ವಿದೇಶದಿಂದ ಮರಳಿದ ನಾಲ್ವರಲ್ಲಿ ದಕ್ಷಿಣ ಆಫ್ರಿಕಾ ರೂಪಾಂತರ ವೈರಸ್ ಪತ್ತೆ
ನವದೆಹಲಿ, ಫೆಬ್ರವರಿ 17: ಭಾರತದಲ್ಲಿ ದಕ್ಷಿಣ ಆಫ್ರಿಕಾದಲ್ಲಿನ ಕೊರೊನಾ ವೈರಸ್ ರೂಪಾಂತರದ ಸೋಂಕು ಪತ್ತೆಯಾಗಿದೆ ಎಂದು ಸರ್ಕಾರ ತಿಳಿಸಿದೆ. ಕಳೆದ ತಿಂಗಳು ನಡೆಸಿದ ವಂಶವಾಹಿ ಪರೀಕ್ಷೆಯಲ್ಲಿ ನಾಲ್ವರಲ್ಲಿ ದಕ್ಷಿಣ ಆಫ್ರಿಕಾ ಮಾದರಿ ರೂಪಾಂತರ ವೈರಸ್ ಇರುವುದು ಪತ್ತೆಯಾಗಿದೆ ಎಂದು ಅದು ತಿಳಿಸಿದೆ. ಅಲ್ಲದೆ ಒಬ್ಬರಲ್ಲಿ ಬ್ರೆಜಿಲ್‌ನಲ್ಲಿ ಪತ್ತೆಯಾಗಿರುವ ರೂಪಾಂತರಿ ಸೋಂಕು ಕೂಡ ಕಂಡುಬಂದಿದೆ.
ಭಾರತದಲ್ಲಿ 150ಕ್ಕೂ ಹೆಚ್ಚು ಮಂದಿಗೆ ಬ್ರಿಟನ್‌ನಲ್ಲಿ ಆರಂಭವಾದ ರೂಪಾಂತರಿ ವೈರಸ್ ಸೋಂಕು ಕಂಡುಬಂದಿದೆ. ಆದರೆ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಇನ್ನೊಂದು ರೂಪಾಂತರಿ ಸೋಂಕು ಭಾರತದಲ್ಲಿ ಇದುವರೆಗೂ ಕಂಡುಬಂದಿರಲಿಲ್ಲ.
ಜನವರಿಯಲ್ಲಿ ದೇಶಕ್ಕೆ ಮರಳಿದ ನಾಲ್ವರಲ್ಲಿ ದಕ್ಷಿಣ ಆಫ್ರಿಕಾ ರೂಪಾಂತರಿ ತಳಿಯ ವೈರಸ್ ಇರುವುದು ಕಂಡುಬಂದಿದೆ ಎಂದು ಐಸಿಎಂಆರ್ ಪ್ರಧಾನ ನಿರ್ದೇಶಕ ಬಲರಾಮ್ ಭಾರ್ಗವ ತಿಳಿಸಿದ್ದಾರೆ.

'ಭಾರತದಲ್ಲಿ ದಕ್ಷಿಣ ಆಫ್ರಿಕಾದ ಕೋವಿಡ್ 19 ರೂಪಾಂತರಿ ವೈರಸ್ ನಾಲ್ಕು ಮಂದಿಯಲ್ಲಿ ಪತ್ತೆಯಾಗಿದೆ. ಇವರು ವಿದೇಶದಿಂದ ಮರಳಿದ್ದರು. ಎಲ್ಲ ಪ್ರಯಾಣಿಕರು ಹಾಗೂ ಅವರ ಸಂಪರ್ಕಿತರನ್ನು ಪರೀಕ್ಷೆಗೆ ಒಳಪಡಿಸಿ ಕ್ವಾರೆಂಟೈನ್ ಮಾಡಲಾಗಿದೆ' ಎಂದು ಅವರು ತಿಳಿಸಿದ್ದಾರೆ. ಹಾಗೆಯೇ ಒಬ್ಬ ವ್ಯಕ್ತಿಯಲ್ಲಿ ಬ್ರೆಜಿಲ್ ಮಾದರಿ ರೂಪಾಂತರಿ ವೈರಸ್ ಕಂಡುಬಂದಿದೆ ಎಂದು ಹೇಳಿದ್ದಾರೆ.
ದಕ್ಷಿಣ ಆಫ್ರಿಕನ್ ರೂಪಾಂತರಿ ಪತ್ತೆಯಾದವರಲ್ಲಿ ಒಬ್ಬರು ಅಂಗೋಲಾ, ಒಬ್ಬರು ತಾಂಜೇನಿಯಾ ಮತ್ತು ಉಳಿದ ಇಬ್ಬರು ದಕ್ಷಿಣ ಆಫ್ರಿಕಾದಿಂದ ಬಂದವರಾಗಿದ್ದಾರೆ. ದೇಶದಲ್ಲಿ ಇದುವರೆಗೂ 187 ಬ್ರಿಟನ್ ಮಾದರಿ ರೂಪಾಂತರಿ ವೈರಸ್ ಸೋಂಕಿತರು ಪತ್ತೆಯಾಗಿದ್ದಾರೆ.
ದಕ್ಷಿಣ ಆಫ್ರಿಕಾದ ರೂಪಾಂತರಿ ವೈರಸ್ ಸೋಂಕಿತರಲ್ಲಿ ತೀವ್ರಮಟ್ಟದ ಕಾಯಿಲೆ ಉಂಟುಮಾಡುತ್ತದೆ ಹಾಗೂ ಅದು ಮಾರಕ ಎನ್ನಲು ಇನ್ನೂ ಪುರಾವೆಗಳು ಸಿಕ್ಕಿಲ್ಲ. ಆದರೆ ಅದು ಬಹಳ ವೇಗವಾಗಿ ಹರಡಲಿದ್ದು, ಅದರ ವಿರುದ್ಧ ಲಸಿಕೆಗಳು ಪರಿಣಾಮಕಾರಿಯಲ್ಲ ಎನ್ನುವುದು ಕಳವಳ ಮೂಡಿಸಿದೆ.












Click it and Unblock the Notifications