ಸನೋಫಿ, ಜಿಎಸ್‌ಕೆ ಕೊರೊನಾ ಲಸಿಕೆಯ 3ನೇ ಹಂತದ ಪ್ರಯೋಗಕ್ಕೆ ಅನುಮತಿ
ನವದೆಹಲಿ, ಜುಲೈ 08: ಭಾರತದಲ್ಲಿ ಈಗಾಗಲೇ ಮೂರು ಕೊರೊನಾ ಲಸಿಕೆಗಳಿಗೆ ಅನುಮೋದನೆ ದೊರೆತಿದ್ದು, ಇನ್ನಷ್ಟು ವಿದೇಶಿ ಕೊರೊನಾ ಲಸಿಕೆಗಳು ಅನುಮೋದನೆಗಾಗಿ ಸರದಿಯಲ್ಲಿವೆ. ಇದೀಗ ಫ್ರೆಂಚ್ ಔಷಧ ತಯಾರಿಕಾ ಸಂಸ್ಥೆ ಸನೋಫಿ ಹಾಗೂ ಅದರ ಬ್ರಿಟಿಷ್ ಪಾಲುದಾರ ಜಿಎಸ್‌ಕೆ (ಗ್ಲಾಕ್ಸೊಸ್ಮಿತ್‌ಕ್ಲೈನ್) ಅಭಿವೃದ್ಧಿಪಡಿಸಿರುವ ಲಸಿಕೆಯ ಮೂರನೇ ಹಂತದ ವೈದ್ಯಕೀಯ ಪ್ರಯೋಗಕ್ಕೆ ಭಾರತದಲ್ಲಿ ಅನುಮತಿ ನೀಡಲಾಗಿದೆ.
ಅಮೆರಿಕದ ಆಪರೇಷನ್ ವಾರ್ಪ್ ಸ್ಪೀಡ್ ನ ಭಾಗವಾಗಿ ಆಯ್ಕೆಯಾಗಿರುವ 6 ಪ್ರಮುಖ ಕೊರೊನಾ ಲಸಿಕೆಗಳ ಪೈಕಿ ಸನೋಫಿ ಲಸಿಕೆಯೂ ಒಂದು. ವೈರಲ್ ಪ್ರೋಟಿನ್ ಆಧಾರ ಲಸಿಕೆ ಬಳಸುವ ಸನೋಫಿ, ಬಾಧಿತ ಕೋಶಗಳೊಳಗೆ ಪ್ರೋಟಿನ್ ವೃದ್ದಿಯತ್ತ ಗಮನ ಹರಿಸಲಿದೆ. ಜಿಎಸ್‌ಕೆ ಸಂಸ್ಥೆ ಪ್ರತಿರೋಧಕ ಶಕ್ತಿ ಹೆಚ್ಚಿಸುವ ಪ್ರೋಟಿನ್ ಪೂರಕ ಅಂಶಗಳನ್ನು ಒದಗಿಸಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಲಸಿಕೆಯ ಸುರಕ್ಷತೆ, ದಕ್ಷತೆ, ರೋಗನಿರೋಧಕ ಶಕ್ತಿಯ ವಿಶ್ಲೇಷಣೆ ನಡೆಸಲು ಸದ್ಯಕ್ಕೆ ಇಲ್ಲಿ ಅನುಮತಿ ದೊರೆತಿದೆ.
ಈ ಪ್ರಯೋಗವು 18 ವರ್ಷ ಮೇಲ್ಪಟ್ಟ ಸುಮಾರು 35 ಸಾವಿರ ಮಂದಿಯನ್ನು ಒಳಗೊಳ್ಳಲಿದೆ. "ಸನೋಫಿ ಪಾಸ್ಚರ್ ಮೂರನೇ ಹಂತದ ವೈದ್ಯಕೀಯ ಅಧ್ಯಯನದಲ್ಲಿ ಭಾರತ ಭಾಗಿಯಾಗಲಿದೆ" ಎಂದು ಸನೋಫಿ ಪಾಸ್ಚರ್ ಇಂಡಿಯಾದ ಮುಖ್ಯಸ್ಥೆ ಅನ್ನಪೂರ್ಣ ದಾಸ್ ತಿಳಿಸಿದ್ದಾರೆ.

"ಕೊರೊನಾ ಸೋಂಕು ಹಲವು ರೂಪಾಂತರಗಳ ಸೃಷ್ಟಿಗೆ ಕಾರಣವಾಗಿದೆ. ಈ ಸವಾಲನ್ನು ಎದುರಿಸಲು ಲಸಿಕೆಗಳ ಅಭಿವೃದ್ಧಿಯೂ ಆಗಬೇಕಿದೆ. ಇದರಲ್ಲಿ ಸನೋಫಿ ಲಸಿಕೆಯು ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ" ಎಂದು ಹೇಳಿದ್ದಾರೆ.
ಅಮೆರಿಕದ ಜೊತೆಗಷ್ಟೇ ಅಲ್ಲದೆ ಯುರೋಪಿಯನ್ ಯೂನಿಯನ್ ಜೊತೆ 300 ಮಿಲಿಯನ್ ಡೋಸ್ ನೀಡುವ ಒಪ್ಪಂದಕ್ಕೆ ಸನೋಫಿ ಹಾಗೂ ಜಿಎಸ್‌ಕೆ ಸಹಿ ಹಾಕಿವೆ. ಸನೋಫಿ 200 ಮಿಲಿಯನ್ ಡೋಸ್ ನೀಡುವ ಇನ್ನೊಂದು ಅಂತರರಾಷ್ಟ್ರೀಯ ಒಪ್ಪಂದ ಮಾಡಿಕೊಂಡಿದೆ. 2021ರ ವೇಳೆಗೆ 1 ಬಿಲಿಯನ್ ಡೋಸ್ ಭರವಸೆಯನ್ನು ಈ ಎರಡು ಸಂಸ್ಥೆಗಳು ನೀಡಿವೆ.
ಈ ಹಿಂದೆ ವೃದ್ಧರ ಮೇಲೆ ಸನೋಫಿ-ಗ್ಲಾಕ್ಸೊ ಸ್ಮಿತ್‌ಕ್ಲೈನ್ ಕೊರೊನಾ ಲಸಿಕೆ ಪ್ರಯೋಗಿಸಿದ್ದು, ಪ್ರಯೋಗ ವಿಫಲವಾಗಿದ್ದಾಗಿ ತಿಳಿದುಬಂದಿತ್ತು.












Click it and Unblock the Notifications