Powerful Passport: ಭಾರತಕ್ಕೆ 80ನೇ ಸ್ಥಾನ.. ಶತಕ ಬಾರಿಸಿದ ಪಾಕಿಸ್ತಾನ!
ತಂತ್ರಜ್ಞಾನ ಬೆಳೆದಂತೆಲ್ಲಾ ಜಗತ್ತೇ ಒಂದು ಹಳ್ಳಿಯಾಗಿದೆ. ಯಾರು ಎಲ್ಲಿಗೆ ಬೇಕಾದರೂ, ಯಾವಾಗ ಬೇಕಾದರೂ ಪ್ರಯಾಣ ಬೆಳೆಸಬಹುದು. ಆದರೆ ಹೀಗೆ ಬೇರೆ ದೇಶಕ್ಕೆ ಯಾರೇ ಹೋಗಬೇಕಾದರೂ ಅವರಿಗೆ ಪಾಸ್‌ಪೋರ್ಟ್ ಕಡ್ಡಾಯ. ಜಗತ್ತಿನ ಪ್ರತಿಯೊಂದು ದೇಶವೂ ತನ್ನದೇ ಆದ ಪಾಸ್‌ಪೋರ್ಟ್ ನಿಯಮ ಹೊಂದಿದೆ. ಹಾಗಾದ್ರೆ ಜಗತ್ತಿನ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್ ಯಾವ ದೇಶದ್ದು? ಬನ್ನಿ ತಿಳಿಯೋಣ.
'ಹೆನ್ಲೆ' ಪಾಸ್‍ಪೋರ್ಟ್ ಶ್ರೇಯಾಂಕ ಪಟ್ಟಿ ರಿಲೀಸ್ ಆಗಿದ್ದು, ಆ ಪ್ರಕಾರ ಜಗತ್ತಿನ ಅತ್ಯಂತ ಪ್ರಭಾವಶಾಲಿ ಪಾಸ್‍ಪೋರ್ಟ್ ಹೊಂದಿರುವ ದೇಶಗಳ ಸಾಲಿನಲ್ಲಿ ಸಿಂಗಾಪುರ ಫಸ್ಟ್ ರ‍್ಯಾಂಕ್ ಪಡೆದುಕೊಂಡಿದೆ. ಈ ಮೂಲಕ ಕಳೆದ 5 ವರ್ಷದಿಂದಲೂ ಮೊದಲ ಸ್ಥಾನದಲ್ಲೇ ಇದ್ದ ಜಪಾನ್ ಈಗ ಸಿಂಗಾಪುರದ ಎದುರು ಸೋತು ಹೋಗಿದೆ. ಈ ಮೂಲಕ ಜಗತ್ತಿನ ಅತ್ಯಂತ ಪ್ರಭಾವಶಾಲಿ ಪಾಸ್‍ಪೋರ್ಟ್ ಹೊಂದಿರುವ ದೇಶಗಳ ಸಾಲಿನಲ್ಲಿ ಜಪಾನ್ 3ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಸಿಂಗಾಪುರದ ಪಾಸ್‍ಪೋರ್ಟ್ ಬಳಸಿ ವೀಸಾ ಇಲ್ಲದೆಯೂ 227 ಪ್ರದೇಶಗಳ ಪೈಕಿ 192 ಜಾಗತಿಕ ಪ್ರದೇಶಗಳಿಗೆ ಭೇಟಿ ನೀಡಬಹುದಾಗಿದೆ. ಹಾಗಾದರೆ ಭಾರತಕ್ಕೆ ಎಷ್ಟನೇ ಸ್ಥಾನ ಸಿಕ್ಕಿದೆ? ಬನ್ನಿ ತಿಳಿಯೋಣ.

ಪಟ್ಟಿಯಲ್ಲಿ 189 ದೇಶ.. ಭಾರತಕ್ಕೆ ಎಷ್ಟನೇ ಸ್ಥಾನ?
ಇನ್ನು 'ಹೆನ್ಲೆ' ಪಾಸ್‍ಪೋರ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಒಟ್ಟಾರೆ 189 ದೇಶಗಳ ಇವೆ. ಈ ಪೈಕಿ ಜರ್ಮನಿ, ಇಟಲಿ, ಸ್ಪೇನ್ ಜಂಟಿಯಾಗಿ 2ನೇ ಸ್ಥಾನ ಪಡೆದಿವೆ. ಜೊತೆಗೆ ಆಸ್ಟ್ರಿಯಾ, ಫಿನ್ಲ್ಯಾಂಡ್, ಫ್ರಾನ್ಸ್, ಜಪಾನ್, ದಕ್ಷಿಣ ಕೊರಿಯಾ, ಲಕ್ಸೆಂಬರ್ಗ್, ಸ್ವೀಡನ್ ಜಂಟಿ 3ನೇ ಸ್ಥಾನದಲ್ಲಿವೆ. ಬ್ರಿಟನ್ 4ನೇ ಸ್ಥಾನದಲ್ಲಿ, ಅಮೆರಿಕ 8ನೇ ಸ್ಥಾನದಲ್ಲಿವೆ. 80ನೇ ಸ್ಥಾನದಲ್ಲಿರುವ ಭಾರತದ ಪಾಸ್‍ಪೋರ್ಟ್ ಅನ್ನು ಬಳಸಿ ಒಟ್ಟಾರೆ 57 ದೇಶಕ್ಕೆ ವೀಸಾ ಇಲ್ಲದೆ ಜನರು ಭೇಟಿ ನೀಡಬಹುದಾಗಿದೆ. ಹಾಗಾದರೆ ಪಾಕಿಸ್ತಾನ ಪಡೆದ ಸ್ಥಾನಮಾನ ಎಷ್ಟು ಗೊತ್ತಾ? ಆ ಬಗ್ಗೆ ಮಾಹಿತಿಗಾಗಿ ಮುಂದೆ ಓದಿ.
ಸರಳವಾಗಿ ಶತಕ ಬಾರಿಸಿದ ಪಾಕಿಸ್ತಾನ!
ಹೌದು, 'ಹೆನ್ಲೆ' ಪಾಸ್‍ಪೋರ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಪಾಕಿಸ್ತಾನ ಸೆಂಚ್ಯುರಿ ಭಾರಿಸಿದೆ. ಈ ಮೂಲಕ ಪಾಕಿಸ್ತಾನ 100ನೇ ಸ್ಥಾನಕ್ಕೆ ಕುಸಿದಿದೆ. ಪಾಕಿಸ್ತಾನದ ನಂತರದ ಸ್ಥಾನದಲ್ಲಿ ಅಂದರೆ 103ನೇ ಸ್ಥಾನದಲ್ಲಿ ಅಫ್ಘಾನಿಸ್ತಾನ ಇದ್ದರೆ, ಯೆಮನ್ 99ನೇ ಸ್ಥಾನ ಮತ್ತು ಸಿರಿಯಾ 101ನೇ ಸ್ಥಾನ ಹಾಗೂ ಇರಾಕ್ 102ನೇ ಸ್ಥಾನವನ್ನು ಪಡೆದಿದೆ. ಹೀಗೆ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಒದ್ದಾಡುತ್ತಿರುವ ಪಾಕಿಸ್ತಾನ ಈ ಪಟ್ಟಿಯಲ್ಲಿ ಕೂಡ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟಿದೆ ಎನ್ನಬಹುದು.
ಭಾರತದ ರಾಜಧಾನಿ ದೆಹಲಿ, ಬೆಂಗಳೂರಿಗೆ...
ಪಾಸ್‌ಪೋರ್ಟ್ ಜೊತೆಗೆ ಕೆಲವು ದಿನಗಳ ಹಿಂದೆ 'ಅತ್ಯಂತ ವಾಸಯೋಗ್ಯ ನಗರ'ಗಳ ಪಟ್ಟಿ ಬಿಡುಗಡೆ ಆಗಿತ್ತು. ಜಗತ್ತಿನ 173 'ಅತ್ಯಂತ ವಾಸಯೋಗ್ಯ ನಗರ'ಗಳ ಪಟ್ಟಿಯಲ್ಲಿ ಭಾರತದ ರಾಜಧಾನಿ ದೆಹಲಿ ಹಾಗೂ ವಾಣಿಜ್ಯ ನಗರಿ ಮುಂಬೈ 141ನೇ ಸ್ಥಾನದಲ್ಲಿವೆ. ಇನ್ನುಳಿದಂತೆ ಚೆನ್ನೈ 144ನೇ ಸ್ಥಾನ ಪಡೆದರೆ, ಅಹ್ಮದಾಬಾದ್ 147ನೇ ಸ್ಥಾನ ಹಾಗೂ ಬೆಂಗಳೂರು 148ನೇ ಸ್ಥಾನ ಪಡೆದುಕೊಂಡಿವೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

ಟಾಪ್ 10 ವಾಸಯೋಗ್ಯ ನಗರಗಳ ಪಟ್ಟಿ ಇಲ್ಲಿದೆ!
1) ವಿಯೆನ್ನಾ, ಆಸ್ಟ್ರಿಯಾ
2) ಕೋಪನ್ ಹೇಗನ್, ಡೆನ್ಮಾರ್ಕ್
3) ಮೆಲ್ಬೋರ್ನ್, ಆಸ್ಟ್ರೇಲಿಯಾ
4) ಸಿಡ್ನಿ, ಆಸ್ಟ್ರೇಲಿಯಾ
5) ವ್ಯಾಂಕೋವರ್, ಕೆನಡಾ
6) ಜ್ಯೂರಿಚ್, ಸ್ವಿಜರ್ಲ್ಯಾಂಡ್
7) ಕ್ಯಾಲ್ಗರಿ, ಕೆನಡಾ
8) ಜಿನಿವಾ, ಸ್ವಿಜರ್ಲ್ಯಾಂಡ್
9) ಟೊರಾಂಟೊ, ಕೆನಡಾ
10) ಒಸಾಕಾ, ಜಪಾನ್
ಕೆನಡಾ ದೇಶಕ್ಕೆ ಅತಿಹೆಚ್ಚು ಸ್ಥಾನ!
ಅಂದಹಾಗೆ ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ ಸಂಸ್ಥೆ 173 ನಗರಗಳ ಶ್ರೇಯಾಂಕವನ್ನು ಬಿಡುಗಡೆ ಮಾಡಿದೆ. ಈ ವರದಿ ಆರೋಗ್ಯ ರಕ್ಷಣೆ, ಶಿಕ್ಷಣ, ಸ್ಥಿರತೆ, ಮೂಲಸೌಕರ್ಯ ಮತ್ತು ಪರಿಸರ ಸೇರಿದಂತೆ ಹಲವಾರು ಮಹತ್ವದ ಅಂಶ ಆಧರಿಸಿದೆ. ಆಸ್ಟ್ರೇಲಿಯಾದ 2 ನಗರಗಳಾದ ಮೆಲ್ಬೋರ್ನ್ ಮತ್ತು ಸಿಡ್ನಿ 3 ಮತ್ತು 4ನೇ ಸ್ಥಾನ ಪಡೆದಿವೆ. ಹಾಗೇ ಇನ್ನೊಂದ್ಕಡೆ ಕೆನಡಾದ 3 ನಗರ ಅಂದರೆ ವ್ಯಾಂಕೋವರ್, ಕ್ಯಾಲ್ಗರಿ ಸೇರದಂತೆ ಟೊರೊಂಟೊ ಕ್ರಮವಾಗಿ 5ನೇ, 7ನೇ ಮತ್ತು 9ನೇ ಸ್ಥಾನ ಪಡೆದಿವೆ. ಹಾಗೇ ಸ್ವಿಜರ್ಲ್ಯಾಂಡ್ ದೇಶದ 2 ನಗರಗಳು ಕೂಡ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
'ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್' ಅಂದ್ರೆ 'ಇಐಯು' ಸಂಸ್ಥೆ ಜಗತ್ತಿನ 173 ನಗರಗಳ ರ‍್ಯಾಂಕ್ ರಿಲೀಸ್ ಮಾಡಿತ್ತು. ಈ ಪೈಕಿ ಆಸ್ಟ್ರಿಯಾದ ರಾಜಧಾನಿ ವಿಯೆನ್ನಾ ನಗರ ಈ ವಿಶ್ವದ 'ಅತ್ಯಂತ ವಾಸಯೋಗ್ಯ ನಗರ' ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, 2023ರ 'ವಾಸಯೋಗ್ಯ ನಗರ' ಎಂಬ ಬಿರುದು ಪಡೆದಿದೆ. ತನ್ನ ವಿಶ್ವಾಸಾರ್ಹ ಮೂಲ ಸೌಕರ್ಯ ವ್ಯವಸ್ಥೆ ಜೊತೆಗೆ ಸಂಸ್ಕೃತಿ ಮತ್ತು ಮನರಂಜನೆ, ಅತ್ಯುತ್ತಮ ಶಿಕ್ಷಣ ಮತ್ತು ಅತ್ಯುತ್ತಮವಾದ ಆರೋಗ್ಯ ಸೇವೆಗೆ ಹೆಸರು ಪಡೆದಿದೆ ವಿಯೆನ್ನಾ. ಈ ಮೂಲಕ ಅತ್ಯಂತ ವಾಸಯೋಗ್ಯ ನಗರ ಎಂಬ ಕಿರೀಟ ತನ್ನದಾಗಿಸಿಕೊಂಡಿದೆ.












Click it and Unblock the Notifications