Shikhar Dhawan Divorce: ಪತ್ನಿಯಿಂದ ಮಾನಸಿಕ ಹಿಂಸೆ: ಶಿಖರ್ ಧವನ್ ವಿಚ್ಛೇದನಕ್ಕೆ ಒಪ್ಪಿಗೆ ಕೊಟ್ಟ ದೆಹಲಿ ಕೋರ್ಟ್
ಕ್ರಿಕೆಟಿಗ ಶಿಖರ್ ಧವನ್ ಕೊನೆಗೂ ತಮ್ಮ ಪತ್ನಿ ಆಯೇಷಾ ಅವರಿಂದ ವಿಚ್ಛೇದನ ಪಡೆದುಕೊಂಡಿದ್ದಾರೆ. ದೆಹಲಿಯ ಪಟಿಯಾಲ ನ್ಯಾಯಾಲಯ ಬುಧವಾರ ವಿಚ್ಛೇದನವನ್ನು ಅನುಮೋದಿಸಿದ್ದು, ಆಯೇಷಾ ತಮ್ಮ ಪತಿ ಶಿಖರ್ ಧವನ್ ಅವರಿಗೆ ಮಾನಸಿಕ ಹಿಂಸೆ ಕೊಟ್ಟಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ.
ತನಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂದು ಶಿಖರ್ ಧವನ್ ಪತ್ನಿ ಆಯೇಷಾ ಮೇಲೆ ಆರೋಪ ಮಾಡಿದ್ದರು. ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಹರೀಶ್ ಕುಮಾರ್ ಅವರು ಧವನ್ ಅವರ ಪತ್ನಿಯ ಮೇಲಿನ ಆರೋಪಗಳನ್ನು ಒಪ್ಪಿಕೊಂಡಿದ್ದು, ಆರೋಪಗಳನ್ನು ಸುಳ್ಳು ಎಂದು ಸಾಬೀತುಪಡಿಸಲು ಆಯೇಷಾ ವಿಫಲವಾಗಿದ್ದಾರೆ ಎಂದು ಹೇಳಿದ್ದಾರೆ.

ಆಯೇಷಾ ಆಸ್ಟ್ರೇಲಿಯಾದಲ್ಲಿ ವಾಸಿಸುವ ಮೂಲಕ ಮತ್ತು ವರ್ಷಗಳ ಕಾಲ ಮಗನನ್ನು ತಮ್ಮಿಂದ ದೂರವಿಟ್ಟು "ಲಾಂಗ್ ಡಿಸ್ಟೆನ್ಸ್ ಮ್ಯಾರೇಜ್" ಗೆ ಬಲವಂತಪಡಿಸಿದ್ದರಿಂದ ಶಿಖರ್ ಧವನ್ ಮಾನಸಿಕ ಹಿಂಸೆಗೆ ಒಳಗಾಗಿದ್ದರು ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.
2012ರಲ್ಲಿ ವಿವಾಹವಾಗಿದ್ದ ಧವನ್
ಶಿಖರ್ ಧವನ್ ಮತ್ತು ಆಯೇಶಾ ಮುಖರ್ಜಿ 2012 ರಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ 10 ವರ್ಷದ ಮಗ ಇದ್ದಾನೆ. ಆಯೇಶಾ ಮತ್ತು ಮಗ ಜೊರಾವರ್ ಧವನ್ ಇಬ್ಬರೂ ಆಸ್ಟ್ರೇಲಿಯಾದ ಪ್ರಜೆಗಳಾಗಿದ್ದಾರೆ. ಶಿಖರ್ ಧವನ್ ಅವರಿಗೂ ಮುನ್ನವೇ ಆಯೇಶಾ ಅವರು ಇನ್ನೊಂದು ಮದುವೆಯಾಗಿದ್ದರು, ಮೊದಲ ಪತಿಯಿಂದ ಅವರು ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿದ್ದಾರೆ.
ಶಿಖರ್ ಧವನ್ ದಾಂಪತ್ಯದಲ್ಲಿ ಆಗಿದ್ದೇನು?
ಶಿಖರ್ ಧವನ್ ಸಲ್ಲಿಸಿದ್ದ ಅರ್ಜಿಯಲ್ಲಿ, ಧವನ್ ಅವರು ತಮ್ಮ ವೃತ್ತಿಪರ ಕ್ರಿಕೆಟರ್ ಆಗಿದ್ದ ಕಾರಣದಿಂದ ಆಸ್ಟ್ರೇಲಿಯಾಕ್ಕೆ ಯಾವಾಗಲೂ ಭೇಟಿ ನೀಡಲು ಆಗದ ಕಾರಣ, ಅವರ ಜೊತೆ ಭಾರತದಲ್ಲೇ ನೆಲೆಸುವುದಾಗಿ ಮೊದಲು ಆಯೇಶಾ ಭರವಸೆ ನೀಡಿದ್ದರು. ಆದರೂ, ಮದುವೆಯ ನಂತರ ಅವರು ಭಾರತಕ್ಕೆ ಬರಲು ನಿರಾಕರಿಸಿದರು. ಭಾರತಕ್ಕೆ ಬಂದರೆ ತನ್ನ ಇಬ್ಬರು ಹೆಣ್ಣು ಮಕ್ಕಳ ಪಾಲನೆಯನ್ನು ಮಾಜಿ ಪತಿಗೆ ಬಿಟ್ಟುಕೊಡುವ ಕಾರಣದಿಂದ ಭಾರತಕ್ಕೆ ಬರಲ್ಲ ಎಂದು ಹೇಳಿದ್ದರು. ಇದರಿಂದ ಶಿಖರ್ ಧವನ್ ತನ್ನ ತಪ್ಪಿಲ್ಲದೆ ತನ್ನ ಮಗನಿಂದ ಪ್ರತ್ಯೇಕವಾಗಿ ವಾಸಿಸುವ ಸಂಕಟ ಮತ್ತು ವೇದನೆಯನ್ನು ಅನುಭವಿಸಿದರು ಎಂದು ಕೋರ್ಟ್‌ಗೆ ತಿಳಿಸಿದ್ದಾರೆ.
ಶಿಖರ್ ಧವನ್ ಆರೋಪವನ್ನು ಆಯೇಶಾ ನಿರಾಕರಿಸಿದ್ದು, ತಾನು ನಿಜವಾಗಿ ಆತನೊಂದಿಗೆ ಭಾರತದಲ್ಲಿ ವಾಸಿಸಲು ಬಯಸಿದ್ದರೂ, ತಾನು ಹಕ್ಕು ಚಲಾಯಿಸಲು ಆಯ್ಕೆ ಮಾಡಲಿಲ್ಲ ಎಂದು ಕೋರ್ಟ್‌ಗೆ ಹೇಳಿದ್ದರು. ಈಗ ಕೋರ್ಟ್ ಧವನ್ ಪರವಾಗಿ ತೀರ್ಪು ನೀಡಿದ್ದು, ಧವನ್ ಹಿಂಸೆ ಅನುಭವಿಸಿದ್ದಾರೆ ಎಂದು ಹೇಳಿದೆ.
ಆಸ್ಟ್ರೇಲಿಯಾದಲ್ಲಿ ಧವನ್ ಖರೀದಿ ಮಾಡಿರುವ ಮೂರು ಆಸ್ತಿಗಳಿಗೆ ತನ್ನನ್ನು ಮಾಲಕಿಯನ್ನಾಗಿ ಮಾಡುವಂತೆ ಆಯೇಶಾ ಬಲವಂತ ಮಾಡಿದಳು ಎಂದು ಧವನ್ ಆರೋಪಿಸಿದ್ದಾರೆ. ಒಂದು ಆಸ್ತಿಯಲ್ಲಿ 99 ಪ್ರತಿಶತ ಹಕ್ಕು ಹೊಂದಿದ್ದರೆ, ಇತರ ಎರಡರಲ್ಲಿ ಜಂಟಿ ಮಾಲೀಕರಾಗಿದ್ದಾರೆ. ಧವನ್ ಅವರ ಆರೋಪ ಸುಳ್ಳು ಎಂದು ಸಾಬಿತು ಮಾಡುವಲ್ಲಿ ಆಯೇಶಾ ವಿಫಲವಾಗಿದ್ದಾರೆ ಎಂದು ಕೋರ್ಟ್ ಹೇಳಿದೆ.
ಆಯೇಶಾ ಅವರು ತಮ್ಮ ಮಗನಿಗೆ ಮಾತ್ರವಲ್ಲದೆ ತನ್ನ ಮೊದಲ ಪತಿಯಿಂದ ಈಗಾಗಲೇ ಪರಿಹಾರ ಪಡೆದಿರುವ ತನ್ನ ಇಬ್ಬರು ಪುತ್ರಿಯರಿಗೂ ಮಕ್ಕಳ ಬೆಂಬಲ ನೀಡುವಂತೆ ಒತ್ತಾಯಿಸಿದರು ಎನ್ನುವ ಧವನ್ ಅವರ ಆರೋಪಗಳನ್ನು ನ್ಯಾಯಾಲಯವು ಒಪ್ಪಿಕೊಂಡಿತು.
ಮಗನನ್ನು ಭೇಟಿ ಮಾಡಲು ಅವಕಾಶ
ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ತನ್ನ ಮಗನನ್ನು ಭೇಟಿ ಮಾಡಲು ಧವನ್‌ಗೆ ನ್ಯಾಯಾಲಯವು ಈಗ ಕಡ್ಡಾಯ ಭೇಟಿ ಹಕ್ಕುಗಳನ್ನು ನೀಡಿದೆ. ಧವನ್ ಮತ್ತು ಅವರ ಕುಟುಂಬದೊಂದಿಗೆ ರಾತ್ರಿಯ ತಂಗುವಿಕೆ ಮತ್ತು ಶಾಲಾ ರಜಾದಿನಗಳು ಸೇರಿದಂತೆ ಭೇಟಿಯ ಉದ್ದೇಶಗಳಿಗಾಗಿ ಅವರ ಮಗನನ್ನು ಭಾರತಕ್ಕೆ ಕರೆತರುವಂತೆ ಕೋರ್ಟ್ ಆಯೇಶಾಗೆ ಆದೇಶಿಸಿದೆ.












Click it and Unblock the Notifications