. ಒಟ್ಟು 4 ಬಾರಿ ಶಾಸಕರಾಗಿರುವ ಸುಖ್ವಿಂದರ್ ಸಿಂಗ್ ಸುಖು ಕಣಿವೆ ರಾಜ್ಯ ಹಿಮಾಚಲ ಪ್ರದೇಶವನ್ನು ಮುನ್ನಡೆಸಲಿದ್ದಾರೆ.
ಶನಿವಾರ ಕಾಂಗ್ರೆಸ್ ಹೈಕಮಾಂಡ್ ಸುಖ್ವಿಂದರ್ ಸಿಂಗ್ ಸುಖು ಹಿಮಾಚಲ ಪ್ರದೇಶದ ನೂತನ ಮುಖ್ಯಮಂತ್ರಿ ಎಂದು ಘೋಷಣೆ ಮಾಡಿತ್ತು. 2017ರ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಅಧಿಕಾರ ನಡೆಸುತ್ತಿರುವ ಪಕ್ಷ ಮುಂದಿನ ಚುನಾವಣೆಯಲ್ಲಿ ವಿರೋಧ ಪಕ್ಷದಲ್ಲಿ ಕೂರುತ್ತದೆ ಎಂಬುದು ರಾಜ್ಯದಲ್ಲಿ ಮತ್ತೊಮ್ಮೆ ಸಾಬೀತಾಗಿದೆ.
58 ವರ್ಷದ ಸುಖ್ವಿಂದರ್ ಸಿಂಗ್ ಸುಖು ರಾಹುಲ್ ಗಾಂಧಿ ಆಪ್ತರು. ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿದ್ದರು. ವಿದ್ಯಾರ್ಥಿ ನಾಯಕರಾಗಿ, ರಾಜ್ಯ ಕಾಂಗ್ರೆಸ್ ಸಾರಥಿಯಾಗಿದ್ದ ಅವರು ಈಗ ರಾಜ್ಯದ ಉನ್ನತ ಹುದ್ದೆಗೆ ಏರಿದ್ದಾರೆ.
ಹಮೀರ್‌ಪುರ್ ಜಿಲ್ಲೆಯಿಂದ ಪ್ರೇಮ್ ಕುಮಾರ್ ಧುಮಾಲ್ ಬಳಿಕ ರಾಜ್ಯದ ಉನ್ನತ ಹುದ್ದೆಗೆ ಏರಿದ 2ನೇ ನಾಯಕ ಎಂಬ ಕೀರ್ತಿ ಸುಖ್ವಿಂದರ್ ಸಿಂಗ್ ಸುಖು ಅವರದ್ದಾಗಿದೆ. ಹಮೀರ್‌ಪುರ್ ಜಿಲ್ಲೆಯ 5 ಕ್ಷೇತ್ರಗಳಲ್ಲಿ 4ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸುವಲ್ಲಿ ಸುಖು ಅವರ ಪಾತ್ರ ಪ್ರಮುಖವಾಗಿದೆ.












Click it and Unblock the Notifications