Jharkhand Election: ಬಿಜೆಪಿ ನಾಯಕಿ ವಿರುದ್ಧ ಅವಹೇಳನಕಾರಿ ಹೇಳಿಕೆ; ಜಾರ್ಖಂಡ್ ಸಚಿವನ ವಜಾಗೊಳಿಸಲು ಆಗ್ರಹ
ಜಾರ್ಖಂಡ್ ವಿಧಾನಸಭಾ ಚುನಾವಣಾ ಅಖಾಡ ದಿನೇ ದಿನೇ ರಂಗೇರುತ್ತಿದ್ದು, ಎಲ್ಲಾ ಪಕ್ಷಗಳು ಬಿರುಸಿನ ಪ್ರಚಾರ ಮಾಡುತ್ತಿವೆ. ಪ್ರಚಾರದ ವೇಳೆ ಎದುರಾಳಿ ಪಕ್ಷಗಳ ನಾಯಕರನ್ನು ಟೀಕಿಸುವುದು ಸಾಮಾನ್ಯ, ಆದರೆ ಕೆಲವೊಮ್ಮೆ ಟೀಕೆಯನ್ನು ಮೀರಿ ನಿಂದಿಸುವುದು, ಬಳಿಕ ಕ್ಷಮೆ ಕೇಳುವುದು ರಾಜಕೀಯ ನಾಯಕರಿಗೆ ಸಾಮಾನ್ಯ ಎನ್ನುವಂತಾಗಿದೆ. ಬಿಜೆಪಿ ನಾಯಕಿ ಸೀತಾ ಸೊರೆನ್ ಬಗ್ಗೆ ಕಾಂಗ್ರೆಸ್ ನಾಯಕ ಮತ್ತು ಜಾರ್ಖಂಡ್ ಸಚಿವ ಇರ್ಫಾನ್ ಅನ್ಸಾರಿ ನೀಡಿರುವ ಹೇಳಿಕೆ ಇದೀಗ ಭಾರಿ ವಿವಾದ ಸೃಷ್ಟಿಸಿದೆ.
ಸೀತಾ ಸೊರೆನ್ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿರುವ ಸಚಿವ ಇರ್ಫಾನ್ ಅನ್ಸಾರಿಯನ್ನು ಸಚಿವ ಸಂಪುಟದಿಂದ ಹೊರಹಾಕಬೇಕು ಎಂದು ಮುಖ್ಯಮಂತ್ರಿ ಹೇಮಂತ್ ಸೊರೇನ್‌ರಿಗೆ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಆಗ್ರಹಿಸಿದ್ದಾರೆ. ಇರ್ಫಾನ್ ಅನ್ಸಾರಿ ಅವಮಾನ ಮಾಡಿರುವುದು ಸೀತಾ ಸೊರೇನ್‌ಗೆ ಮಾತ್ರವಲ್ಲ ಇಡೀ ಜಾರ್ಖಂಡ್ ಮಹಿಳೆಯರಿಗೆ ಎಂದು ಹೇಳಿದ್ದಾರೆ.

"ಸಚಿವ ಇರ್ಫಾನ್ ಅನ್ಸಾರಿ ಸೀತಾ ಸೊರೇನ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಸೀತಾ ಸೊರೇನ್ ಅತ್ಯಂತ ಗೌರವಾನ್ವಿತ ನಾಯಕಿ, ಅವರ ವಿರುದ್ಧ ಈ ರೀತಿಯ ಅವಹೇಳನಕಾರಿ ಪದಗಳನ್ನು ಬಳಸುವುದು ಆಕೆಗೆ ಮಾಡಿದ ಅವಮಾನ ಮಾತ್ರವಲ್ಲ. ಜಾರ್ಖಂಡ್ ಮಹಿಳೆಯರಿಗೆ ಮಾಡಿರುವ ಅಪಮಾನ. ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಅವರನ್ನು ಸಚಿವ ಸ್ಥಾನದಿಂದ ಹೊರಹಾಕಬೇಕು ಎಂದು ಒತ್ತಾಯಿಸಿದರು.
ಇರ್ಫಾನ್ ಅನ್ಸಾರಿ ಹೇಳಿದ್ದೇನು?
ಜಮ್ತಾರಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇರ್ಫಾನ್ ಅನ್ಸಾರಿ ಅದೇ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ತಮ್ಮ ಸ್ಪರ್ಧಿ ಬಿಜೆಪಿಯ ಸೀತಾ ಸೊರೇನ್‌ರನ್ನು ಟೀಕಿಸುವ ಭರದಲ್ಲಿ, ಆಕೆ 'ತಿರಸ್ಕೃತ' ಮತ್ತ 'ಎರವಲು ಪಡೆದ' ಆಟಗಾರ್ತಿ ಎಂದು ಹೇಳಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಸೀತಾ ಸೊರೇನ್ ತಮ್ಮ ಎಕ್ಸ್ ಖಾತೆಯಲ್ಲಿ ಅನ್ಸಾರಿ ಅವರ ವಿಡಿಯೊ ಹಂಚಿಕೊಂಡಿದ್ದು, ಅಸಭ್ಯ ಭಾಷೆ ಬಳಸಿದ್ದಕ್ಕಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ಅವರ ಈ ಹೇಳಿಕೆಗೆ ಕ್ಷೇತ್ರದ ಮತದಾರರೇ ತಕ್ಕ ಉತ್ತರ ಕೊಡುತ್ತಾರೆ ಎಂದಿದ್ದಾರೆ.
"ಕಾಂಗ್ರೆಸ್ ಅಭ್ಯರ್ಥಿ ಇರ್ಫಾನ್ ಅನ್ಸಾರಿ ತಮ್ಮ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿದ್ದಕ್ಕೆ ಮಾಧ್ಯಮಗಳ ಮುಂದೆ ಕ್ಷಮೆಯಾಚಿಸಬೇಕು. ಈ ಹಿಂದೆ ಕೂಡ ನನ್ನ ಬಗ್ಗೆ ವೈಯಕ್ತಿಕ ಟೀಕೆಗಳನ್ನು ಮಾಡಿದ್ದರು. ಈ ಬಾರಿ ಅವರು ಮಿತಿ ಮೀರಿ ಮಾತನಾಡಿದ್ದಾರೆ. ಕ್ಷಮ ಕೇಳಿ, ಇಲ್ಲ ವಿರೋಧ ಎದುರಿಸಲು ಸಜ್ಜಾಗಿ" ಎಂದು ಸೀತಾ ಸೊರೇನ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಜಾರ್ಖಂಡ್ ವಿಧಾನಸಭೆಯ 81 ಸ್ಥಾನಗಳಿಗೆ ನವೆಂಬರ್ 13 ಮತ್ತು ನವೆಂಬರ್ 20 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 23ರಂದು ಫಲಿತಾಂಶ ಹೊರಬೀಳಲಿದೆ. ರಾಜ್ಯದಲ್ಲಿ ಅಧಿಕಾರ ಪಡೆಯಲು ಎನ್‌ಡಿಎ ಮತ್ತು ಇಂಡಿಯಾ ಒಕ್ಕೂಟಗಳು ತೀವ್ರ ಸ್ಪರ್ಧೆ ನಡೆಸುತ್ತಿವೆ.












Click it and Unblock the Notifications