ಉಗುಳು ನೆಕ್ಕಲು ನಿರಾಕರಿಸಿದ ಬಾಲಕಿ ಬರ್ಬರ ಹತ್ಯೆ
ಬೆಂಗಳೂರು, ಸೆ. 3: ದೇಶದ ಕಾನೂನಿಗೆ ವಿರುದ್ಧವಾಗಿ ಚಾಲ್ತಿಯಲ್ಲಿರುವ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಸ್ವಯಂ ಘೋಷಿತ ನ್ಯಾಯಾಲಯ ಬಾಲಕಿಯೊಬ್ಬಳ ಜೀವ ಬಲಿ ಪಡೆದಿದೆ. ಪಶ್ಚಿಮ ಬಂಗಾಳದ ದುಫ್‌ಗುರಿ ಗ್ರಾಮ ಇಂಥ ಘಟನೆಗೆ ಸಾಕ್ಷಿಯಾಗಿದೆ.
ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮುಖಂಡೆಯೊಬ್ಬಳ ನೇತೃತ್ವದ 'ಕಾಂಗರೂ ಕೋರ್ಟ್' ಹೇಳಿದಂತೆ ಎಂಜಲು ನೆಕ್ಕಲು ನಿರಾಕರಿಸಿದ 15 ವರ್ಷದ ಬಾಲಕಿ ಶವ ನಗ್ನ ಸ್ಥಿತಿಯಲ್ಲಿ ರೈಲ್ವೆ ಹಳಿ ಮೇಲೆ ಪತ್ತೆಯಾಗಿದ್ದು ಹಲವಾರು ಅನುಮಾನಗಳಿಗೆ ದಾರಿ ಮಾಡಿ ಕೊಟ್ಟಿದೆ.(ಬುದ್ಧಿಮಾಂದ್ಯಳ ಮೇಲೆ ತಂದೆಯಿಂದಲೇ ಅತ್ಯಾಚಾರ)

ಪಶ್ಚಿಮ ಬಂಗಾಳದ ಜಲ್‌ಪೈಗುರಿ ಜಿಲ್ಲೆಯ ದುಫ್‌ಗುರಿ ಗ್ರಾಮದ ಸಮೀಪ ಶವ ಪತ್ತೆಯಾಗಿದ್ದು ಮೃತಳ ಮನೆಯವರು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಪೊಲೀಸರಿಗೆ ಕಾನ್ಸಿಲರ್ ನಮಿತಾ ರಾಯ್ ಎಂಬುವಳ ಪತಿ ಸೇರಿದಂತೆ 13 ಜನರ ಮೇಲೆ ದೂರು ದಾಖಲಿಸಿದ್ದಾರೆ.
ಇದಕ್ಕೆ ಸಂಬಂಧಿಸಿ ಅನಿಲ್ ಬರ್‌ಮನ್ ಎಂಬಾತನ್ನು ಬಂಧಿಸಲಾಗಿದ್ದು ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಂದೆಗೆ ಥಳಿಸಿದ್ದನ್ನು ವಿರೋಧಿಸಿದ್ದ ಬಾಲಕಿ
ವಿದ್ಯುತ್ ಟಿಲ್ಲರ್ ಬಾಡಿಗೆ ಹಣ ನೀಡದಕ್ಕೆ ಹತ್ಯೆಗೀಡಾದ ಯುವತಿಯ ತಂದೆಯನ್ನು ಕಾನ್ಸಿಲರ್ ನಮಿತಾ ರಾಯ್ ನೇತೃತ್ವದ 'ಸಾಲಿಶಿ ಸಭಾ' ಅಥವಾ 'ಕಾಂಗರೂ ಕೋರ್ಟ್' ದಂಡನೆಗೆ ಒಳಪಡಿಸಿತ್ತು. ಇದನ್ನು ಪ್ರತಿಭಟಿಸಲು ಹೋದ ಯುವತಿಯ ಮೇಲೂ ದುರುಳರು ದಾಳಿ ಮಾಡಿದರು. ನಂತರ ಸ್ಥಳದಿಂದ ಕಣ್ಮರೆಯಾಗಿದ್ದ ಬಾಲಕಿ ಶವ ಕೆಲವೇ ಗಂಟೆಗಳಲ್ಲಿ ರೈಲ್ವೆ ಟ್ರ್ಯಾಕ್ ಮೇಲೆ ಪತ್ತೆಯಾಗಿದೆ.
ಬಾಲಕಿಯ ಶವವನ್ನು ಮೊದಲು ಗುರುತಿಸಿದ ಗಣೇಶ್ ಪ್ರಸಾದ್ ಹೇಳುವಂತೆ, ಬೆಳಗ್ಗೆ 8.15ರ ಸುಮಾರಿಗೆ ಬಾಲಕಿಯ ಶವ ನೋಡಿದೆ. ಒಂದು ವೇಳೆ ರೈಲಿನಡಿ ದೇಹ ಸಿಕ್ಕಿದ್ದರೆ ತುಂಡು ತುಂಡಾಗಬೇಕಿತ್ತು. ಆದರೆ ಭುಜದ ಮೇಲಿನ ಬಟ್ಟೆಯೊಂದನ್ನು ಬಿಟ್ಟು ಉಳಿದ ಭಾಗವೆಲ್ಲಾ ನಗ್ನವಾಗಿತ್ತು ಎಂದು ಹೇಳಿದ್ದಾರೆ. ಆದರೆ ಸ್ಥಳೀಯರು ಅವಮಾನ ತಾಳಲಾರದೆ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದಿದ್ದಾರೆ.
ಹಳ್ಳಿಗರೇ ಬಾಲಕಿಯನ್ನು ಕೊಲೆ ಮಾಡಿದ್ದಾರೆ. ನನ್ನ ಅಣ್ಣನಿಗೆ ಥಳಿಸುವಾಗ ಆಕೆ ವಿರೋಧಿಸಿದ್ದಳು. ಆಕೆ ಮೇಲೂ ಹಲ್ಲೆ ಮಾಡಲಾಗಿತ್ತು. ಒಂದು ವೇಳೆ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದರೆ ನಗ್ನ ಸ್ಥಿತಿಯಲ್ಲಿ ಯಾಕೆ ಪತ್ತೆಯಾಗುತ್ತಿದ್ದಳು? ಬಾಲಕಿ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಹತ್ಯೆಗೀಡಾದ ಬಾಲಕಿ ಚಿಕ್ಕಪ್ಪ ಆರೋಪಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ಸಂವಿಧಾನದ ಕಾನೂನು ಮೀರಿ ಕೆಲಸ ಮಾಡುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳ ಜೀವಂತಿಕೆ ಬಗ್ಗೆ ಮತ್ತೆ ಪ್ರಶ್ನೆ ಮೂಡಲು ಈ ಘಟನೆ ಕಾರಣವಾಗಿದೆ. ಆದರೆ ತೃಣಮೂಲ ಕಾಂಗ್ರೆಸ್ ಇದಕ್ಕೂ ತನಗೂ ಸಂಬಂಧವಿಲ್ಲ ಎಂದು ಕೈತೊಳೆದುಕೊಂಡಿದೆ. ಘಟನೆ ರಾಜಕೀಯ ಕಾರಣಕ್ಕೆ ಬಳಕೆಯಾಗುವ ಲಕ್ಷಣ ಕಂಡುಬರುತ್ತಿದ್ದು ಸಿಪಿಎಂ ನೇತೃತ್ವದಲ್ಲಿ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಹಲವೆಡೆ ರಸ್ತೆ ತಡೆ ನಡೆಸಲಾಗುತ್ತಿದೆ.












Click it and Unblock the Notifications