ಸಲಿಂಗಕಾಮ ಅಪರಾಧವಲ್ಲ ಅನ್ನೋದಕ್ಕೆ ನಮ್ಮ ಸಹಮತವೂ ಇದೆ: ಆರೆಸ್ಸೆಸ್
'ಸಲಿಂಗಕಾಮ ಅಪರಾಧವಲ್ಲ' ಎಂಬುದನ್ನು ಆರೆಸ್ಸೆಸ್ (ರಾಷ್ಟ್ರೀಯ ಸ್ವಯಂಸೇವಕ ಸಂಘ) ಕೂಡ ಗುರುವಾರ ಹೇಳಿದೆ. ಆದರೆ ಸಲಿಂಗಿಗಳ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದು, ಅದು 'ಅಸಹಜ' ಎಂದು ಅಭಿಪ್ರಾಯಪಟ್ಟಿದೆ.
ಸಹಮತದ ಸಲಿಂಗ ಲೈಂಗಿಕ ಸಂಬಂಧವು ಅಪರಾಧವಲ್ಲ. ಇದು ಸಮಾನತೆ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಐಪಿಸಿ ಸೆಕ್ಷನ್ 377ರ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ. ಆ ನಂತರ ಆರೆಸ್ಸೆಸ್ ನಿಂದ ಹೇಳಿಕೆ ಬಂದಿದೆ.
"ಸುಪ್ರೀಂ ಕೋರ್ಟ್ ತೀರ್ಪಿನಂತೆ ನಾವು ಕೂಡ ಸಲಿಂಗಕಾಮವನ್ನು ಅಪರಾಧ ಅಂತ ಪರಿಗಣಿಸುವುದಿಲ್ಲ" ಎಂದು ಆರೆಸ್ಸೆಸ್ 'ಪ್ರಚಾರ್ ಪ್ರಮುಖ್' ಅರುಣ್ ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪ್ರಚಾರ್ ಪ್ರಮುಖ್ ಹುದ್ದೆಯಲ್ಲಿ ಇರುವವರು ಸಂಘದ ಅಧಿಕೃತ ವಕ್ತಾರರು.

ಆದರೆ, ಸಲಿಂಗ ಮದುವೆ ಮತ್ತು ಅಂಥ ಸಂಬಂಧಗಳು 'ಪ್ರಕೃತಿಗೆ ಹೊಂದಾಣಿಕೆಯಾಗುವುದಿಲ್ಲ'. "ಈ ಸಂಬಂಧಗಳು ಸಹಜವಲ್ಲ. ಆದ್ದರಿಂದ ಇಂತಹ ಸಂಬಧಗಳನ್ನು ನಾವು ಬೆಂಬಲಿಸುವುದಿಲ್ಲ" ಎಂದು ಸಂಘದ ನಿಲವು ತಿಳಿಸಿದ್ದಾರೆ.
ಭಾರತದ ಸಮಾಜವು ಸಾಂಪ್ರದಾಯಿಕವಾಗಿ ಇಂಥ ಸಂಬಂಧಗಳಿಗೆ ಮಾನ್ಯತೆ ನೀಡಿಲ್ಲ. ಮಾನವರು ಸಹಜವಾಗಿ ಅನುಭವಗಳಿಂದ ಕಲಿಯುತ್ತಾರೆ. ಆದ್ದರಿಂದ ಈ ವಿಷಯದ ಬಗ್ಗೆ ಚರ್ಚೆಗಳಾಗಬೇಕು ಮತ್ತು ಸಾಮಾಜಿಕ ಹಾಗೂ ಮಾನಸಿಕ ಮಟ್ಟಗಳ ನಿರ್ವಹಣೆ ಸರಿಯಾಗಿ ಆಗಬೇಕು" ಎಂದು ಹೇಳಿದ್ದಾರೆ.












Click it and Unblock the Notifications