ರೇಷನ್ ಕಾರ್ಡ್ ಇರುವವರಿಗೆ ಕೇಂದ್ರ ಸರ್ಕಾರದ ಉಡುಗೊರೆ: ಇನ್ನು ಮುಂದೆ ಡಿಜಿಟಲ್ ವಾಲೆಟ್‌ಗೆ ಬೀಳುವುದು ಕರೆನ್ಸಿ
ದೇಶದಲ್ಲಿ ಡಿಜಿಟಲ್ ವಹಿವಾಟುಗಳ ಬಳಕೆಯನ್ನು ಹೆಚ್ಚಿಸಲು ಸರ್ಕಾರವು ಹೊಸ ಹೆಜ್ಜೆಯನ್ನು ಇರಿಸಿದೆ. ಇದೀಗ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಬಳಸಿ ಸರ್ಕಾರಿ ಪಡಿತರ ಅಂಗಡಿಗಳಿಂದ ಪಡಿತರವನ್ನು ಖರೀದಿಸಬಹುದು. ಡಿಜಿಟಲ್ ಕರೆನ್ಸಿ ಮೂಲಕ ಪಡಿತರ ಮಾರಾಟ ಮಾಡುವ ಈ ಪ್ರಯೋಗವನ್ನು ಮೊದಲು ಚಂಡೀಗಢದಿಂದ ಆರಂಭಿಸಲಾಗಿದೆ.
ಈ ಯೋಜನೆಯನ್ನು ಅಧಿಕೃತವಾಗಿ 2026 ರ ಸ್ವಾತಂತ್ರ್ಯ ದಿನಾಚರಣೆಯ ಒಂದು ದಿನ ಮೊದಲು ಅಂದರೆ ನಿನ್ನೆಯಿಂದ ಆರಂಭಿಸಲಾಗಿದೆ. ಈ ಸೌಲಭ್ಯವನ್ನು ಪ್ರಾರಂಭವಾದ ಹಿನ್ನೆಲೆಯಲ್ಲಿ ಇನ್ನು ಮುಂದೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY) ಅಡಿಯಲ್ಲಿ ಒದಗಿಸಲಾಗುವ ಆಹಾರ ಸಬ್ಸಿಡಿಗಳನ್ನು ನೇರವಾಗಿ ಫಲಾನುಭವಿಗಳಿಗೆ ಡಿಜಿಟಲ್ ರೂಪಾಯಿಗಳಲ್ಲಿ ವಿತರಣೆ ಮಾಡಲಾಗುವುದು.

ಡಿಜಿಟಲ್ ಕರೆನ್ಸಿ ಬಳಸಿ ಪಡಿತರ ಖರೀದಿ
ಹೊಸ ತಂತ್ರಜ್ಞಾನ ಆಧಾರಿತ ಪಡಿತರ ವಿತರಣಾ ವ್ಯವಸ್ಥೆಯನ್ನು ಜಾರಿಗೆ ತಂದ ಮೊದಲ ಕೇಂದ್ರಾಡಳಿತ ಪ್ರದೇಶ ಚಂಡೀಗಢವಾಗಿದೆ. ಆಗಸ್ಟ್ 14 ರಂದು ಅಂದರೆ ನಿನ್ನೆಯಿಂದ ಜಾರಿಗೆ ಬಂದಿರುವ ಈ ಸೇವೆಯು ಚಂಡೀಗಢದ 55,000 ಕ್ಕೂ ಹೆಚ್ಚು ಫಲಾನುಭವಿಗಳಿಗೆ ಸಹಾಯವಾಗಲಿದೆ. ಇನ್ನು ಮುಂದೆ ಡಿಜಿಟಲ್ ಕರೆನ್ಸಿಯನ್ನು ಬಳಸಿಕೊಂಡು ಸರ್ಕಾರಿ ಪಡಿತರ ಅಂಗಡಿಗಳಿಂದ ಗೋಧಿ ಮತ್ತು ಅಕ್ಕಿಯನ್ನು ಖರೀದಿಸಲು ಅನುವು ಮಾಡಿಕೊಡಲಾಗುವುದು. ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ಕೇಂದ್ರಾಡಳಿತ ಪ್ರದೇಶದಾದ್ಯಂತ 542 ಪಡಿತರ ಅಂಗಡಿಗಳನ್ನು ಈ ಡಿಜಿಟಲ್ ವ್ಯವಸ್ಥೆಗೆ ಕನೆಕ್ಟ್ ಮಾಡಲಾಗಿದೆ.
ಡಿಜಿಟಲ್ ವ್ಯಾಲೆಟ್‌ಗೆ ಬರುವುದು ಸಬ್ಸಿಡಿ
ಹೊಸ ವ್ಯವಸ್ಥೆಯಡಿಯಲ್ಲಿ, ಸರ್ಕಾರವು ಗೊತ್ತುಪಡಿಸಿದ ಆಹಾರ ಸಬ್ಸಿಡಿ ಮೊತ್ತವನ್ನು ನೇರವಾಗಿ ಪ್ರತಿಯೊಬ್ಬ ಫಲಾನುಭವಿಯ ಡಿಜಿಟಲ್ ವ್ಯಾಲೆಟ್‌ಗೆ ಟ್ರಾನ್ಫರ್ ಮಾಡಲಾಗುವುದು. ಇದಾದ ನಂತರ ಫಲಾನುಭವಿಗಳು ಯಾವುದೇ ಸರ್ಕಾರಿ ಪಡಿತರ ಅಂಗಡಿಯಲ್ಲಿ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಸುಲಭವಾಗಿ ಪೇಮೆಂಟ್ ಮಾಡುವುದು ಸಾಧ್ಯವಾಗುತ್ತದೆ. ಪೇಮೆಂಟ್ ಮಾಡಿದ ನಂತರ, ಫಲಾನುಭವಿಗಳು ತಮ್ಮ ಹಣವನ್ನು ಪಡೆಯಲು ಸಾಧ್ಯವಾಗುತ್ತದೆ. ಇದು ಹಣ ತೆಗೆದುಕೊಂಡು ಹೋಗುವ ಮತ್ತು ಪಾವತಿ ಮಾಡುವ ಸಲುವಾಗಿ ಉದ್ದುದ್ದದ ಸಾಲಿನಲ್ಲಿ ನಿಲ್ಲುವ ತೊಂದರೆಯನ್ನು ತಪ್ಪಿಸುತ್ತದೆ.
ಈ ಹಣದಿಂದ ಪಡಿತರವನ್ನಷ್ಟೇ ಖರೀದಿಸಬಹುದು
ಡಿಜಿಟಲ್ ರೂಪಾಯಿ ವ್ಯವಸ್ಥೆಯ ಅತ್ಯಂತ ಮಹತ್ವದ ವೈಶಿಷ್ಟ್ಯವೆಂದರೆ ಅದರ ಪ್ರೋಗ್ರಾಮಬಿಲಿಟಿ. ಡಿಜಿಟಲ್ ವ್ಯಾಲೆಟ್‌ಗೆ ಬಂದಿರುವ ಸಬ್ಸಿಡಿ ಹಣದಿಂದ ಆಹಾರ ಪದಾರ್ಥಗಳನ್ನು ಮಾತ್ರ ಖರೀದಿ ಮಾಡಬಹುದಾಗಿದೆ. ಫಲಾನುಭವಿಗಳು ಈ ಹಣವನ್ನು ಬೇರೆ ಯಾವುದೇ ವೈಯಕ್ತಿಕ ಅಥವಾ ಇತರ ವಸ್ತಗಳನಗಳನ್ನು ಖರೀದಿಸುವುದಕ್ಕಾಗಿ ಬಳಸಲು ಸಾಧ್ಯವಾಗುವುದಿಲ್ಲ. ಸರ್ಕಾರಿ ಸಬ್ಸಿಡಿಗಳ ದುರುಪಯೋಗವನ್ನು ತಡೆಯುವ ಮತ್ತು ಸರ್ಕಾರವು ಒದಗಿಸುವ ಹಣಕಾಸಿನ ಸಹಾಯವನ್ನು ಉದ್ದೇಶಿತ ಉದ್ದೇಶಕ್ಕಾಗಿಯೇ ಬಳಸುವುದನ್ನು ಖಚಿತಪಡಿಸುವ ಸಲುವಾಗಿ ಈ ಕ್ರಮವನ್ನು ಜಾರಿಗೆ ತರಲಾಗಿದೆ.
ವಾಲೆಟ್‌ನಲ್ಲಿರುವ ಹಣವನ್ನು ಬಳಸದಿದ್ದರೆ ಏನಾಗುತ್ತದೆ ?
ಈ ವ್ಯವಸ್ಥೆಗೆ ಒಂದು ಪ್ರಮುಖ ಸುರಕ್ಷತಾ ವೈಶಿಷ್ಟ್ಯವನ್ನು ಸೇರಿಸಲಾಗಿದೆ. ಫಲಾನುಭವಿಯು ತಮ್ಮ ಡಿಜಿಟಲ್ ವ್ಯಾಲೆಟ್‌ನಲ್ಲಿ ಪಡೆದ ಸಬ್ಸಿಡಿಯನ್ನು ಒಂದು ತಿಂಗಳೊಳಗೆ ಬಳಸಬೇಕಾಗುತ್ತದೆ. ಒಂದು ವೇಳೆ ಈ ಹಣವನ್ನು ಬಳಸಿಲ್ಲ ಎಂದಾದರೆ ಆ ಮೊತ್ತ ಸರ್ಕಾರಿ ಖಾತೆಗೆ ವಾಪಸಾಗುವುದು. ಈ ಮೂಲಕ ಸರ್ಕಾರವು ಸಂಪೂರ್ಣ ಪ್ರಕ್ರಿಯೆಯನ್ನು ನೈಜ ಸಮಯದಲ್ಲಿ ಟ್ರ್ಯಾಕ್ ಮಾಡಲು ಮತ್ತು ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ಸುಲಭಗೊಳಿಸುತ್ತದೆ.


Click it and Unblock the Notifications
