ರಾಜ್ಯಸಭೆ ಚುನಾವಣೆ: ಹರಿಯಾಣ 'ಕೈ' ಪಾಳಯದಲ್ಲಿ ಕುದುರೆ ವ್ಯಾಪಾರದ ಭೀತಿ!
ರಾಯ್‌ಪುರ, ಜೂನ್ 2: ರಾಜ್ಯಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಪಕ್ಷಕ್ಕೆ ಶಾಸಕರ ಕುದುರೆ ವ್ಯಾಪಾರದ ಭೀತಿ ಶುರುವಾಗಿದೆ. ಭಾರತೀಯ ಜನತಾ ಪಕ್ಷವು ಕಾಂಗ್ರೆಸ್ ಶಾಸಕರನ್ನು ತನ್ನತ್ತ ಸೆಳೆದುಕೊಳ್ಳುವ ಭಯದ ನಡುವೆಯೇ ಕಾಂಗ್ರೆಸ್ ತನ್ನ ಶಾಸಕರನ್ನು ಛತ್ತೀಸ್‌ಗಢದ ರಾಯ್‌ಪುರಕ್ಕೆ ಕಳುಹಿಸಿಕೊಟ್ಟಿದೆ.
ಹರ್ಯಾಣ ವಿಧಾನಸಭೆಯಿಂದ ಎರಡು ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲು ಜೂನ್ 10ರಂದು ಮತದಾನ ನಡೆಯಲಿದೆ. ಬಿಜೆಪಿ ಬೆಂಬಲದೊಂದಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಚುನಾಯಿತರಾದ ಉದ್ಯಮಿ ಸುಭಾಷ್ ಚಂದ್ರ ಮತ್ತು ಬಿಜೆಪಿ ನಾಯಕ ದುಷ್ಯಂತ್ ಗೌತಮ್ ಅವಧಿ ಮುಕ್ತಾಯವಾಗಿತ್ತು. ಈ ಹಿನ್ನೆಲೆ ರಾಜ್ಯಸಭೆಯ ಎರಡು ಸ್ಥಾನಗಳು ಆಗಸ್ಟ್‌ನಲ್ಲಿ ತೆರವಾಗಿದ್ದವು.
"ಬಸ್ ಇಲ್ಲಿದೆ. ನಾವೆಲ್ಲರೂ ಎಲ್ಲೋ ಹೋಗುತ್ತೇವೆ, ಆದರೆ ಎಲ್ಲಿಗೆ ಎನ್ನುವುದು ನಂತರದಲ್ಲಿ ಗೊತ್ತಾಗುತ್ತದೆ. ಎಲ್ಲಾ ಶಾಸಕರು ಒಗ್ಗಟ್ಟಾಗಿದ್ದಾರೆ" ಎಂದು ಹರ್ಯಾಣ ಕಾಂಗ್ರೆಸ್ ಉಸ್ತುವಾರಿ ವಿವೇಕ್ ಬನ್ಸಾಲ್ ತಿಳಿಸಿದ್ದಾರೆ. ತದನಂತರದಲ್ಲಿ ಅವರು ಪಕ್ಷದ ಇತರ ಶಾಸಕರೊಂದಿಗೆ ಕಾಂಗ್ರೆಸ್ ಸಂಸದ ದೀಪೇಂದರ್ ಸಿಂಗ್ ಹೂಡಾ ನಿವಾಸಕ್ಕೆ ಆಗಮಿಸಿದರು.
ಹರ್ಯಾಣ ವಿಧಾನಸಭೆಯ 90 ಸದಸ್ಯ ಬಲದಲ್ಲಿ ಕಾಂಗ್ರೆಸ್ ಪಕ್ಷವು 31 ಮತಗಳನ್ನು ಹೊಂದಿದೆ. ಈ ಲೆಕ್ಕಾಚಾರದಲ್ಲಿ ಒಂದೇ ಒಂದು ಮತ ಅತ್ತಿಂದ ಇತ್ತ ಸರಿದರೆ, ರಾಜ್ಯಸಭೆ ಚುನಾವಣೆಯ ಇಡೀ ಲೆಕ್ಕಾಚಾರವೇ ಉಲ್ಟಾ ಹೊಡೆಯುವ ಅಪಾಯವಿದೆ.

ಕಾಂಗ್ರೆಸ್ ಆತಂಕಕ್ಕೆ ಕಾರಣವೇನು?
ಹರ್ಯಾಣದ ಎರಡು ರಾಜ್ಯಸಭಾ ಸ್ಥಾನಗಳ ಪೈಕಿ ಒಂದಕ್ಕೆ ಬಿಜೆಪಿ ಪಕ್ಷವು ಸ್ವತಂತ್ರ ಅಭ್ಯರ್ಥಿಗೆ ಬೆಂಬಲ ನೀಡಿರುವುದನ್ನು ಕಂಡು ಕಾಂಗ್ರೆಸ್‌ಗೆ ಶಾಕ್ ಆಗಿದೆ. ಆದರೆ ಬಿಜೆಪಿ ಗೆಲುವಿನ ಲೆಕ್ಕಾಚಾರವೇ ಬೇರೆ ಆಗಿದೆ. ಏಕೆಂದರೆ ಸ್ವತಂತ್ರ ಅಭ್ಯರ್ಥಿ ಆಗಿರುವ ಕಾರ್ತಿಕೇಯ ಶರ್ಮಾ ಬಿಜೆಪಿಯ ಜೊತೆಗೆ ಜೆಜೆಪಿ ಬೆಂಬಲವನ್ನೂ ಹೊಂದಿದ್ದಾರೆ. ಇದರ ಮಧ್ಯೆ ಇತ್ತೀಚಿನ ಕಾಂಗ್ರೆಸ್ ಸಭೆಯಲ್ಲಿ ಪಕ್ಷದ ಮುಖಂಡ ಕುಲದೀಪ್ ಬಿಷ್ಣೋಯ್ ಕಾಣಿಸಿಕೊಳ್ಳದಿರುವುದು ಕೈ ಪಾಳಯಕ್ಕೆ ಮತ್ತಷ್ಟು ತಲೆನೋವು ಉಂಟು ಮಾಡಿದೆ.

ಸ್ವತಂತ್ರ ಅಭ್ಯರ್ಥಿ ಕಾರ್ತಿಕೇಯ ಶರ್ಮಾ ಹಿನ್ನೆಲೆ
ರಾಜ್ಯಸಭೆ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕಾರ್ತಿಕೇಯ ಶರ್ಮಾ ಮಾಜಿ ಕಾಂಗ್ರೆಸ್ ನಾಯಕ ವಿನೋದ್ ಶರ್ಮಾ ಮತ್ತು ಅಂಬಾಲಾ ಮೇಯರ್ ಶಕ್ತಿ ರಾಣಿ ಶರ್ಮಾ ಪುತ್ರ. ಅವರು ಹರ್ಯಾಣ ಮಾಜಿ ಸ್ಪೀಕರ್ ಕುಲದೀಪ್ ಶರ್ಮಾ ಅಳಿಯರಾಗಿದ್ದು, ಈಗ ಅನುಭವಿ ರಾಜಕಾರಣಿಯಾಗಿರುವ ವಿನೋದ್ ಶರ್ಮಾ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದಾರೆ. 41 ವರ್ಷದ ಕಾರ್ತಿಕೇಯ ನ್ಯೂಸ್‌ಎಕ್ಸ್‌ನಂತಹ ಸುದ್ದಿ ವಾಹಿನಿಗಳನ್ನು ನಡೆಸುತ್ತಿರುವ ITV ನೆಟ್‌ವರ್ಕ್‌ನ ವ್ಯವಸ್ಥಾಪಕ ನಿರ್ದೇಶಕರೂ ಆಗಿದ್ದಾರೆ.

ಕಾಂಗ್ರೆಸ್ ಕಲಿಗಳು ಯಾರು ಯಾರು?
ಹರ್ಯಾಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಜಯ್ ಮಾಕೇನ್ ಅಖಾಡಕ್ಕಿಳಿದಿದ್ದಾರೆ. ರಾಜಸ್ಥಾನದಲ್ಲಿ ಕೈ ಅಭ್ಯರ್ಥಿ ಆಗಿ ಮುಕುಲ್ ವಾಸ್ನಿಕ್, ರಣದೀಪ್ ಸಿಂಗ್ ಸುರ್ಜೆವಾಲಾ ಮತ್ತು ಪ್ರಮೋದ್ ತಿವಾರಿಯನ್ನು ಕಣಕ್ಕಿಳಿಸಿದೆ. ತಮ್ಮ ರಾಜ್ಯದಲ್ಲಿ ಹೊರಗಿನವರಿಗೆ ಅವಕಾಶ ನೀಡಿದ್ದಕ್ಕೆ ಸ್ಥಳೀಯವಾಗಿ ಕಾಂಗ್ರೆಸ್ ನಾಯಕರು ಮುನಿಸಿಕೊಂಡಿದ್ದಾರೆ.
ರಾಜಸ್ಥಾನ ಕಾಂಗ್ರೆಸ್ ಜೂನ್ 1 ಮತ್ತು ಜೂನ್ 2ರ ಕಾರ್ಯಾಗಾರದ ನಂತರದಲ್ಲಿ ಜೂನ್ 3ರಿಂದ ತನ್ನ ಶಾಸಕರನ್ನು ಕರೆದೊಯ್ಯುತ್ತಿದ್ದರೆ, ಬಿಜೆಪಿಯು ಜೂನ್ 5ರಂದು ಶಿಬಿರಕ್ಕಾಗಿ ತಮ್ಮ ಶಾಸಕರನ್ನು ಕರೆದೊಯ್ಯಲಿದೆ.

ರಾಜ್ಯಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
ಕರ್ನಾಟಕವೂ ಸೇರಿದಂತೆ 15 ರಾಜ್ಯಗಳಲ್ಲಿನ 57 ರಾಜ್ಯಸಭಾ ಸ್ಥಾನಗಳಿಗೆ ಜೂನ್ 10ರಂದು ಚುನಾವಣೆ ನಡೆಯಲಿದೆ. ಉತ್ತರ ಪ್ರದೇಶವೊಂದರಲ್ಲೇ 11 ಸ್ಥಾನಗಳಿವೆ. ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ತಲಾ ಆರು ಸ್ಥಾನಗಳಿವೆ. ಬಿಹಾರದಲ್ಲಿ ಐದು, ಕರ್ನಾಟಕ, ಆಂಧ್ರಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ ನಾಲ್ಕು ಸ್ಥಾನಗಳು ತೆರವಾಗಿದ್ದು, ಚುನಾವಣೆ ನಡೆಯಲಿದೆ.
57 ಸ್ಥಾನಗಳ ಪೈಕಿ ಕಾಂಗ್ರೆಸ್ ಪಕ್ಷ ಎಂಟು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. ರಾಜಸ್ಥಾನದಲ್ಲಿ 2, ಛತ್ತೀಸ್‌ಗಡದಲ್ಲಿ 2, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಮತ್ತು ಮಧ್ಯಪ್ರದೇಶದಲ್ಲಿ ತಲಾ ಒಂದೊಂದು ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲುವುದು ನಿಶ್ಚಿತ. ರಾಜಸ್ಥಾನದಲ್ಲಿ ಬಿಜೆಪಿಯೇತರ ಎಲ್ಲಾ ಪಕ್ಷಗಳ ಬೆಂಬಲ ಸಿಕ್ಕರೆ ಒಂದು ಹೆಚ್ಚುವರಿ ಸ್ಥಾನ ಕೂಡ ಕಾಂಗ್ರೆಸ್‌ಗೆ ದಕ್ಕಬಹುದು.












Click it and Unblock the Notifications