ಎಟಿಎಂ ಹಣ ವಿತ್‌ಡ್ರಾ ಶುಲ್ಕ ಹೆಚ್ಚಳ: ಮೋದಿ ಸರ್ಕಾರದ ಮೇಲೆ ಖರ್ಗೆ ಗಂಭೀರ ಆರೋಪ
ಮೇ 1ರಿಂದ ಎಲ್ಲ ಬ್ಯಾಂಕ್‌ಗಳ ಎಟಿಎಂ ವಿತ್‌ಡ್ರಾ ಶುಲ್ಕ ಏರಿಸುವುದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹೇಳಿದೆ. ಈ ಬಗ್ಗೆ ಖಂಡನೆ ವ್ಯಕ್ತಪಡಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ದುರದೃಷ್ಟವಶಾತ್ ದೇಶದ ಬ್ಯಾಂಕುಗಳನ್ನು ಪ್ರಧಾನಿ ಮೋದಿ ಅವರ ಸರ್ಕಾರ 'ಕಲೆಕ್ಷನ್ ಏಜೆಂಟ್'ಗಳನ್ನಾಗಿ ಮಾಡಿಕೊಂಡಿದೆ ಎಂದು ಆರೋಪಿಸಿದ್ದಾರೆ. 2018 ಮತ್ತು 2024ರ ನಡುವೆ ಕನಿಷ್ಠ ಮೊತ್ತ (ಮಿನಿಮಮ್ ಬ್ಯಾಲೆನ್ಸ್) ಕಾಯ್ದುಕೊಳ್ಳದ ಉಳಿತಾಯ ಖಾತೆಗಳು ಮತ್ತು ಜನಧನ ಖಾತೆಗಳಿಂದ ಕನಿಷ್ಠ 43,500 ಕೋಟಿ ರೂಪಾಯಿ ಸಂಗ್ರಹಿಸಿವೆ ಎಂದು ದೂರಿದ್ದಾರೆ.
ಪ್ರತಿ ವರ್ಷವೂ 100 ರೂಪಾಯಿಯಿಂದ 200 ರೂಪಾಯಿ ನಿಷ್ಕ್ರಿಯತೆಯ ಶುಲ್ಕ, ಬ್ಯಾಂಕ್ ಸ್ಟೇಟ್ಮೆಂಟ್ ವಿತರಣೆಗೆ ರೂ.50ರಿಂದ ರೂ 100 ರೂಪಾಯಿ, ಎಸ್‌ಎಂಎಸ್ ಎಚ್ಚರಿಕೆಗಳಿಗೆ ಪ್ರತಿ ತ್ರೈಮಾಸಿಕಕ್ಕೆ 20ರಿಂದ 25 ರೂಪಾಯಿ ಶುಲ್ಕ, ಎನ್‌ಇಎಫ್‌ಟಿ, ಡಿಮ್ಯಾಂಡ್ ಡ್ರಾಫ್ಟ್ ಶುಲ್ಕಗಳ ಹೆಚ್ಚುವರಿ ಹೊರೆ. ಸಹಿ ಬದಲಾವಣೆಗಳಂತಹ ಕೆವೈಸಿ ನವೀಕರಣಗಳಿಗೂ ಶುಲ್ಕ ಸೇರಿ ಹೀಗೆ ದೇಶದ ಜನರನ್ನು ಕೇಂದ್ರ ಸರ್ಕಾರ ಬ್ಯಾಂಕ್ ಶುಲ್ಕಗಳಿಂದ ಲೂಟಿ ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಈ ಹಿಂದೆ, ಕೇಂದ್ರ ಸರ್ಕಾರವು ಬ್ಯಾಂಕ್ ಶುಲ್ಕಗಳಿಂದ ಸಂಗ್ರಹಿಸಲಾದ ಮೊತ್ತದ ಅಂಕಿ ಅಂಶಗಳನ್ನು ಸಂಸತ್ತಿನಲ್ಲಿ ಒದಗಿಸುತ್ತಿತ್ತು. ಆದರೆ ಈಗ ಆರ್‌ಬಿಐನಂತಹ ದತ್ತಾಂಶವನ್ನು ನಿರ್ವಹಿಸುವುದಿಲ್ಲ ಎಂದು ಹೇಳುವ ಮೂಲಕ ಈ ಪದ್ಧತಿಯನ್ನು ಸಹ ನಿಲ್ಲಿಸಲಾಗಿದೆ. ಗ್ರಾಹಕರು ಎಟಿಎಂನಿಂದ ಹಣ ಪಡೆಯುವುದಕ್ಕೆ ನಿಗದಿಪಡಿಸಿರುವ ಶುಲ್ಕ ಹೆಚ್ಚಿಸಲು ಬ್ಯಾಂಕುಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅನುಮತಿ ನೀಡಿದೆ ಎಂದು ಕಿಡಿಕಾರಿದ್ದಾರೆ. ನೋವಿನ ಬೆಲೆ ಏರಿಕೆ ಹಾಗೂ ಅನಿಯಂತ್ರಿತ ಲೂಟಿಯೇ ಸುಲಿಗೆಗಾಗಿ ಬಿಜೆಪಿಯ ಮಂತ್ರ ಎಂದು ದೂರಿದ್ದಾರೆ.
ಆರ್‌ಬಿಐ ಎಟಿಎಂ ಇಂಟರ್‌ಚೇಂಜ್ ಶುಲ್ಕವನ್ನು ಹೆಚ್ಚಿಸಿದ್ದು ಇದೇ ಮೇ 1ರಿಂದ ದೇಶದ ಎಲ್ಲ ಎಟಿಎಂಗಳಲ್ಲಿ ಹಣ ವಿತ್‌ಡ್ರಾ ದುಬಾರಿಯಾಗಲಿದೆ ಎಂದು ಹೇಳಿದೆ. ಹಣಕಾಸಿನ ವಹಿವಾಟುಗಳಿಗಾಗಿ ಎಟಿಎಂಗಳನ್ನು ಅವಲಂಬಿಸಿರುವ ಗ್ರಾಹಕರು ತಮ್ಮ ಉಚಿತ ವಹಿವಾಟು ಮಿತಿಯನ್ನು ಮೀರಿದಾಗ ಹೆಚ್ಚುವರಿ ಶುಲ್ಕ ಪಾವತಿಸಬೇಕು ಎಂದು ಆರ್‌ಬಿಐ ತಿಳಿಸಿದೆ.
ಎಟಿಎಂ ಸೇವೆ ಒದಗಿಸಲು ಒಂದು ಬ್ಯಾಂಕ್ ಮತ್ತೊಂದು ಬ್ಯಾಂಕ್‌ಗೆ ಪಾವತಿಸುವ ಶುಲ್ಕವೇ ಈ ಎಟಿಎಂ ಇಂಟರ್‌ಚೇಂಜ್ ಶುಲ್ಕ ಎನ್ನಲಾಗಿದೆ. ಸಾಮಾನ್ಯವಾಗಿ ಇದು ಪ್ರತಿ ವಹಿವಾಟಿಗೆ ನಿಗದಿತ ಮೊತ್ತವಾಗಿದ್ದು, ಇದನ್ನು ಗ್ರಾಹಕರಿಗೆ ಅವರ ಬ್ಯಾಂಕಿಂಗ್ ವೆಚ್ಚದ ಭಾಗವಾಗಿ ವರ್ಗಾಯಿಸಲಾಗುವುದು. ಈಗ ಹೆಚ್ಚುತ್ತಿರುವ ಕಾರ್ಯಾಚರಣೆಯ ವೆಚ್ಚಗಳು ತಮ್ಮ ವ್ಯವಹಾರದ ಮೇಲೆ ಪರಿಣಾಮ ಬೀರುತ್ತಿವೆ ಎಂದು ಎಟಿಎಂ ಆಪರೇಟರ್‌ಗಳು ಹೇಳಿದ್ದರು. ಈ ಹಿನ್ನೆಲೆ ಆರ್‌ಬಿಐ ಈ ಶುಲ್ಕಗಳನ್ನು ಪರಿಷ್ಕರಿಸಲು ನಿರ್ಧರಿಸಿದ್ದು, ಮೇ 1ರಿಂದ ಎಟಿಎಂ ವಿತ್‌ಡ್ರಾ ದುಬಾರಿಯಾಗಲಿದೆ. ಆರ್‌ಬಿಐ ಶುಲ್ಕ ಹೆಚ್ಚಳಕ್ಕೆ ಅನುಮೋದನೆಯೂ ಸಿಕ್ಕಿದೆ.

ಈ ಶುಲ್ಕ ಹೆಚ್ಚಳವು ದೇಶದಾದ್ಯಂತ ಎಲ್ಲ ಎಟಿಎಂಗಳಿಗೆ ಅನ್ವಯವಾಗಲಿದೆ. ಬ್ಯಾಂಕುಗಳು ಎಟಿಎಂ ಮತ್ತು ಸಂಬಂಧಿತ ಸೇವೆಗಳಿಗಾಗಿ ದೊಡ್ಡ ಹಣಕಾಸು ಸಂಸ್ಥೆಗಳನ್ನು ಅವಲಂಬಿಸಿದ್ದು, ಇದರಿಂದಾಗಿ ಅವು ಹೆಚ್ಚುತ್ತಿರುವ ವೆಚ್ಚಗಳಿಗೆ ಗುರಿಯಾಗಲಿವೆ. ಹಾಗಾಗಿ ಮೇ 1ರಿಂದ ಗ್ರಾಹಕರು ತಮ್ಮ ಉಚಿತ ಮಿತಿಯನ್ನು ಮೀರಿದರೆ, ಪ್ರತಿ ಹಣಕಾಸು ವಹಿವಾಟಿಗೆ ಹೆಚ್ಚುವರಿಯಾಗಿ 2 ರೂಪಾಯಿಯನ್ನು ಪಾವತಿಸಬೇಕು ಎಂದು ತಿಳಿಸಿದೆ.












Click it and Unblock the Notifications