Rajasthan Election Opinion Poll 2023: ರಾಜಸ್ಥಾನದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ? ನಿಖರ ಸಮೀಕ್ಷೆಯ ಅಂಕಿಅಂಶ ತಿಳಿಯಿರಿ
ಬೆಂಗಳೂರು, ಅಕ್ಟೋಬರ್ 02: ಈ ವರ್ಷದ ಕೊನೆಯಲ್ಲಿ ರಾಜಸ್ಥಾನ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಇದೆ. ರಾಜಸ್ಥಾನ ವಿಧಾನಸಭೆಯ ಚುನಾವಣಾಪೂರ್ವ ಸಮೀಕ್ಷೆಗಳು ಹೊರಬರುತ್ತಿವೆ. ಕರ್ನಾಟಕ ಚುನಾವಣೆಯ ನಿಖರ ಸಮೀಕ್ಷೆಯನ್ನು ನೀಡಿದ್ದ 'ಸ್ಮಾಲ್ ಬಾಕ್ಸ್ ಇಂಡಿಯಾ' ಸಂಸ್ಥೆಯು ರಾಜಸ್ಥಾನದ ಸಮೀಕ್ಷೆಯನ್ನು ಪ್ರಕಟಿಸಿದೆ.
ಡಿಸೆಂಬರ್‌ನಲ್ಲಿ ಚುನಾವಣೆ
ರಾಜಸ್ಥಾನ ವಿಧಾನಸಭೆ ಚುನಾವಣೆ ಕುರಿತು ಭಾನುವಾರ ಮಾತನಾಡಿರುವ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, 'ರಾಜಸ್ಥಾನದಲ್ಲಿ ಚುನಾವಣಾ ಸಿದ್ಧತೆಗಳು ನಡೆಯುತ್ತಿವೆ. ಈ ಕುರಿತು ಎಲ್ಲಾ ರಾಜಕೀಯ ಪಕ್ಷಗಳು, ಕೇಂದ್ರ ಮತ್ತು ರಾಜ್ಯ ಜಾರಿ ಸಂಸ್ಥೆಗಳು ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ' ತಿಳಿಸಿದ್ದಾರೆ.

'ಕಳೆದ ಎರಡು ದಿನಗಳಲ್ಲಿ, ನಾವು ಎಲ್ಲಾ ರಾಜಕೀಯ ಪಕ್ಷಗಳನ್ನು ಭೇಟಿ ಮಾಡಿದ್ದೇವೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಜಾರಿ ಸಂಸ್ಥೆಗಳೊಂದಿಗೆ ವಿವರವಾಗಿ ಚರ್ಚೆ ನಡೆಸಿದ್ದೇವೆ. ಡಿಎಂಗಳು, ಎಸ್‌ಪಿಎಸ್, ಐಜಿಗಳು, ಡಿಐಜಿಗಳು, ಕಮಿಷನರ್‌ಗಳು ಮತ್ತು ರಾಜ್ಯ ಸರ್ಕಾರದ ಎಲ್ಲಾ ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಲಾಗಿದೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ರಾಜಸ್ಥಾನದಲ್ಲಿ ನಾವು ನಡೆಸುವ ಭರವಸೆ ಹೊಂದಿದ್ದೇವೆ' ಎಂದು ಹೇಳಿದ್ದಾರೆ.
ರಾಜಸ್ಥಾನದ ಚುನಾವಣೆಯನ್ನು ಡಿಸೆಂಬರ್‌ನಲ್ಲಿ ನಡೆಸಲು ಚುನಾವಣೆ ಆಯೋಗ ನಿರ್ಧರಿಸಬಹುದು ಎಂದು ಹೇಳಲಾಗುತ್ತಿದೆ.
ರಾಜಸ್ಥಾನದಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ಪೈಪೋಟಿ
ರಾಜಸ್ಥಾನದ ವಿಧಾನಸಭೆ ಚುನಾವಣೆಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ನೇರ ಹಣಾಹಣಿ ಏರ್ಪಡಲಿದೆ. ಮುಖ್ಯಮಂತ್ರಿ ಅಶೋಕ್ ಗೆಹಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಏರಲು ಯತ್ನಿಸುತ್ತಿದೆ. ಕರ್ನಾಟಕದಂತೆಯೇ ರಾಜಸ್ಥಾನದಲ್ಲಿಯೂ ಕಾಂಗ್ರೆಸ್ ಪಕ್ಷವು ಗ್ಯಾರಂಟಿ ಘೋಷಣೆಗಳನ್ನು ಮಾಡಿದೆ. ಇದು ರಾಜಸ್ಥಾನದಲ್ಲಿ ಎಷ್ಟರ ಮಟ್ಟಿಗೆ ಕೆಲಸ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನು ಕಾಂಗ್ರೆಸ್ ಎದುರಾಳಿಯಾಗಿರುವ ಬಿಜೆಪಿ ಹೈಕಮಾಂಡ್ ಹೊಸ ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ನಿರತವಾಗಿದೆ. ಬಿಜೆಪಿ ರಾಜ್ಯ ಘಟಕದಲ್ಲಿರುವ ಬಂಡಾಯವನ್ನು ಶಮನಗೊಳಿಸುವುದು ಹೈಕಮಾಂಡ್ ಮುಂದಿರುವ ಸವಾಲಾಗಿದೆ. ಕಳೆದ ವಾರ ರಾಜಸ್ಥಾನ ಜೈಪುರದಲ್ಲಿ ಬೀಡುಬಿಟ್ಟಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಸ್ಥಳೀಯ ನಾಯಕರ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ಸಿಎಂ ರೇಸ್‌ನಲ್ಲಿದ್ದಾರೆ. ಇದೇ ರೀತಿ ಬಿಜೆಪಿಯಲ್ಲಿ ಮಾಜಿ ಮುಖ್ಯಮಂತ್ರಿ ವಸುಂದರಾ ರಾಜೇ ಹಾಗೂ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ನಡುವೆ ಸಿಎಂ ಸ್ಥಾನಕ್ಕಾಗಿ ಪೈಪೋಟಿ ಏರ್ಪಟ್ಟಿದೆ. ಇದು ಎರಡೂ ಪಕ್ಷಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಸ್ಮಾಲ್ ಬಾಕ್ಸ್ ಇಂಡಿಯಾ ಸಮೀಕ್ಷೆ ಹೇಳುವುದೇನು?
ಸ್ಮಾಲ್ ಬಾಕ್ಸ್ ಇಂಡಿಯಾ ಸಮೀಕ್ಷೆ ಪ್ರಕಾರ, ಕಾಂಗ್ರೆಸ್ 104 ಕ್ಷೇತ್ರಗಳಲ್ಲಿ ಜಯಗಳಿಸುವ ಸಾಧ್ಯತೆ ಇದೆ. ಬಿಜೆಪಿ 90 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು. ಇತರರು ಆರು ಸ್ಥಾನಗಳನ್ನು ಪಡೆಯಬಹುದು.
ರಾಜಸ್ಥಾನದಲ್ಲಿ ಒಟ್ಟು 200 ವಿಧಾನಸಭಾ ಕ್ಷೇತ್ರಗಳಿವೆ. ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 107 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಬಿಜೆಪಿ ಕೇವಲ 70 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಮಾಯಾವತಿ ನೇತೃತ್ವದ ಬಿಎಸ್‌ಪಿಗೆ 6 ಸ್ಥಾನಗಳು ಒಲಿದಿದ್ದವು. ಈ ಆರೂ ಶಾಸಕರು ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ್ದರು.
ಸ್ಮಾಲ್ ಬಾಕ್ಸ್ ಇಂಡಿಯಾ ಸಮೀಕ್ಷೆ ಪ್ರಕಾರ, ಕಾಂಗ್ರೆಸ್‌ಗೆ ಶೇ 44 ಮತಗಳು ಬರಲಿವೆ. ಬಿಜೆಪಿಗೆ ಶೇ 42 ಮತಗಳು ಸಿಗಲಿವೆ. ಶೇ 14 ರಷ್ಟು ಮತ ಪ್ರಮಾಣ ಇತರರ ಪಾಲಾಗಲಿದೆ.












Click it and Unblock the Notifications