Success Story: ಫೀಸ್ ಕಟ್ಟಲಾಗದೆ ಶಾಲೆ ಬಿಟ್ಟ ಹುಡುಗನಿಂದಲೇ ಇಂದು ಗುರುಕುಲ ನಿರ್ಮಾಣ! ಇದು ಸಾಧನೆಯ ಕಥೆ
ಎಲ್ಲರೂ ಹುಟ್ಟು ಶ್ರೀಮಂತರಾಗಿರುವುದಿಲ್ಲ. ಕೆಲವರಿಗೆ ಎಷ್ಟು ಬಡತನವಿರುತ್ತದೆ ಎಂದರೆ ಒಪ್ಪೊತ್ತಿನ ಊಟಕ್ಕೂ ಕಷ್ಟಪಡುತ್ತಿರುತ್ತಾರೆ. ಇನ್ನು ಓದು, ಶಿಕ್ಷಣ ಬರೀ ಕನಸು. ಈ ವ್ಯಕ್ತಿ ಬಾಲ್ಯವನ್ನು ಕಳೆದದ್ದು ಬಡತನದಲ್ಲಿಯೇ. ಓದುವ ಆಸೆ, ಜೀವನದಲ್ಲಿ ಏನನ್ನಾದರೂ ಸಾಧಿಸಲೇ ಬೇಕು ಎನ್ನುವ ಛಲ. ಆದರೆ ಫೀಸ್ ಕಟ್ಟುವುದಕ್ಕೆ ದುಡ್ಡು ಬೇಕಲ್ಲ. ಅದು ಇಲ್ಲ ಎಂದಾಗ ಶಾಲೆಯಿಂದ ಹೊರ ಹೋಗುವಂತೆ ಹೇಳಿದ್ದರಂತೆ.
ಫೀಸ್ ಕಟ್ಟುವುದಕ್ಕೆ ದುಡ್ಡಿಲ್ಲದ ಸ್ಥಿತಿ
ಇವರ ಹೆಸರು ಸಚನ್. ತಂದೆ ಟೈಲರ್ ತಾಯಿ ಗೃಹಿಣಿ. ಕಾನ್ಪುರದ ಒಂದು ಸಾಧಾರಣ ಕುಟುಂಬ. ಸಚನ್ ತಂದೆ ಮನೆಯ ಎಲ್ಲಾ ಖರ್ಚುಗಳನ್ನು ನೋಡಿಕೊಳ್ಳಬೇಕಾಗಿತ್ತು. ಮನೆಯ ಖರ್ಚುಗಳನ್ನು ನೀಗಿಸಿ ಮಗನ ಶಿಕ್ಷಣಕ್ಕೆ ಬೇಕಾಗುವಷ್ಟು ಹಣ ಅವರ ಬಳಿ ಉಳಿಯುತ್ತಲೇ ಇರಲಿಲ್ಲ. ಪ್ರತೀ ಸಲ ಸಚನ್ ಶಿಕ್ಷಣದ ವೆಚ್ಚ ನಿಭಾಯಿಸಲು ಹೆಣಗಾಡುತ್ತಿದ್ದರು. ಹೀಗೆಯೇ ಮುಂದೊಂದು ದಿನ ಶಾಲೆಯ ಫೀಸ್ ಕಟ್ಟುವುದಕ್ಕೆ ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು.

Success Story:ಐದು ಮಕ್ಕಳೊಂದಿಗೆ ಶುರುವಾದ ಜರ್ನಿ
ಶಾಲೆಯ ಫೀಸ್ ಕಟ್ಟಲು ಸಾಧ್ಯವಾಗದ ಕಾರಣ ಸಚನ್‌ನನ್ನು ಶಾಲೆಯಿಂದ ಹೊರ ಹಾಕಲಾಯಿತು. ಆದರೆ, ಮತ್ತೆ ಫಿಸ್ ಕಟ್ಟಿ ಶಾಲೆಗೆ ವಾಪಸ ಬಂದರೂ ಆ ಕಹಿ ನೆನಪು ಮಾತ್ರ ಅವರ ಮನಸ್ಸಿನಿಂದ ಮಾಸಲೇ ಇಲ್ಲ. ಹಾಗಾಗಿ ತಾನು ಅನುಭವಿಸಿದ ಕಷ್ಟ ಬೇರೆ ಮಕ್ಕಳಿಗೆ ಬರಬಾರದು ಎನ್ನುವ ಯೋಚನೆ ಅವರಿಗೆ ಬಂತು. ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವ ತಡೆಯೂ ಬಾರದಂತೆ ಏನಾದರೂ ಮಾಡಲೇ ಬೇಕು ಎನ್ನುವ ನಿರ್ಧಾರಕ್ಕೆ ಬರುತ್ತಾರೆ ಸಚನ್.
ಪರಿಣಾಮವಾಗಿ 2019ರಲ್ಲಿ, ಸಚನ್ ಕಾನ್ಪುರದಲ್ಲಿ ಗುರುಕುಲಂ-ಖುಷಿಯೋನ್ ವಾಲಾ ಶಾಲೆಯನ್ನು ಪ್ರಾರಂಭಿಸಿದರು. ಇವರ ಈ ಜರ್ನಿ ಶುರುವಾಗಿದ್ದು ಕೇವಲ ಐದು ಮಕ್ಕಳು ಮತ್ತು ವೈಟ್‌ಬೋರ್ಡ್‌ನೊಂದಿಗೆ. ಹತ್ತಿರದ ಸ್ಲಂಗಳ ಮಕ್ಕಳಿಗೆ ಕಲಿಸುವ ಸಣ್ಣ ಪ್ರಯತ್ನವಾಗಿ ಇವರ ಈ ಕೆಲಸ ಪ್ರಾರಂಭವಾಯಿತು. ನಂತರ ದಿನ ಕಳೆಯುತ್ತಿದ್ದ ಹಾಗೆ ಈ ವಿದ್ಯಾರ್ಥಿಗಳ ಸಂಖ್ಯೆ ನೂರು ದಾಟುತ್ತದೆ. ಎಲ್ಲಾ ವಿದ್ಯಾರ್ಥಿಗಳಿಗೆ ಫ್ರೀ ಶಿಕ್ಷಣ ನೀಡುತ್ತಾರೆ.
ಇವರು ಮರದ ಕೆಳಗೆ ಈ ಕಾರ್ಯವನ್ನು ಶುರು ಮಾಡಿದಾಗ ಇವರ ಬಳಿ ದೊಡ್ಡ ಕಟ್ಟಡವಾಗಲಿ, ಶಿಕ್ಷಕರ ತಂಡವಾಗಲಿ ಅಥವಾ ಕೈ ತುಂಬಾ ಹಣವಾಗಲಿ ಯಾವುದೂ ಇರಲಿಲ್ಲ. ಅಮ್ಮನಿಂದ 300 ರೂ. ತೆಗೆದುಕೊಂಡು ಈ ಕೆಲಸಕ್ಕೆ ಕೈ ಹಾಕುತ್ತಾರೆ. ಉಚಿತ ತರಗತಿಗಳನ್ನು ನೀಡುವ ಬಗ್ಗೆ ಕರಪತ್ರಗಳನ್ನು ಮುದ್ರಿಸಲು ಆ ಹಣ ಉಪಯೋಗಕ್ಕೆ ಬಂತು.
ಬಾಡಿಗೆ ರೂಂಗೆ ಕ್ಲಾಸ್ ಶಿಫ್ಟ್
ಮೊದಲ ದಿನ, ಕೇವಲ ಐದು ಮಂದಿ ಮಾತ್ರ ಇವರ ಶಾಲೆಗೆ ಬಂದರು. ಆರಂಭದಲ್ಲಿ ತರಗತಿಗಳು ಮರದ ಕೆಳಗೆ ನಡೆಯುತ್ತಿದ್ದವು. ಸುಮಾರು ಆರು ತಿಂಗಳೊಳಗೆ, ಮಕ್ಕಳ ಸಂಖ್ಯೆ ಸುಮಾರು 70ಕ್ಕೆ ಏರಿತು. ವಿದ್ಯಾರ್ಥಿಗಳ ಸಂಖ್ಯೆ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಈ ಕ್ಲಾಸ್ ಅನ್ನು ಬಾಡಿಗೆ ಕೋಣೆಗೆ ಸ್ಥಳಾಂತರಿಸಲಾಯಿತು.
ಸಾಮಾಜಿಕ ಮಾಧ್ಯಮದಲ್ಲಿ ಸದ್ದು
ಆದರೆ, ಕೋವಿಡ್-19 ಸಾಂಕ್ರಾಮಿಕ ರೋಗ ಈ ಪ್ರಯತ್ನಕ್ಕೆ ಸ್ವಲ್ಪ ಮಟ್ಟಿನ ಹಿನ್ನೆಡೆ ಉಂಟು ಮಾಡಿತು. ಬಾಡಿಗೆಗೆ ಪಡೆದ ಜಾಗವನ್ನು ಬಿಟ್ಟುಕೊಡಬೇಕಾಯಿತು ಇದರಿಂದ ತರಗತಿಗಳಿಗೆ ಅಡ್ಡಿಯಾಯಿತು. ಸಚನ್ ತನ್ನ ಕೆಲಸದ ಬಗ್ಗೆ ಜನರಿಗೆ ತಿಳಿಸಲು ಸಾಮಾಜಿಕ ಮಾಧ್ಯಮದತ್ತ ಮುಖ ಮಾಡಿದರು. ಗುರುಕುಲಂ ಬಗ್ಗೆ ಮಾಡುತ್ತಿದ್ದ ವೀಡಿಯೊಗಳು ಗಮನ ಸೆಳೆಯಲು ಪ್ರಾರಂಭಿಸಿದವು. ಹೀಗೆ ದೇಣಿಗೆಗಳು ಮತ್ತು ಬೆಂಬಲ ಹರಿದು ಬಂತು. 2026ರ ಹೊತ್ತಿಗೆ, ಸಚನ್ ಅವರ ಗುರುಕುಲಂ ಸುಮಾರು ನಾಲ್ನೂರು ಮಕ್ಕಳಿಗೆ ಶಿಕ್ಷಣ ಕೊಡುವುದಕ್ಕೆ ಶುರು ಮಾಡಿತು.
ಈ ಶಾಲೆಯಲ್ಲಿ ಮಕ್ಕಳಿಗೆ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಸಂಗೀತ, ರಂಗಭೂಮಿ, ಸಾಕ್ಷ್ಯಚಿತ್ರಗಳು, ಯೋಗ, ಧ್ಯಾನ ಮತ್ತು ಡಿಬೆಟ್‌ಗಳಂತಹ ಚಟುವಟಿಕೆಗಳನ್ನು ಕೂಡಾ ನಡೆಸಲಾಗ್ತದೆ. ಪ್ರಾಯೋಗಿಕ ಕೌಶಲ್ಯಗಳು, ಮನೋವಿಜ್ಞಾನ, ವ್ಯವಹಾರ ಕೌಶಲ್ಯಗಳು, ರೊಬೊಟಿಕ್ಸ್, ಕೃತಕ ಬುದ್ಧಿಮತ್ತೆ, ಕರಕುಶಲ ವಸ್ತುಗಳು, ತೋಟಗಾರಿಕೆ ಮತ್ತು ಕೃಷಿಯನ್ನು ಒಳಗೊಂಡಿರುವ ಪಾಠಗಳನ್ನು ಕೂಡಾ ಇಲ್ಲಿ ಕಲಿಸುತ್ತಾರೆ.
ಆರ್ಥಿಕವಾಗಿ ಹಿಂದುಳಿದವರೇ ಹೆಚ್ಚು
ಗುರುಕುಲಂನಲ್ಲಿರುವ ಹೆಚ್ಚಿನ ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಮತ್ತು ಹತ್ತಿರದ ಕೊಳೆಗೇರಿಯಿಂದ ಬಂದವರು. ಸಾಂಪ್ರದಾಯಿಕ ಶಾಲೆಗಳನ್ನು ಬದಲಾಯಿಸುವುದು ಇದರ ಉದ್ದೇಶವಲ್ಲ. ಈಗಾಗಲೇ ಶಾಲೆಗೆ ಹೋಗುವ ಮಕ್ಕಳು ತಮ್ಮ ನಿಯಮಿತ ತರಗತಿಗಳ ನಂತರ ಗುರುಕುಲಕ್ಕೆ ಬರಬಹುದು. ಈ ಉಪಕ್ರಮವು ಶಿಕ್ಷಣಕ್ಕೆ ಸೀಮಿತ ಪ್ರವೇಶವನ್ನು ಹೊಂದಿರುವವರಿಗೆ ಕಲಿಕೆಯ ಅವಕಾಶಗಳನ್ನು ಒದಗಿಸುತ್ತದೆ. ಇಲ್ಲಿ ಮಕ್ಕಳಿಗೆ ಮನೆಯ ವಾತಾವರಣವನ್ನೇ ಕಲ್ಪಿಸಿ ಕೊಡಲಾಗುತ್ತದೆ.
ಸುಲಭವಾಗಿರಲಿಲ್ಲ ಈ ಸಾಧನೆ
ಅಂದ ಹಾಗೆ ಶಿಕ್ಷಕನಾಗುವ ಸಚನ್ ಹಾದಿ ಸರಳವಾಗಿರಲಿಲ್ಲ. ಶಾಲಾ ಶಿಕ್ಷಣ ಮುಗಿದ ನಂತರ, ಅವರು ದಾಬಾಗಳು ಮತ್ತು ಹೋಟೆಲ್‌ಗಳಲ್ಲಿ ಕೆಲಸ ಮಾಡಿದರು. ನಂತರ ಐಸ್ ಕ್ರೀಮ್ ಕಾರ್ಖಾನೆಯಲ್ಲಿ ಕೆಲಸ ಮಾಡಿದರು. ತತ್ವಶಾಸ್ತ್ರದಲ್ಲಿ ಪದವಿ ಪಡೆದರು. ಯಾವ ವೃತ್ತಿಯನ್ನು ಮುಂದುವರಿಸಬೇಕೆಂಬ ಅನಿಶ್ಚಿತತೆಯ ಭಾವ ಅವರಲ್ಲಿಯೂ ಮೂಡಿತ್ತು. ಅಂತಿಮವಾಗಿ ಅವರು ತಮ್ಮ ಶಿಕ್ಷಣವನ್ನು ವಿಭಿನ್ನವಾಗಿ ಬಳಸಲು ನಿರ್ಧರಿಸಿದರು.
ಸಚನ್ ಈಗ ಸ್ಮಾರ್ಟ್ ಕ್ಲಾಸ್ ರೂಂಗಳು, ರೊಬೊಟಿಕ್ಸ್ ಮತ್ತು ಜೈವಿಕ ಪ್ರಯೋಗಾಲಯಗಳು ಮತ್ತು ಕ್ರೀಡಾ ಸೌಲಭ್ಯಗಳಂತಹ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಯೋಚನೆಯಲ್ಲಿದ್ದಾರೆ. ಮಕ್ಕಳು ಕೇವಲ ಅಂಕಗಳನ್ನು ಬೆನ್ನಟ್ಟುವ ಬದಲು ಸ್ವಾವಲಂಬಿಗಳಾಗುವ ವಾತಾವರಣವನ್ನು ಸೃಷ್ಟಿಸುವುದು ಅವರ ದೊಡ್ಡ ಗುರಿಯಾಗಿದೆ. ಮುಂದೊಂದು ದಿನ ಗುರುಕುಲಂ ಜನರಿಗೆ ಜೀವನ ಪಾಠಗಳನ್ನು ಕಲಿಸುವ ಶಾಲೆಯಾಗಿ ಪ್ರಪಂಚದಾದ್ಯಂತ ಹರಡಲಿ ಎನ್ನುವುದೇ ಇವರ ಆಶಯ.


Click it and Unblock the Notifications
