ವಿಮಾನ ವಿಳಂಬದಿಂದ ಅಪರೂಪದ ಹಲಸಿನ ಗಿಡ ನಾಶ: ರೈತನಿಗೆ 90,750 ರೂ. ಪರಿಹಾರ ನೀಡುವಂತೆ ಏರ್ ಏಷ್ಯಾಗೆ ಕೋರ್ಟ್ ಆದೇಶ
ನವದೆಹಲಿ: ವಿಮಾನ ವಿಳಂಬದಿಂದಾಗಿ ರೈತನೊಬ್ಬ ಹೊತ್ತೊಯ್ದ ಹೈಬ್ರಿಡ್ ಹಲಸಿನ ಸಸಿ ಹಾನಿಗೊಳಗಾದ ಹಿನ್ನೆಲೆಯಲ್ಲಿ ಗ್ರಾಹಕ ಆಯೋಗವು ಏರ್ ಏಷ್ಯಾಗೆ 90,750 ರೂ. ಪರಿಹಾರವನ್ನು ಪಾವತಿಸುವಂತೆ ನಿರ್ದೇಶಿಸಿದೆ. ಏರ್‌ಏಷ್ಯಾ ಆಯೋಗದ ಮುಂದೆ ಹಾಜರಾಗದ ಹಿನ್ನೆಲೆಯಲ್ಲಿ ಏಕಪಕ್ಷೀಯವಾಗಿ ವಿಚಾರಣೆ ನಡೆಸಿದ ಪಲಕ್ಕಾಡ್ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ ಮೇ 8, 2026 ರಂದು ಆದೇಶವನ್ನು ಪ್ರಕಟಿಸಿದೆ.
ಏನಿದು ವಿವಾದ ?:
ದೂರುದಾರರಾದ ಅಬ್ದುಲ್ ಅಜೀಜ್ ಸಿ, "ಹೈಬ್ರಿಡ್ ಹಣ್ಣಿನ ಕೃಷಿ ಮತ್ತು ಸಂಶೋಧನೆ"ಯಲ್ಲಿ ತೊಡಗಿರುವ ಪಾಲಕ್ಕಾಡ್‌ನ ರೈತ.ತಮ್ಮ ಜಮೀನಿಗೆ ಹೈಬ್ರಿಡ್ ಹಲಸಿನ ಸಸಿ ಖರೀದಿಸುವ ಸಲುವಾಗಿ ಆಗಸ್ಟ್ 26, 2025 ರಂದು ಕೊಚ್ಚಿಯಿಂದ ಕೌಲಾಲಂಪುರಕ್ಕೆ ಮತ್ತು ಮರುದಿನ ಕೌಲಾಲಂಪುರದಿಂದ ಇಂಡೋನೇಷ್ಯಾದ ಕೌಲಾನಮುಗೆ ಪ್ರಯಾಣ ಬೆಳೆಸಿದ್ದರು. ಆಗಸ್ಟ್ 30, 2025 ರಂದು ಅವರು ಮೆಡಾನ್-ಕುವಾಲಮುದಿಂದ ಕೌಲಾಲಂಪುರ ಮೂಲಕ ಕೊಚ್ಚಿಗೆ ಹಿಂದಿರುಗಬೇಕಾಗಿತ್ತು. ಆದರೆ, ಮೆಡಾನ್-ಕುವಾಲಮು ವಿಮಾನವು ಹಲವಾರು ಗಂಟೆಗಳ ಕಾಲ ವಿಳಂಬವಾಯಿತು. ಇದರಿಂದಾಗಿ ಕೊಚ್ಚಿಗೆ ಇದ್ದ ಕನೆಕ್ಟಿಂಗ್ ವಿಮಾನವು ಮಿಸ್ ಆಯಿತು. ಕೌಲಾಲಂಪುರ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡ ದೂರುದಾರರು ತಕ್ಷಣವೇ ಏರ್ ಏಷ್ಯಾ ಅಧಿಕಾರಿಗಳನ್ನು ಸಂಪರ್ಕಿಸಿ ಅದೇ ದಿನ ಪರ್ಯಾಯ ವಿಮಾನವನ್ನು ನೀಡುವಂತೆ ಕೋರಿದರು.

ಹೆಚ್ಚು ಸಮಯ ಉಳಿಯದ ಸೂಕ್ಷ್ಮ ಹೈಬ್ರಿಡ್ ಹಲಸಿನ ಸಸಿಯನ್ನು ಹೊತ್ತೊಯ್ದಿದ್ದರಿಂದ ಹೆಚ್ಚುವರಿ ಮೊತ್ತವನ್ನು ಪಾವತಿಸಲು ಕೂಡಾ ಅಜೀಜ್ ಸಿದ್ಧರಿದ್ದರು. ಆದರೆ, ಕೊಚ್ಚಿಗೆ ಮುಂದಿನ ವಿಮಾನವು ಮೂರು ದಿನಗಳ ನಂತರವಷ್ಟೇ ಲಭ್ಯವಿರುವುದಾಗಿ ಏರ್ ಏಷ್ಯಾ ಅಧಿಕಾರಿಗಳು ತಿಳಿಸಿದರು. ಏರ್ ಏಷ್ಯಾದ ಈ ವರ್ತನೆ ದಾರಿತಪ್ಪಿಸುವ ಹೇಳಿಕೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ. ಏಕೆಂದರೆ ದೂರುದಾರರು ಆಗಸ್ಟ್ 31, 2025 ರಂದು ಕೌಲಾಲಂಪುರದಿಂದ ಕೊಚ್ಚಿಗೆ ಮತ್ತೊಂದು ಏರ್ ಏಷ್ಯಾ ವಿಮಾನವನ್ನು ಬುಕ್ ಮಾಡಿ, ಅದೇ ದಿನ ಕೊಚ್ಚಿ ತಲುಪಿದ್ದರು. ಇದಕ್ಕೆ ಸಾಕ್ಷಿಯಾಗಿ ಅಜೀಜ್ ಆಯೋಗದ ಮುಂದೆ ಟಿಕೆಟ್ ಅನ್ನು ಹಾಜರುಪಡಿಸಿದ್ದಾರೆ.
ವಿಳಂಬ ಮತ್ತು ಕನೆಕ್ಟಿಂಗ್ ಫ್ಲೈಟ್ ಮಿಸ್ ಆದ ಕಾರಣ, ಸಸಿ ಹಾನಿಗೊಳಗಾಗಿ ಸಂಪೂರ್ಣವಾಗಿ ನಿಷ್ಪ್ರಯೋಜಕವಾಯಿತು. ಪ್ರವಾಸಕ್ಕಾಗಿ ಮಾಡಿದ ಸಂಪೂರ್ಣ ವೆಚ್ಚವೂ ವ್ಯರ್ಥವಾಯಿತು. ಹಾಗಾಗಿ ಮತ್ತೊಂದು ಸಸಿ ಖರೀದಿಸಲು ಇಂಡೋನೇಷ್ಯಾಕ್ಕೆ ಹೊಸ ಪ್ರವಾಸ ಕೈಗೊಳ್ಳಬೇಕು ಎನ್ನುವುದು ರೈತನ ವಾದವಾಗಿತ್ತು.
ಆಯೋಗದ ತೀರ್ಪು:
ಫೆಬ್ರವರಿ 7, 2026 ರಂದು ಇಮೇಲ್ ಮೂಲಕ ನೋಟಿಸ್ ನೀಡಿದ್ದರೂ ಏರ್ ಏಷ್ಯಾ ಆಯೋಗದ ಮುಂದೆ ಹಾಜರಾಗಲಿಲ್ಲ ಅಥವಾ ಯಾವುದೇ ಪ್ರತಿಕ್ರಿಯೆಯನ್ನು ಸಲ್ಲಿಸಲಿಲ್ಲ. ಹೀಗಾಗಿ ಆಯೋಗವು ಏಕಪಕ್ಷೀಯವಾಗಿ ಮುಂದುವರಿದು, ದೂರುದಾರರ ಹೇಳಿಕೆಯನ್ನು ಸ್ವೀಕರಿಸಿದೆ. ವಿಮಾನದ ವಿಳಂಬ ಮತ್ತು ಕನೆಕ್ಟಿಂಗ್ ಫ್ಲೈಟ್ ಮಿಸ್ ಆಗಿರುವುದು ಸೇವೆ ಮತ್ತು ಸಮನ್ವಯದ ಕೊರತೆಯಿಂದಾಗಿ ಉಂಟಾಗಿದೆ ಎನ್ನುವ ನಿರ್ಧಾರಕ್ಕೆ ಆಯೋಗ ಬಂದಿದೆ.
ಏರ್ ಏಷ್ಯಾ ಸೇವೆಯಲ್ಲಿನ ಕೊರತೆಯಿಂದಾಗಿ ದೂರುದಾರರು ಆರ್ಥಿಕ ನಷ್ಟ ಮತ್ತು ಮಾನಸಿಕ ಯಾತನೆಯನ್ನು ಅನುಭವಿಸಿದ್ದಾರೆ.ಹಾಗಾಗಿ ಏರ್ ಏಷ್ಯಾ ದೂರುದಾರರಿಗೆ ಪರಿಹಾರ ನೀಡಬೇಕು ಎಂದು ಆಯೋಗ ಹೇಳಿದೆ. ಅದರಂತೆ, ಮೇಡನ್-ಕುವಾಲಮು-ಕೊಚ್ಚಿ ಪ್ರಯಾಣದ ಸಂಪೂರ್ಣ ಟಿಕೆಟ್ ದರ 30,750 ರೂ.ಮರುಪಾವತಿಸಲು, ಪ್ರಯಾಣ ಮತ್ತು ವಸತಿ ವೆಚ್ಚ 25,000 ರೂ. ಮತ್ತು ಮೊಕದ್ದಮೆ ವೆಚ್ಚವಾಗಿ 10,000 ರೂ.ಗಳನ್ನು ಪಾವತಿಸಲು ಪೀಠವು ಏರ್ ಏಷ್ಯಾಗೆ ನಿರ್ದೇಶನ ನೀಡಿತು.
ಮೊತ್ತವನ್ನು 45 ದಿನಗಳಲ್ಲಿ ಪಾವತಿಸುವಂತೆ ಏರ್ ಏಷ್ಯಾಗೆ ನಿರ್ದೇಶಿಸಲಾಗಿದೆ. ಒಂದು ವೇಳೆ ಇದಕ್ಕೆ ತಪ್ಪಿದರೆ ಅಂತಿಮ ಪಾವತಿಯವರೆಗೆ ಏರ್ ಏಷ್ಯಾ ತಿಂಗಳಿಗೆ 500 ರೂ.ಯಂತೆ ಪರಿಹಾರವನ್ನು ಪಾವತಿಸಬೇಕಾಗುತ್ತದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications