12 ವರ್ಷಗಳ ಬಳಿಕ ಭಾರತಕ್ಕೆ ಪಾಕಿಸ್ತಾನ ವಿದೇಶಾಂಗ ಸಚಿವ ಭೇಟಿ; ಎಸ್ ಜೈಶಂಕರ್‌ರಿಂದ ಸ್ವಾಗತ ಹೇಗಿತ್ತು?
ಗೋವಾದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಸಮಾವೇಶಕ್ಕೆ ಶುಕ್ರವಾರ, ಮೇ 5ರಂದು ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಭಾರತಕ್ಕೆ ಬಂದಿಳಿದರು. ಈ ಮೂಲಕ ಬರೋಬ್ಬರಿ 12 ವರ್ಷಗಳ ಬಳಿಕ ಪಾಕಿಸ್ತಾನ ಸರ್ಕಾರ ಮಟ್ಟದ ಹಿರಿಯ ನಾಯಕರೊಬ್ಬರು ಭಾರತಕ್ಕೆ ಭೇಟಿ ನೀಡಿದ್ದಾರೆ.
ಖುದ್ದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿಯನ್ನು ಸ್ವಾಗತಿಸಿದ್ದಾರೆ.

ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಅವರು ಶಾಂಘೈ ಸಹಕಾರ ಸಂಘಟನೆಯ (SCO) ಸಮಾವೇಶದಲ್ಲಿ ಪಾಲ್ಗೊಳ್ಳಲು ಗುರುವಾರ ಗೋವಾಕ್ಕೆ ಆಗಮಿಸಿದ್ದಾರೆ.
ಕಳೆದ ಒಂದು ದಶಕಕ್ಕೂ ಹೆಚ್ಚಿನ ವರ್ಷಗಳಿಂದ ಪಾಕಿಸ್ತಾನದ ಯಾವುದೇ ವಿದೇಶಾಂಗ ಸಚಿವರು ಭಾರತಕ್ಕೆ ಭೇಟಿ ನೀಡಿರಲಿಲ್ಲ. ಇದೀಗ ಬಿಲಾವಲ್ ಭುಟ್ಟೋ ಜರ್ದಾರಿ ಅವರು 12 ವರ್ಷಗಳ ನಂತರ ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನದ ಮೊದಲ ಹಿರಿಯ ನಾಯಕ ಎನಿಸಿಕೊಂಡಿದ್ದಾರೆ.
ಗಡಿ ಸಮಸ್ಯೆ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಕಾರ್ಯಾಚರಣೆ ಸೇರಿದಂತೆ ಹಲವಾರು ವಿಚಾರಗಳಿಂದಾಗಿ ಉಭಯ ದೇಶಗಳ ನಡುವೆ ಸಂಘರ್ಷಗಳು ಮುಂದುವರಿದಿವೆ. ಈ ಎಲ್ಲಾ ಒತ್ತಡದ ನಡುವೆಯೇ ಬಿಲಾವಲ್ ಭುಟ್ಟೋ ಭಾರತಕ್ಕೆ ಭೇಟಿ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.

ಗೋವಾದ ಪಣಜಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬಿಲಾವಲ್ ಭುಟ್ಟೋ ಜರ್ದಾರಿ ಅವರನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪಾಕಿಸ್ತಾನ-ಅಫ್ಘಾನಿಸ್ತಾನ-ಇರಾನ್ ವಿಭಾಗದ ಜಂಟಿ ಕಾರ್ಯದರ್ಶಿ ಜೆಪಿ ಸಿಂಗ್ ಸ್ವಾಗತಿಸಿದರು.
ಬಳಿಕ ಭಾರತ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಸಾಂಪ್ರದಾಯಿಕವಾಗಿ ಕೈ ಮುಗಿದು ಸ್ವಾಗತಿಸಿದರು ಮತ್ತು ಜೊತೆಯಾಗಿ ನಿಂತು ಎರಡು ದೇಶಗಳ ವಿದೇಶಾಂಗ ಸಚಿವರು ಫೋಟೋಗೆ ಪೋಸ್ ನೀಡಿದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಲಾವಲ್ ಭುಟ್ಟೋ, "ಶಾಂಘೈ ಸಹಕಾರ ಸಂಘದ ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗಿಯಾಗಲು ಗೋವಾಗೆ ಬಂದಿರುವುದು ಹಾಗೂ ಈ ಸಭೆಯಲ್ಲಿ ಪಾಕಿಸ್ತಾನದ ನಿಯೋಗವನ್ನು ಮುನ್ನಡೆಸುತ್ತಿರುವುದು ನನಗೆ ಸಂತೋಷ ತಂದಿದೆ. ವಿದೇಶಾಂಗ ಸಚಿವರ ಸಭೆ ಯಶಸ್ವಿಯಾಗಲಿ ಎಂದು ನಾನು ಆಶಿಸುತ್ತೇನೆ," ಎಂದು ಹೇಳಿದ್ದಾರೆ.
ಬಿಲಾವಲ್ ಭುಟ್ಟೋ ಜರ್ದಾರಿ 2 ದಿನಗಳ ಭಾರತ ಪ್ರವಾಸದಲ್ಲಿದ್ದರೂ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೊಂದಿಗೆ ಸಭೆಗೆ ಪಾಕಿಸ್ತಾನದ ಕಡೆಯಿಂದ ಯಾವುದೇ ಮನವಿ ಬಂದಿಲ್ಲ. ಈ ಕಾರಣ ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸಭೆಯ ಯೋಜನೆ ಇಲ್ಲ ಎನ್ನಲಾಗಿದೆ.
ಈ ಹಿಂದೆ 2011ರಲ್ಲಿ ಪಾಕಿಸ್ತಾನದ ಆಗಿನ ವಿದೇಶಾಂಗ ಸಚಿವೆ ಹೀನಾ ರಬ್ಬಾನಿ ಖಾನ್ ಅವರು ಭಾರತಕ್ಕೆ ಭೇಟಿ ನೀಡಿದ್ದರು. ಅಂದಿನ ಯುಪಿಎ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದ ಎಸ್‌ಎಂ ಕೃಷ್ಣ ಅವರೊಂದಿಗೆ ಮಾತುಕತೆ ನಡೆಸಿದ್ದರು.












Click it and Unblock the Notifications