ಸಾಕ್ಷಿ ನಾಶ ತಪ್ಪಿಸಲು ಸ್ಮಶಾನದಲ್ಲೇ ರಾತ್ರಿ ಕಳೆದ ಐಎಎಸ್ ಅಧಿಕಾರಿ
ಮದುರೈ, ಸೆ 14: ದೇಶ ಅದೆಷ್ಟೋ ನಿಷ್ಟಾವಂತ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ಕಂಡಿದೆ. ಈ ಸಾಲಿಗೆ ಇನ್ನೊಂದು ಸೇರ್ಪಡೆ ತಮಿಳುನಾಡಿನ ಡೈನಾಮಿಕ್ ಐಎಎಸ್ ಅಧಿಕಾರಿ ಯು ಸಗಾಯಂ.
ಭ್ರಷ್ಟಾಚಾರಿಗಳ ಪಾಲಿಗೆ ಸಿಂಹಸ್ವಪ್ನವಾಗಿರುವ ಸಗಾಯಂ ತಮಿಳುನಾಡಿನ ಪುದುಕೊಟೈ ಮೂಲದವರು. ತಮಿಳುನಾಡಿನ ರಾಜಕೀಯ ಜಿದ್ದಾಜಿದ್ದಿ ಹೇಗೆಂದು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ.
ಅಲ್ಪ ಅವಧಿಯಲ್ಲಿ 27 ಬಾರಿ ವರ್ಗಾವಣೆಯಾಗಿರುವ ಸಗಾಯಂ ಕಂಡರೆ ಅಲ್ಲಿನ ರಾಜಕಾರಣಿಗಳಿಗೂ ಎಲ್ಲಿಲ್ಲದ ನಡುಕ. (ಐಎಎಸ್ ಅಧಿಕಾರಿ ಡಿಕೆ ರವಿ ಅನುಮಾನಾಸ್ಪದ ಸಾವು)
ಬಹುಕೋಟಿ ಗ್ರಾನೈಟ್ ಹಗರಣದ ಕೇಸಿನ ವಿಚಾರಣೆಯ ಜವಾಬ್ದಾರಿಯನ್ನು ಮದರಾಸು ಉಚ್ಚ ನ್ಯಾಯಾಲಯ ಐಎಎಸ್ ಅಧಿಕಾರಿ ಸಗಾಯಂ ಅವರಿಗೆ ವಹಿಸಿತ್ತು.
ಅತ್ಯಂತ ಕ್ಲಿಷ್ಟಕರವಾದ ಮತ್ತು ರಾಜಕಾರಣಿಗಳು, ಅಧಿಕಾರಿಗಳು ಮತ್ತು ಪ್ರಭಾವಿ ಉದ್ಯಮಿಗಳು ಈ ಹಗರಣದಲ್ಲಿ ಶಾಮೀಲಾಗಿದ್ದಾರೆ ಎನ್ನುವ ಬಲವಾದ ಸಂಶಯ ಈ ಗ್ರಾನೈಟ್ ಹಗರಣದಲ್ಲಿದೆ.
ಈ ಕೇಸಿನ ಸಂಬಂಧ ಶನಿವಾರ (ಸೆ 12) ಮದುರೈಗೆ ಬಂದಿದ್ದ ಸಗಾಯಂ, ಸಾಕ್ಷಿ ನಾಶವಾಗಬಾರದೆನ್ನುವ ಕಾರಣಕ್ಕಾಗಿ ರಾತ್ರಿಯಿಡೀ ಸ್ಮಶಾನದಲ್ಲೇ ತಂಗಿ ತಾನೆಂಥ ಖಡಕ್ ಅಧಿಕಾರಿ ಎಂದು ಭ್ರಷ್ಟರಿಗೆ ಸಂದೇಶ ರವಾನಿಸಿದ್ದಾರೆ.

ಕೇಸಿಗೆ ಲೀಗಲ್ ಕಮಿಷನರ್
ಬಹುಕೋಟಿ ಗ್ರಾನೈಟ್ ಕೇಸಿನ ತನಿಖೆಯ ಹೆಚ್ಚಿನ ವಿಚಾರಣೆಗಾಗಿ ಸಗಾಯಂ ಅವರನ್ನು ಮದರಾಸು ನ್ಯಾಯಾಲಯ ಲೀಗಲ್ ಕಮಿಷನರ್ ಆಗಿ ನೇಮಕ ಮಾಡಿತ್ತು. ಈ ಕೇಸಿನ ವಿಚಾರಣೆ ಸಂಬಂಧ ಸಗಾಯಂ ಮದುರೈನಲ್ಲಿರುವ ಸ್ಮಶಾನಕ್ಕೆ ಬಂದಿದ್ದರು.

ಶವ ಹೊರತೆಗೆಯುವ ಕೆಲಸ
ಕೇಸಿಗೆ ಸಂಬಂಧಿಸಿದಂತೆ ಶವ ಪರೀಕ್ಷಣೆ ನಡೆಸಲು ಸಗಾಯಂ, ಮದುರೈ ಜಿಲ್ಲೆ ಮೇಲೂರು ತಾಲೂಕು ಮಾನಿಮುತ್ತೂರು ನದಿ ಬಳಿಯಿರುವ ಮಾಲಂಪಟ್ಟಿ ಹಳ್ಳಿಗೆ ಬಂದಿದ್ದರು. ಇಲ್ಲಿ ಗ್ರಾನೈಟ್ ಹಗರಣಕ್ಕೆ ಸಂಬಂಧಿಸಿದಂತೆ ಹನ್ನೆರಡು ಜನರನ್ನು ಸಮಾಧಿ ಮಾಡಲಾಗಿತ್ತು ಎನ್ನುವ ದೂರಿದೆ.

ದೂರಿನನ್ವಯ ಮಧುರೈಗೆ ಬಂದ ಸಗಾಯಂ
ಸೇವಕೊಡಿಯನ್ ಎನ್ನುವ ವ್ಯಕ್ತಿ ನೀಡಿರುವ ದೂರಿನನ್ವಯ ಸಗಾಯಂ ಶನಿವಾರ ಬೆಳಗ್ಗೆ ಇಲ್ಲಿಗೆ ಆಗಮಿಸಿದ್ದರು. ಹದಿನಾರು ಸಾವಿರ ಕೋಟಿ ಹಗರಣದ ಈ ಕೇಸಿನಲ್ಲಿ ಪಳನಿಸ್ವಾಮಿ ಒಡೆತನದ ಪಿಆರ್ಪಿ ಗ್ರಾನೈಟ್ ಸಂಸ್ಥೆಯು ಮಾನಸಿಕವಾಗಿ ಅಸ್ವಸ್ಥರಾಗಿರುವ ಹನ್ನೆರಡು ಜನರನ್ನು ಈ ಜಾಗದಲ್ಲಿ ಸಮಾಧಿ ಮಾಡಿತ್ತು ಎಂದು ಸೇವಕೊಡಿಯನ್ ಎನ್ನುವವರು ದೂರು ನೀಡಿದ್ದರು.

ರಾತ್ರಿ ಇಡೀ ಕಳೆದ ಸಗಾಯಂ
ಕೇಸಿಗೆ ಸಂಬಂಧಿಸಿದಂತೆ, ಕೆಲವೊಂದು ಪೂರ್ವ ತಯಾರಿ ಕೆಲಸಗಳು ವಿಳಂಬವಾದದ್ದರಿಂದ ಸ್ಮಶಾನದ ಶವ/ಅಸ್ಥಿಪಂಜರ ಮೇಲೆತ್ತುವ ಕೆಲಸ ಆರಂಭಿಸಲಾಗಲಿಲ್ಲ. ಕೇಸಿನ ಗಂಭೀರತೆಯನ್ನು ಅರಿತಿರುವ ಮತ್ತು ಸಾಕ್ಷಿ ನಾಶಕ್ಕೆ ಯಾರೂ ಮುಂದಾಗಬಾರದು ಎನ್ನುವ ಕಾರಣಕ್ಕಾಗಿ ಸಗಾಯಂ, ರಾತ್ರಿ ಇಡೀ ಸ್ಥಳೀಯರು, ಮಾಧ್ಯಮದವರು, ಅಧಿಕಾರಿಗಳ ಜೊತೆ ಹರಟೆ ಹೊಡೆಯುತ್ತಾ ಸಮಯ ಕಳೆದಿದ್ದಾರೆ.

ಮುಂದುವರಿದ ಕೆಲಸ
ಭಾನುವಾರ ಬೆಳಗ್ಗೆ ಸ್ಮಶಾನದಲ್ಲಿ ಮಣ್ಣು ತೆಗೆಯುವ ಕೆಲಸ ಮತ್ತೆ ಆರಂಭಿಸಲಾಯಿತು. ಇದುವರೆಗೆ ಒಟ್ಟು 4 ಅಸ್ಥಿಪಂಜರಗಳು ಸಿಕ್ಕಿವೆ. ಸಗಾಯಂ, ಇನ್ನು ಮೂರ್ನಾಲ್ಕು ದಿನಗಳಲ್ಲಿ ತನ್ನ ವರದಿಯನ್ನು ಹೈಕೋರ್ಟಿಗೆ ನೀಡಲಿದ್ದಾರೆ.












Click it and Unblock the Notifications