ದೇಶದಲ್ಲಿ ಕೋವಿಡ್ ನಂತರ ಈ ಕಾರಣಕ್ಕೆ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚಳ!
ಕೋವಿಡ್ ಸಾಂಕ್ರಾಮಿಕ ರೋಗದ ನಂತರ ಕರ್ನಾಟಕವೂ ಸೇರಿದಂತೆ ದೇಶದಾದ್ಯಂತ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ ಎನ್ನುವ ಆತಂಕದ ನಡುವೆಯೇ ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ(National Crime Records Bureau)ದ ಅಂಕಿ - ಅಂಶಗಳು ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದೆ. ಹೌದು ಕೋವಿಡ್ ಸಾಂಕ್ರಾಮಿಕ ರೋಗದ ನಂತರ ಜನರಲ್ಲಿ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ ಅಥವಾ ದೈಹಿಕ ಕ್ಷೀಣತೆ, ಆರೋಗ್ಯ ವೈಪರೀತ್ಯಗಳು ಎದುರಾಗುತ್ತಿವೆ ಎನ್ನುವ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.
ಅಲ್ಲದೇ ಕೋವಿಡ್ ಲಸಿಕೆಯ ಪರಿಣಾಮ ಬೀರಿದೆಯೇ ಎನ್ನುವ ಆತಂಕವೂ ಜನರಲ್ಲಿ ಇದೆ. ಆದರೆ ಈ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆಯು ಈಚೆಗೆ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿತ್ತು. ಇದೀಗ ದೇಶದಲ್ಲಿ ಮತ್ತೊಂದು ಗಂಭೀರವಾದ ಸಮಸ್ಯೆ ಎದುರಾಗಿದೆ. ಇದು ಹೃದಯಾಘಾತ ಪ್ರಕರಣಗಳಿಗೆ ಸಂಬಂಧಿಸಿದ್ದಲ್ಲ ಬದಲಿಗೆ, ಆರ್ಥಿಕ ಸಂಕಷ್ಟದಿಂದ ಎದುರಾಗಿರುವ ಸಮಸ್ಯೆ. ಏನು ಆ ಸಮಸ್ಯೆ, ಜನರ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದು ಯಾವ ಕಾರಣಕ್ಕೆ ಹಾಗೂ ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ ವರದಿಯಲ್ಲಿ ಏನಿದೆ ಎನ್ನುವ ವಿವರ ಇಲ್ಲಿದೆ.

ಕೋವಿಡ್‌ನ ನಂತರ ಹಲವರ ಜೀವನದಲ್ಲಿ ಅಲ್ಲೋಲ ಕಲ್ಲೋಲವೇ ಆಗಿದೆ. ಕರ್ನಾಟಕವೂ ಸೇರಿದಂತೆ ದೇಶದ ಹಲವರು ತಮ್ಮ ಆತ್ಮೀಯರು ಹಾಗೂ ಕುಟುಂಬದವರನ್ನು ಕಳೆದುಕೊಂಡಿದ್ದಾರೆ. ಆದರೆ ಈ ಸಾಂಕ್ರಾಮಿಕ ರೋಗ ಈಗ ಕಡಿಮೆಯಾಗಿದ್ದರೂ (ರೂಪಾಂತರ ತಳಿಗಳು ವರದಿ ಆಗುವುದು ಇದೆ) ಇದರಿಂದ ಜನರಿಗೆ ಸಂಕಷ್ಟ ಮಾತ್ರ ತಪ್ಪುತ್ತಿಲ್ಲ. ಹೌದು ಕೋವಿಡ್ ಸಾಂಕ್ರಾಮಿಕ ರೋಗದ ಬಳಿಕ ಆತ್ಮಹತ್ಯೆಗಳು, ಅದರಲ್ಲೂ ಆರ್ಥಿಕ ಸಂಕಷ್ಟದ ಕಾರಣಕ್ಕಾಗಿ ಆತ್ಮಹತ್ಯೆಗಳು ಅವ್ಯಾಹತವಾಗಿ ನಡೆಯುತ್ತಿವೆ. ಈ ಸಂಖ್ಯೆ ಇನ್ನೂ ತಗ್ಗಿಲ್ಲ ಎಂದು NCRB ಅಂಕಿ-ಅಂಶಗಳು ತೋರಿಸುತ್ತಿವೆ. ಈ ವಿಚಾರದ ಬಗ್ಗೆ ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರತಿದಿನ ಎಚ್ಚರಿಸುತ್ತಾ ಹೋದಂತೆ, ಇದನ್ನು ಗಮನಿಸುವವರಿಗೆ ಅಭ್ಯಾಸ ಆಗುತ್ತಾ ಸಾಗುತ್ತದೆಯೇ ಹೊರತು ನಮ್ಮ ಸುತ್ತ ಏನೋ ಅಸಹಜವಾದದ್ದು ನಡೆಯುತ್ತಿದೆ ಅನ್ನಿಸುವುದೇ ಇಲ್ಲ. ಪ್ರತಿದಿನ ಸಾಯುವವರಿಗೆ ಅಳುವವರು ಯಾರು ಎಂಬ ಯೋಚನೆ ಬರುವುದು ಸಹಜ. ಕುಸಿದು/ಹೃದಯಾಘಾತದ ಸಾವುಗಳಿಗೂ ಇದೇ ಮಾತು ಅನ್ವಯ. ಯಾರಿಗೂ ಬಿದ್ದೇ ಹೋಗಿಲ್ಲ.
ಆರ್ಥಿಕ ಸಂಕಷ್ಟಕ್ಕೆ ಸಂಬಂಧಿಸಿದಂತೆ, ಕರ್ನಾಟಕದಲ್ಲಿ ಗ್ಯಾರಂಟಿ ಹೆಸರಲ್ಲಿ ಬಂದಿರುವ ಯೂನಿವರ್ಸಲ್ ಬೇಸಿಕ್ ಇನ್‌ಕಂ ವ್ಯವಸ್ಥೆ ಎಷ್ಟು ಮನಗಳಲ್ಲಿ ಜೀವ ಉಳಿಸಿದೆ ಎಂಬುದು ಅಧ್ಯಯನ ಯೋಗ್ಯ. ಇಲ್ಲಿ, ಈ ಮೂಲಭೂತ ಸವಲತ್ತುಗಳನ್ನು ಮೀರಿದ ಆರ್ಥಿಕ ಸಂಕಷ್ಟಗಳಲ್ಲಿ ಸಿಲುಕಿಕೊಂಡವರು ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ತಿಂಗಳು-ಎರಡು ತಿಂಗಳಿಗೊಂದು ಇಂತಹ ಘಟನೆಗಳನ್ನು ನಾನು ಕರಾವಳಿಯಲ್ಲಿಯೇ ಗಮನಿಸಿದ್ದೇನೆ. ಮತ್ತೊಮ್ಮೆ ಹೇಳುತ್ತೇನೆ, ಮನುಷ್ಯ ಜೀವಗಳು ಈ ಹಿಂದೆ ಯಾವತ್ತೂ ಇಷ್ಟೊಂದು ಸಸ್ತಾ ಆಗಿರಲಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
1966 ರಲ್ಲಿ ಮೊದಲ ಬಾರಿಗೆ ಪ್ರಕಟವಾದ ADSI ವರದಿಯ ನಂತರ ಆತ್ಮಹತ್ಯೆ ಪ್ರಮಾಣವು ಗಣನೀಯವಾಗಿ ಏರಿಕೆಯನ್ನು ಕಂಡಿದೆ. 2022 ರಲ್ಲಿ ಆತ್ಮಹತ್ಯೆ ಪ್ರಮಾಣವು 2021ಕ್ಕೆ ಹೋಲಿಕೆ ಮಾಡಿದರೆ, 3.3% ರಷ್ಟು ಹೆಚ್ಚಾಗಿದೆ. 100,000 ಜನಸಂಖ್ಯೆಗೆ 12 ರಿಂದ 12.4 ಕ್ಕೆ (1,64,033 ರಿಂದ 1,70,924) ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ. ಈ ಪ್ರಮಾಣವು 56 ವರ್ಷಗಳಲ್ಲಿ ದಾಖಲಾದ ಅತ್ಯಧಿಕ ಎಂದು ವರದಿಯಾಗಿದೆ.












Click it and Unblock the Notifications