ಬೆಂಗಳೂರು ಬಂಗಲೆ ವಿವಾದ: ರಾಜೀವ್ ಚಂದ್ರಶೇಖರ್ ನಾಮಪತ್ರ ಅಂಗೀಕರಿಸಿದ ಚುನಾವಣಾ ಆಯೋಗ
ತಿರುವನಂತಪುರಂ: ಕೇರಳ ವಿಧಾನಸಭೆ ಚುನಾವಣೆಯ ಬಿಜೆಪಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಅವರ ನಾಮಪತ್ರದ ವಿರುದ್ಧ ಕಾಂಗ್ರೆಸ್ ಸಲ್ಲಿಸಿದ್ದ ಆಕ್ಷೇಪಣೆಯನ್ನು ಚುನಾವಣಾಧಿಕಾರಿಗಳು ಮಂಗಳವಾರ ತಿರಸ್ಕರಿಸಿದ್ದಾರೆ. ಇದರೊಂದಿಗೆ ತಿರುವನಂತಪುರಂನ ನೇಮಮ್ ವಿಧಾನಸಭಾ ಕ್ಷೇತ್ರದಿಂದ ಅವರ ಸ್ಪರ್ಧೆಗೆ ಇದ್ದ ಕಾನೂನು ಅಡಚಣೆ ದೂರವಾಗಿದೆ.
ಏನಿದು ಆರೋಪ?
ಬೆಂಗಳೂರಿನ ಕೋರಮಂಗಲದಲ್ಲಿರುವ ಸುಮಾರು 200 ಕೋಟಿ ರೂಪಾಯಿ ಮೌಲ್ಯದ, 49,000 ಚದರ ಅಡಿ ವಿಸ್ತೀರ್ಣದ ಐಷಾರಾಮಿ ಬಂಗಲೆಯ ಮಾಲೀಕತ್ವದ ಮಾಹಿತಿಯನ್ನು ರಾಜೀವ್ ಚಂದ್ರಶೇಖರ್ ಅವರು ತಮ್ಮ ಅಫಿಡವಿಟ್‌ನಲ್ಲಿ ಮರೆಮಾಚಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್. ಶಬರಿನಾಥನ್ ಆರೋಪಿಸಿದ್ದರು. ಈ ಸಂಬಂಧ ಚುನಾವಣಾಧಿಕಾರಿಗೆ ಅಧಿಕೃತ ದೂರು ನೀಡಲಾಗಿತ್ತು.

ಕಾಂಗ್ರೆಸ್ ನೀಡಿದ ದೂರಿನ ಕುರಿತು ಕೂಲಂಕಷ ಪರಿಶೀಲನೆ ನಡೆಸಿದ ಚುನಾವಣಾಧಿಕಾರಿಗಳು, ಮಾಹಿತಿಯ ಅಡಗಿಸುವಿಕೆ ಕಂಡುಬಂದಿಲ್ಲ ಎಂಬ ಕಾರಣ ನೀಡಿ ದೂರನ್ನು ವಜಾಗೊಳಿಸಿದ್ದಾರೆ ಮತ್ತು ಬಿಜೆಪಿ ಅಭ್ಯರ್ಥಿಯ ನಾಮಪತ್ರವನ್ನು ಅಧಿಕೃತವಾಗಿ ಅಂಗೀಕರಿಸಿದ್ದಾರೆ. ಚುನಾವಣಾ ಆಯೋಗದ ನಿರ್ಧಾರದ ವಿರುದ್ಧ ಕಾಂಗ್ರೆಸ್ ಈಗ ಕಾನೂನು ಹೋರಾಟ ನಡೆಸಲು ಉದ್ದೇಶಿಸಿದೆ ಎನ್ನಲಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಇದೇ ವಿಚಾರವನ್ನು ಪ್ರಸ್ತಾಪಿಸಿತ್ತು, ಆದರೆ ಯಾವುದೇ ಕಾನೂನು ಕ್ರಮ ಕೈಗೊಂಡಿರಲಿಲ್ಲ ಎಂದು ಬಿಜೆಪಿ ಟೀಕಿಸಿದೆ.
ಬೆಂಗಳೂರಿನ ಅತ್ಯಂತ ದುಬಾರಿ ಪ್ರದೇಶವಾದ ಕೋರಮಂಗಲದಲ್ಲಿ 1.07 ಎಕರೆ ಪ್ರದೇಶದಲ್ಲಿ ಹರಡಿರುವ, 49,000 ಚದರ ಅಡಿ ವಿಸ್ತೀರ್ಣದ ಬೃಹತ್ ಬಂಗಲೆಯನ್ನು ರಾಜೀವ್ ಚಂದ್ರಶೇಖರ್ ಹೊಂದಿದ್ದಾರೆ. ಈ ಆಸ್ತಿಯ ಅಂದಾಜು ಮೌಲ್ಯ ಸುಮಾರು 200 ಕೋಟಿ ರೂಪಾಯಿ ಎಂದು ಕಾಂಗ್ರೆಸ್ ಹೇಳಿದೆ. ಅಫಿಡವಿಟ್‌ನಲ್ಲಿ ಈ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಮರೆಮಾಚಲಾಗಿದೆ, ಆದ್ದರಿಂದ ಅವರ ನಾಮಪತ್ರವನ್ನು ತಿರಸ್ಕರಿಸಬೇಕು ಎಂದು ಕಾಂಗ್ರೆಸ್ ಪಟ್ಟು ಹಿಡಿದಿತ್ತು. ಕೇರಳ ಬಿಜೆಪಿ ಅಧ್ಯಕ್ಷರೂ ಆಗಿರುವ ರಾಜೀವ್ ಚಂದ್ರಶೇಖರ್ ವಿರುದ್ಧ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಅಭಿಯಾನ ನಡೆಸಿತ್ತು.
ರಾಜೀವ್ ಚಂದ್ರಶೇಖರ್ ತಿರುಗೇಟು
ಆರೋಪಗಳ ಕುರಿತು ಮೌನ ಮುರಿದಿರುವ ರಾಜೀವ್ ಚಂದ್ರಶೇಖರ್, "ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕಾಂಗ್ರೆಸ್ ಈ ರೀತಿಯ ಹಳೆಯ ಆರೋಪಗಳನ್ನು ಮಾಡುತ್ತಿದೆ. ಬೆಂಗಳೂರಿನ ಮನೆಯು ಪಾಲುದಾರಿಕಾ ಸಂಸ್ಥೆಯ ಹೆಸರಿನಲ್ಲಿದ್ದು, ಆ ಸಂಸ್ಥೆಯಲ್ಲಿ ನಾನು ಪಾಲುದಾರನಾಗಿದ್ದೇನೆ. ಈ ಮಾಹಿತಿಯನ್ನು ನಾನು ಈಗಾಗಲೇ ಚುನಾವಣಾ ಆಯೋಗಕ್ಕೆ ನೀಡಿದ್ದೇನೆ" ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, "ಧೈರ್ಯವಿದ್ದರೆ ಕಾಂಗ್ರೆಸ್ ಈ ವಿಚಾರವನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸಲಿ" ಎಂದು ಸವಾಲು ಕೂಡ ಹಾಕಿದ್ದಾರೆ.
ರಾಜೀವ್ ಚಂದ್ರಶೇಖರ್ ಆಸ್ತಿ ಎಷ್ಟು?
ಕೇರಳದ ನೇಮಮ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರ ಆಸ್ತಿ ವಿವರ ಈಗ ಬಹಿರಂಗವಾಗಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ ಪ್ರಕಾರ, ಅವರು ಒಟ್ಟು 93 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಆದರೆ, ಆಸ್ತಿಗಿಂತ ಹೆಚ್ಚಿನ ಮೊತ್ತದ ಸಾಲ ಹೊಂದಿರುವುದು ಕುತೂಹಲ ಮೂಡಿಸಿದೆ. ಸಚಿವರ ಹೆಸರಿನಲ್ಲಿ 78.81 ಕೋಟಿ ರೂ. ಮೌಲ್ಯದ ಚರಾಸ್ತಿ ಇದೆ. ಇದರಲ್ಲಿ ಬ್ಯಾಂಕ್ ಠೇವಣಿ, ಷೇರುಗಳು, ಬಾಂಡ್‌ಗಳು ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿನ ಹೂಡಿಕೆ ಸೇರಿದೆ. ಬೆಂಗಳೂರಿನಲ್ಲಿ ಅವರು ಹೊಂದಿರುವ ಸ್ಥಿರಾಸ್ತಿಯ ಮೌಲ್ಯ ಸುಮಾರು 15.07 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಅವರ ಪತ್ನಿ ಸುಮಾರು 18.10 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. 3.58 ಕೋಟಿ ರೂ. ಮೌಲ್ಯದ ಚಿನ್ನಾಭರಣ ಮತ್ತು ಬೆಲೆಬಾಳುವ ವಸ್ತುಗಳಿವೆ.
ವಿಂಟೇಜ್ ಬೈಕ್ ಪ್ರೇಮ
ವಾಹನಗಳ ವಿಚಾರಕ್ಕೆ ಬಂದರೆ, ರಾಜೀವ್ ಚಂದ್ರಶೇಖರ್ ಅವರು 1994ರಲ್ಲಿ ಖರೀದಿಸಿದ 1942ರ ಮಾಡೆಲ್‌ನ 'ರೆಡ್ ಇಂಡಿಯನ್ ಸ್ಕೌಟ್' (Red Indian Scout) ವಿಂಟೇಜ್ ಮೋಟಾರ್‌ಸೈಕಲ್ ಅನ್ನು ಇಂದಿಗೂ ಹೊಂದಿದ್ದಾರೆ. ಇದು ಅವರ ವಾಹನ ಪ್ರೇಮಕ್ಕೆ ಸಾಕ್ಷಿಯಾಗಿದೆ. ಅಫಿಡವಿಟ್‌ನಲ್ಲಿರುವಂತೆ ರಾಜೀವ್ ಚಂದ್ರಶೇಖರ್ ಅವರು ಒಟ್ಟು 107 ಕೋಟಿ ರೂಪಾಯಿಗೂ ಅಧಿಕ ಸಾಲ ಹೊಂದಿದ್ದಾರೆ. ಇನ್ನು ಅವರ ಪತ್ನಿಯ ಹೆಸರಿನಲ್ಲಿ ಸುಮಾರು 1.62 ಕೋಟಿ ರೂ. ಸಾಲವಿದೆ. 2024-25ರ ಆರ್ಥಿಕ ವರ್ಷದಲ್ಲಿ ರಾಜೀವ್ ಚಂದ್ರಶೇಖರ್ ಅವರು 92.91 ಲಕ್ಷ ರೂ. ಆದಾಯ ಘೋಷಿಸಿಕೊಂಡಿದ್ದರೆ, ಅವರ ಪತ್ನಿ 60.50 ಲಕ್ಷ ರೂ. ಆದಾಯವನ್ನು ವರದಿ ಮಾಡಿದ್ದಾರೆ.
ಆಸ್ತಿ ವಿವರದ ಜೊತೆಗೆ, ತಮ್ಮ ಮೇಲಿರುವ ಎರಡು ಕ್ರಿಮಿನಲ್ ಪ್ರಕರಣಗಳ ಮಾಹಿತಿಯನ್ನೂ ಅವರು ಅಫಿಡವಿಟ್‌ನಲ್ಲಿ ನೀಡಿದ್ದಾರೆ. 2023ರ ಕಳಮಶ್ಶೇರಿ ಸ್ಫೋಟದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಮಾಸ್ ಸಂಘಟನೆಯನ್ನು ಉಲ್ಲೇಖಿಸಿ ಮಾಡಿದ ಕಾಮೆಂಟ್‌ಗಳಿಗೆ ಸಂಬಂಧಿಸಿದಂತೆ ಇವರ ಮೇಲೆ ಕೇರಳದಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ಈ ಪ್ರಕರಣಗಳಲ್ಲಿ ಸಚಿವರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದಂತೆ ಕೇರಳ ಹೈಕೋರ್ಟ್ ಈಗಾಗಲೇ ಪೊಲೀಸರಿಗೆ ನಿರ್ದೇಶನ ನೀಡಿದೆ.












Click it and Unblock the Notifications