Save Bandipur: ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಭರವಸೆಗೆ ಕನ್ನಡಿಗರ ವಿರೋಧ, ಸೇವ್ ಬಂಡೀಪುರ ಅಭಿಯಾನ
ವಯನಾಡ್‌ನ ನೂತನ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ನಿರ್ಧಾರದ ವಿರುದ್ಧ ಕನ್ನಡಿಗರು ತಿರುಗಿ ಬಿದಿದ್ದಾರೆ. ವಯನಾಡ್‌ನ ನೂತನ ಸಂಸದೆಯಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕೇರಳ - ಕರ್ನಾಟಕದ ಗಡಿಭಾಗವಾಗಿರುವ ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ಮಾಡಿಕೊಡುವುದೇ ನನ್ನ ಮೊದಲ ಆದ್ಯತೆ ಎಂದು ಅವರು ಈಚೆಗೆ ಹೇಳಿದ್ದರು. ಗೆಲುವು ಸಾಧಿಸಿದ ಒಂದೇ ವಾರದಲ್ಲಿ ಅವರು ಈ ರೀತಿ ಮಾತನಾಡಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ವಯನಾಡ್‌ನ ಜನರಿಗೆ ಈ ಸಂಬಂಧ ಭರವಸೆ ನೀಡಿದ್ದು, ಕರ್ನಾಟಕದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿಂದೆ ರಾಹುಲ್‌ಗಾಂಧಿ ಅವರು ಸಹ ಈ ನಿಟ್ಟಿನಲ್ಲಿ ಶ್ರಮಿಸಿದ್ದರು.
ವನ್ಯಜೀವಿಗಳ ಸಂರಕ್ಷಣೆ ಮಾಡುವ ಉದ್ದೇಶದಿಂದಾಗಿ ಬಂಡೀಪುರ ರಾತ್ರಿ ಸಂಚಾರವನ್ನು 2009ರಿಂದಲೇ ನಿಷೇಧ ವಿಧಿಸಲಾಗಿದೆ. ಈ ನಿಷೇಧವನ್ನು ತೆಗೆದು ಹಾಕಬೇಕು ಎಂದು ಕೇರಳ ಸರ್ಕಾರವು ಮನವಿ ಮಾಡುತ್ತಿದೆ. ಈ ನಿಟ್ಟಿನಲ್ಲಿ ಕೇರಳ ಸರ್ಕಾರವು ಕರ್ನಾಟಕದೊಂದಿಗೆ ಹಲವು ಸುತ್ತಿನ ಸಭೆಗಳನ್ನು ನಡೆಸಿದೆ. ಆದರೆ, ಇಲ್ಲಿಯ ವರೆಗೆ ನಡೆದ ಮಾತುಕತೆಗಳು ಫಲ ಕೊಟ್ಟಿಲ್ಲ. ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಸಹ ಕೇರಳ ಸರ್ಕಾರ ಮನವಿಗಳನ್ನು ತಿರಸ್ಕರಿಸಿವೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರೊಂದಿಗೂ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸಭೆ ನಡೆಸಿದ್ದರು. ಆಗಲೂ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿದಿರಲಿಲ್ಲ.

ಇದೀಗ ವಯನಾಡ್‌ನ ಸಂಸದೆಯಾಗಿ ಆಯ್ಕೆಯಾಗುತ್ತಿದ್ದಂತೆಯೇ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಅಲ್ಲಿನ ಜನರಿಗೆ ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ಕಲ್ಪಿಸುವುದೇ ನನ್ನ ಗುರಿ ಎಂದು ಹೇಳಿದ್ದಾರೆ. ವಯನಾಡ್‌ನ ಲೋಕಸಭೆ ಉಪ ಚುನಾವಣೆಯಲ್ಲೂ ಈ ವಿಷಯ ಚರ್ಚೆಯಾಗಿತ್ತು. ಆಗ ಈ ವಿಷಯವನ್ನು ಯಾರೂ ಸಹ ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದೀಗ ಈ ವಿಷಯ ಗಂಭೀರವಾಗಿ ಚರ್ಚೆಯಾಗುತ್ತಿದೆ. ಕರ್ನಾಟಕ - ಕೇರಳ ರಾಜ್ಯಗಳ ನಡುವೆ ಹಲವು ದಶಕಗಳಿಂದ ಈ ವಿಚಾರವಾಗಿ ಚರ್ಚೆ ನಡೆಯುತ್ತಿದೆ.
ವನ್ಯಜೀವಿಗಳ ಸಂರಕ್ಷಣೆ ಹಾಗೂ ಮಾನವ - ಪ್ರಾಣಿಗಳ ಸಂರ್ಘವನ್ನು ತಪ್ಪಿಸುವ ಉದ್ದೇಶದಿಂದ ಈ ಭಾಗದಲ್ಲಿ ರಾತ್ರಿ ವೇಳೆ ಸಂಚಾರವನ್ನು ನಿರ್ಬಂಧಿಸಲಾಗಿದೆ. ಆದರೆ, ಕೇರಳದವರು ಕರ್ನಾಟಕ ಅಥವಾ ಉತ್ತರ ಭಾರತದ ರಾಜ್ಯಗಳಿಗೆ ಪ್ರವೇಶಿಸುವುದಕ್ಕೆ ಇದು ಪ್ರಮುಖ ಮಾರ್ಗವಾಗಿದೆ. ಹೀಗಾಗಿ, ಈ ಭಾಗದಲ್ಲಿ ಸಂಚಾರಕ್ಕೆ ಅವಕಾಶ ನೀಡಬೇಕು ಎನ್ನುವ ಆಗ್ರಹವನ್ನು ಕೇರಳ ಮುಂದುವರಿಸಿದೆ. ಆದರೆ, ಕರ್ನಾಟಕವು ತನ್ನ ಪಟ್ಟು ಬಿಟ್ಟುಕೊಟ್ಟಿಲ್ಲ.

ಆದರೆ, ಪ್ರಿಯಾಂಕಾ ಗಾಂಧಿ ಅವರು ಹಾಗೂ ಡಿ.ಕೆ ಶಿವಕುಮಾರ್ ಅವರು ಈ ವಿಚಾರವಾಗಿ ವಯನಾಡ್ ಪ್ರಚಾರ ಸಭೆಗಳಲ್ಲೇ ಮಾತನಾಡಿದ್ದರು ಎನ್ನಲಾಗಿದೆ. ಅಲ್ಲದೇ ಡಿ.ಕೆ ಶಿವಕುಮಾರ್ ಅವರು ಸಹ ರಾತ್ರಿ ಸಂಚಾರವನ್ನು ತೆಗೆಯುವ ಬಗ್ಗೆ ಚರ್ಚೆ ನಡೆದಿದೆ ಎಂದಿದ್ದರು. ಈ ಬೆಳವಣಿಗೆಗಳು ಕನ್ನಡಿಗರನ್ನು ಕೆಣಕಿದೆ. ಯಾವುದೇ ಕಾರಣಕ್ಕೂ ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ಕೊಡಬಾರದು ಎಂದು ಕನ್ನಡಿಗರು ಆಗ್ರಹಿಸಿದ್ದು. ಸೋಷಿಯಲ್ ಮೀಡಿಯಾದಲ್ಲಿ ಸೇವ್ ಬಂಡೀಪುರ ಮತ್ತೆ ಟ್ರೆಂಡ್ ಆಗುತ್ತಿದೆ.
ಈ ಬಗ್ಗೆ ಫೇಸ್‌ಬುಕ್, ಟ್ವೀಟರ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗಿದೆ. ಫೇಸ್‌ಬುಕ್‌ನಲ್ಲಿ ಕವಿ ರಾಜೇಂದ್ರ ಪ್ರಸಾದ್ ಅವರು, ವಯನಾಡಿಗೆ ಎಂತಹವರೇ ಬಂದು ಸಂಸದರು, ಮಂತ್ರಿಗಳು ಕಡೆಗೆ ಪ್ರಧಾನಿಯೇ ಆಗಬಹುದು. ಹಾಗೆಂದ ಮಾತ್ರಕ್ಕೆ ನಿಯಮಗಳನ್ನು ಗಾಳಿಗೆ ತೂರಿ ಬಂಡೀಪುರ ರಸ್ತೆಯನ್ನು ತೆರೆಯಲು ಅವಕಾಶವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮನುಷ್ಯನಷ್ಟೇ ಪರಿಸರವೂ ಮುಖ್ಯ. ಈಗ ಇರುವ ನಿಯಮ ಇನ್ನೂ ಬಿಗಿಯಾಗಬೇಕೇ ಹೊರತು ಸಡಿಲಗೊಳಿಸಲು ನಾವು ಬಿಡಬಾರದು. ಇಂತಹ ಆತಂಕಕಾರಿ ಭರವಸೆಗಳನ್ನು ನೀಡುವುದನ್ನ ಕಾಂಗ್ರೆಸ್ ಸಂಸದರು ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಬಂಡೀಪುರ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನಗಳ ಎರಡೂ ರಾಜ್ಯದ ಅಂಚುಗಳನ್ನು ಸುಮ್ಮನೆ ಗಮನಿಸಿದರೆ ಸಾಕು ಯಾರು ಕಾಡನ್ನು ಸಂರಕ್ಷಿಸುತ್ತಿರುವುದು ಎಂದು ಅರಿವಾಗುತ್ತದೆ. ಈ ವಿಷಯದಲ್ಲಿ ರಾಜಿ ಇಲ್ಲವೇ ಇಲ್ಲ ಎಂದಿದ್ದಾರೆ. ಇದೇ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸಿದ್ದಾರೆ.












Click it and Unblock the Notifications