ಮಾರ್ಚ್ 15 ರಿಂದ ಅಂತಾರಾಷ್ಟ್ರೀಯ ವಿಮಾನ ಪುನರಾರಂಭ ಸಾಧ್ಯತೆ
ನವದೆಹಲಿ, ಫೆಬ್ರವರಿ 21: ನಿಯಮಿತ ಅಂತಾರಾಷ್ಟ್ರೀಯ ವಿಮಾನಗಳು ಮಾರ್ಚ್ 15 ರಿಂದ ಪುನರಾರಂಭಗೊಳ್ಳುವ ಸಾಧ್ಯತೆಯಿದೆ. ವಿದೇಶಿ ಆಗಮನ ಮತ್ತು ನಿರ್ಗಮನಕ್ಕಾಗಿ ಭಾರತೀಯ ವಿಮಾನ ನಿಲ್ದಾಣಗಳಲ್ಲಿ ಮಾರ್ಗಸೂಚಿ ಹೊರಡಿಸುವ ಸಾಧ್ಯತೆ ಇದೆ ಎಂದು ಸರ್ಕಾರಿ ಮೂಲಗಳು ಸೋಮವಾರ ತಿಳಿಸಿವೆ.
ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ದೇಶದಲ್ಲಿ ಅಂತಾರಾಷ್ಟ್ರೀಯ ವಿಮಾನವನ್ನು ನಿರ್ಬಂಧ ಮಾಡಲಾಗಿದೆ. ಈಗ ಕೋವಿಡ್ ಪ್ರಕರಣಗಳಲ್ಲಿ ನಿರಂತರ ಕುಸಿತವನ್ನು ಗಮನಿಸಿದರೆ, ಆರೋಗ್ಯ ಸಚಿವಾಲಯದ ಈ ಬಗ್ಗೆ ಮಾತುಕತೆ ನಡೆಸಿ ನಂತರ ನಾಗರಿಕ ವಿಮಾನಯಾನ ಸಚಿವಾಲಯವು ನಿಗದಿತ ಅಂತಾರಾಷ್ಟ್ರೀಯ ವಿಮಾನಗಳನ್ನು ಪುನರಾರಂಭಿಸುವ ನಿರ್ಧಾರವನ್ನು ಕೈಗೊಳ್ಳಬಹುದು ಎಂದು ಮಾಹಿತಿ ಲಭ್ಯವಾಗಿದೆ.
ಆದರೆ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದಿಂದ ಇದುವರೆಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಆದರೆ "ಮಾರ್ಚ್ 15 ರಿಂದ ನಿಯಮಿತ ಅಂತಾರಾಷ್ಟ್ರೀಯ ವಿಮಾನಗಳು ಪುನರಾರಂಭಗೊಳ್ಳುವ ಸಾಧ್ಯತೆಯಿದೆ. ಫೆಬ್ರವರಿ 14 ರಿಂದ ಜಾರಿಗೆ ಬಂದಿರುವ ಅಂತರರಾಷ್ಟ್ರೀಯ ಆಗಮನದ ಮಾರ್ಗಸೂಚಿಗಳನ್ನು ಈ ವಿಮಾನಗಳ ಪ್ರಯಾಣಿಕರಿಗೆ ವಿಮಾನ ನಿಲ್ದಾಣಗಳಲ್ಲಿ ಅನುಸರಿಸಲಾಗುತ್ತದೆ," ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಭಾರತದಲ್ಲಿ ನಿಗದಿತ ಅಂತರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ನಿಷೇಧವು ಫೆಬ್ರವರಿ 28 ರವರೆಗೆ ಜಾರಿಯಲ್ಲಿರುತ್ತದೆ. ಕೊರೊನಾ ವೈರಸ್ ಸಾಂಕ್ರಾಮಿಕ ಕಾರಣದಿಂದಾಗಿ ಮಾರ್ಚ್ 23, 2020 ರಿಂದ ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ. ಏರ್ ಬಬಲ್ ವ್ಯವಸ್ಥೆಗಳ ಅಡಿಯಲ್ಲಿ ಜುಲೈ 2020 ರಿಂದ ಭಾರತ ಮತ್ತು ಸುಮಾರು 40 ದೇಶಗಳ ನಡುವೆ ವಿಶೇಷ ಪ್ರಯಾಣಿಕ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ.
ಭಾರತದಲ್ಲಿ ಪರಿಷ್ಕೃತ ಮಾರ್ಗಸೂಚಿ
ಫೆಬ್ರವರಿ 14 ರಿಂದ ಜಾರಿಗೆ ಬರುವಂತೆ ಆರೋಗ್ಯ ಸಚಿವಾಲಯವು ಅಂತರರಾಷ್ಟ್ರೀಯ ಆಗಮನಕ್ಕಾಗಿ ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಿದೆ. ಕಡ್ಡಾಯ ಏಳು ದಿನಗಳ ಹೋಮ್ ಕ್ವಾರಂಟೈನ್ ಅನ್ನು ತೆಗೆದುಹಾಕಲಾಗಿದೆ. ಎಂಟನೇ ದಿನದಲ್ಲಿ ಅವರು ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ಕೈಗೊಳ್ಳುವ ಅಗತ್ಯವನ್ನು ಕೂಡಾ ತೆಗೆದು ಹಾಕಲಾಗಿದೆ. ಪ್ರಯಾಣದ 72 ಗಂಟೆಗಳ ಮೊದಲು ಕೋವಿಡ್ ನೆಗೆಟಿವ್ ವರದಿ ಅಪ್‌ಲೋಡ್ ಮಾಡುವುದರ ಹೊರತಾಗಿ, ಪರಸ್ಪರ ಆಧಾರದ ಮೇಲೆ ದೇಶಗಳಿಂದ ಒದಗಿಸಲಾದ ಸಂಪೂರ್ಣ ಕೋವಿಡ್ ಲಸಿಕೆ ಪ್ರಮಾಣಪತ್ರವನ್ನು ಅಪ್‌ಲೋಡ್ ಮಾಡುವ ಆಯ್ಕೆಯನ್ನು ನೀಡಲಾಗಿದೆ. ಅಲ್ಲದೆ, ಅಪಾಯದಲ್ಲಿರುವ ದೇಶಗಳು ಮತ್ತು ಇತರ ದೇಶಗಳ ನಿರ್ಬಂಧ ಪಟ್ಟಿಯನ್ನು ತೆಗೆದು ಹಾಕಲಾಗಿದೆ.
ಈ ಹಿಂದೆ ಡಿಸೆಂಬರ್ 15ರಿಂದ ವಿಮಾನಗಳ ಸಂಚಾರವನ್ನು ಪುನಃ ಆರಂಭಿಸುವುದಾಗಿ ಘೋಷಣೆ ಮಾಡಲಾಗಿತ್ತು. ಆದರೆ ಕೊರೊನಾ ವೈರಸ್ ರೂಪಾಂತರ ಓಮಿಕ್ರಾನ್ ಅದಕ್ಕೆ ತಡೆ ಹಾಕಿತ್ತು. ಓಮಿಕ್ರಾನ್ ಭೀತಿ ಹಿನ್ನಲೆಯಲ್ಲಿ ಡಿಸೆಂಬರ್ 15ರಿಂದ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಅವಕಾಶ ನೀಡಿಲ್ಲ. ಬದಲಾಗಿ ನಿರ್ಬಂಧವನ್ನು ವಿಸ್ತರಣೆ ಮಾಡಿತ್ತು. "ಜಾಗತಿಕ ಸನ್ನಿವೇಶದ ದೃಷ್ಟಿಯಿಂದ ಎಲ್ಲಾ ಪಾಲುದಾರರೊಂದಿಗೆ ಸಮಾಲೋಚಿಸಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಅಂತರರಾಷ್ಟ್ರೀಯ ವಿಮಾನ ಸೇವೆಗಳ ಪುನರಾರಂಭದ ದಿನಾಂಕವನ್ನು ಸೂಕ್ತ ಸಮಯದಲ್ಲಿ ತಿಳಿಸಲಾಗುವುದು" ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ಹೇಳಿತ್ತು.
ಭಾರತವು 2020ರ ಮಾರ್ಚ್‌ನಲ್ಲಿ ಕೋವಿಡ್ ಸೋಂಕು ತೀವ್ರ ಸ್ವರೂಪ ಪಡೆದುಕೊಂಡಾಗ ಲಾಕ್‌ಡೌನ್ ಘೋಷಣೆ ಮಾಡಿತು. ಆಗ ದೇಶಿಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಸಂಚಾರ ರದ್ದುಗೊಳಿಸಿತು. ಬಳಿಕ ಸೋಂಕು ಹತೋಟಿಗೆ ಬಂದಾಗ ಷರತ್ತುಗಳ ಅನ್ವಯ ದೇಶಿಯ ವಿಮಾನಗಳ ಹಾರಾಟವನ್ನು ಆರಂಭಿಸಲಾಯಿತು. ನಂತರ ವಂದೇ ಭಾರತ್ ಮತ್ತು ಏರ್ ಬಬಲ್ ಒಪ್ಪಂದದ ಮೂಲಕ ಕೆಲವು ದೇಶಗಳಿಗೆ ವಿಮಾನ ಸೇವೆಯನ್ನು ಆರಂಭಿಸಲಾಯಿತು. ಡಿಸೆಂಬರ್ 15ರಿಂದ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಪುನಃ ಆರಂಭಿಸಲಾಗುತ್ತದೆ ಎಂದು ಘೋಷಣೆ ಮಾಡಲಾಗಿತ್ತು. ಆದರೆ ಈಗ ಓಮಿಕ್ರಾನ್‌ನಿಂದ ಅದನ್ನು ಸಹ ಮುಂದೂಡಲಾಗಿತ್ತು. (ಒನ್‌ಇಂಡಿಯಾ ಸುದ್ದಿ)












Click it and Unblock the Notifications