Rashmika Mandanna Deepfake Video: ಪ್ರಮುಖ ಆರೋಪಿ ಬಂಧಿಸಿದ ದೆಹಲಿ ಪೊಲೀಸರು, ಸಾಕ್ಷ್ಯ ಲಭ್ಯ
ಬೆಂಗಳೂರು, ಜನವರಿ 20: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣಾ (Rashmika Mandanna) ಅವರ ಡೀಪ್‌ಫೇಕ್ ವಿಡಿಯೋ (Deepfake Video) ವೈರಲ್ ಆಗಿ ಸಾಕಷ್ಟು ಸುದ್ದಿಯಾಗಿತ್ತು. ಅರೆಬೆತ್ತಲೆ ವಿಡಿಯೋಗೆ ರಶ್ಮಿಕಾರ ಮುಖ ಹೋಲುವಂತೆ AI ವಿಡಿಯೋ ಎಡಿಟ್ ಮಾಡಲಾಗಿತ್ತು. ಇದು ರಶ್ಮಿಕಾರದ್ದೇ ವಿಡಿಯೋ ಎಂದು ನಂಬುವಂತಿತ್ತು. ಬಳಿಕ ಹಲವು ನಟಿಮಣಿಯರ ಇಂತದ್ದೇ ಪೋಟೋಗಳ ವೈರಲ್ ಆಗಿದ್ದು, ಇದೀಗ ರಶ್ಮಿಕಾ ಡೀಪ್‌ಫೇಕ್ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹೌದು, ಕೆಲವು ದಿನಗಳ ಹಿಂದೆ ರಶ್ಮಿಕಾ ಮಂದಣ್ಣರ ಡೀಪ್ ಫೇಕ್ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ಹಲವರನ್ನು ವಿಚಾರಣೆಗೆ ಒಳಪಡಿಸಿದ್ದರು.

ಇದೀಗ ದೆಹಲಿ ಪೊಲೀಸರು ನಕಲಿ ವಿಡಿಯೋ ಮಾಡಿದ್ದ ಅಸಲಿ ಆರೋಪಿಯನ್ನು ಶನಿವಾರ ಬಂಧಿಸಿದ್ದಾರೆ. ಈ ಆಂಧ್ರ ಪ್ರದೇಶದ ಏಮಾನಿ ನವೀನ್ (23) ಎಂದು ಗುರುತಿಸಲಾಗಿದೆ. ಈ ವ್ಯಕ್ತಿ ರಶ್ಮಿಕ ಮಂದಣ್ಣ ಫ್ಯಾನ್ ಪೇಜ್ ನೋಡಿಕೊಳ್ಳುತ್ತಿದ್ದ ಅಸಾಮಿಯಾಗಿದ್ದಾನೆ. ಈತ ಅನೇಕ ನಟಿಮಣಿಯರ ಹೆಸರಿನ ಫ್ಯಾನ್ ಪೇಜ್ ನೋಡಿಕೊಳ್ಳುತ್ತಿದ್ದ ಎಂದು ಪೊಲೀಸ್ ಮೂಲಗಳ ಮಾಹಿತಿ ನೀಡಿವೆ.
ಡೀಪ್‌ಫೇಕ್ ಮಾಡಿದ್ದಕ್ಕೆ ಸಾಕ್ಷ್ಯ ಲಭ್ಯ
ಡೀಪ್‌ಫೇಕ್ ವಿಡಿಯೋದ ಪ್ರಮುಖ ಆರೋಪಿ ಈ ಏಮಾನಿ ನವೀನ್ ಬಂಧನ ಬಳಿಕ ಆತ ಉಪಯೋಗಿಸುತ್ತಿದ್ದ ಮೊಬೈಲ್ ಫೋನ್, ಲ್ಯಾಪ್‌ಟಾಪ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಅಲ್ಲದೇ ಆತನೇ ಡೀಪ್ ಫೇಕ್ ಮಾಡಿದ್ದಾನೆ ಎಂಬುದಕ್ಕೆ ಹಲವು ಸಾಕ್ಷಿಗಳು ಲಭ್ಯವಾಗಿದೆ. ಜೊತೆಗೆ ಆತನೇ ಪ್ರಾಥಮಿಕ ವಿಚಾರವಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಐ ತಂತ್ರಜ್ಞಾನ ಬಳಸಿ ಬೇರೆಯೊಬ್ಬರು ಅರೆಬೆತ್ತಲೇ ವಿಡಿಯೋಗೆ ರಶ್ಮಿಕಾ ಮಂದಣ್ಣ ಮುಖ ಎಡಿಟ್ ಮಾಡಲಾಗಿತ್ತು. ಈ ಡೀಪ್‌ಫೇಕ್ ವಿಡಿಯೋ ವೈರಲ್ ಆಗುತ್ತಿದ್ದಂತೆ ದೇಶದಲ್ಲಿ ಎಐ ತಂತ್ರಜ್ಞಾನ ಬಳಕೆ,ದುರ್ಬಳಕೆ ವಿಚಾರಗಳು ಸದ್ದು ಮಾಡತೊಡಗಿದವು. ಈ ಘಟನೆ ಬಗ್ಗೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಕಳವಳ ವ್ಯಕ್ತಪಡಿಸಿದರಲ್ಲದೇ, ಸೂಕ್ತ ಕ್ರಮಗಳ ಕುರಿತು ಆರೋಪಿಗಳು ಮತ್ತು ಜಾಲತಾಣಗಳಿಗೂ ಎಚ್ಚರಿಕೆ ನೀಡಿದರು.

ಸೆಲೆಬ್ರೆಟಿಗಳ ಫ್ಯಾನ್ ಪೇಜ್ ನಡೆಸುತ್ತಿದ್ದ ಬಂಧಿತ
ಇದೀಗ ಡೀಪ್‌ಫೇಕ್ ವಿಡಿಯೋ ವೈರಲ್ ಆದ ಎರಡು ತಿಂಗಳ ನಂತರ ಪ್ರಮುಖ ಆರೋಪಿ ಬಂಧನವಾಗಿದೆ. ಈತ ನಾಲ್ಕು ವರ್ಷಗಳ ಹಿಂದಷ್ಟೇ ಗೂಗಲ್ ಮೂಲಕ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ. ಈತ ರಶ್ಮಿಕಾ ಮಂದಣ್ಣ ಜೊತೆಗೆ ದಕ್ಷಿಣ ಭಾರತ ಮೂವರು ಸೆಲೆಬ್ರೆಟಿ ಫ್ಯಾನ್ ಪೇಜು ನಡೆಸುತ್ತಿದ್ದ. ವಿಡಿಯೋ ವೈರಲ್ ಮಾಡಿ ಫ್ಯಾನ್ಸ್ ಸಂಖ್ಯೆ ಹೆಚ್ಚಿಸಲು ಯೋಜಿಸಿದ್ದ ಎನ್ನಲಾಗಿದೆ.
ರಶ್ಮಿಕಾ ನಕಲಿ ವಿಡಿಯೋಗೆ ಅಮಿತಾಬ್ ಬಚ್ಚನ್ ಕಳವಳ ವ್ಯಕ್ತಪಡಿಸಿದ್ದರು. ಇಂತಹ ಘಟನೆ ಮರುಕಳಿಸಬಾರದು ಎಂದು ರಶ್ಮಿಕಾ ಪರ ನಿಂತಿದ್ದರು. ನಂತರ ನಟಿ ಕಾಜೋಲ್, ಅಲಿಯಾ ಭಟ್ ಅವರ ನಕಲಿ ವಿಡಿಯೋಗಳು ಹರಿದಾಡಿದವು. ಆಗಾಗ ರಶ್ಮಿಕಾ ಮಂದಣ್ಣಾರ ಫೋಟೋ, ವಿಡಿಯೋ ಓಡಾಡುತ್ತಲೇ ಇರುತ್ತವೆ. ಮೊನ್ನೆಯಷ್ಟೇ ಖ್ಯಾತ ಕ್ರಿಕೆಟಿಗ ಸಚೀನ್ ತೆಂಡೂಲ್ಕರ್ ಸಹ ಈ ಡೀಪ್‌ಪೇಕ್ ಸಂಕಷ್ಟ ಎದುರಿಸಿದ್ದರು.












Click it and Unblock the Notifications