Rain Alert: ಕೇರಳದಲ್ಲಿ ಮಳೆ ಅವಾಂತರ: 5 ಜಿಲ್ಲೆಗಳಲ್ಲಿ ರಜೆ ಘೋಷಣೆ- ಕರಾವಳಿ ಕರ್ನಾಟಕದಲ್ಲಿಯೂ ರೆಡ್ ಅಲರ್ಟ್, ಮಾಹಿತಿ, ವಿವರ
ತಿರುವನಂತಪುರಂ, ಮಂಗಳೂರು, ಜುಲೈ 04: ಕೇರಳದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಮುಂದಿನ ಕೆಲ ದಿನಗಳ ಕಾಲ ವ್ಯಾಪಕ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಕೇರಳದಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದೆ. ಇದೇ ರೀತಿ ಕರ್ನಾಟಕದ ಕರಾವಳಿಯಲ್ಲಿಯೂ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಭಾರೀ ಮಳೆ ಸುರಿಯುವ ಮನ್ಸೂಚನೆ ಇರುವ ಹಿನ್ನೆಲೆಯಲ್ಲಿ ಕಾಸರಗೋಡು, ಕಣ್ಣೂರು, ಇಡುಕ್ಕಿ, ತ್ರಿಶೂರ್ ಮತ್ತು ಎರ್ನಾಕುಲಂ ಜಿಲ್ಲಾಧಿಕಾರಿಗಳು ಬುಧವಾರ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದ್ದಾರೆ. ಭಾರತೀಯ ಹವಾಮಾನ ಇಲಾಖೆಯು ರೆಡ್ ಅಲರ್ಟ್‌ಗಳನ್ನು ಹೊರಡಿಸಿದ್ದು, ಬುಧವಾರ ಈ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ.

ಈ ಜಿಲ್ಲೆಗಳಿಗೆ ಐಎಂಡಿ ರೆಡ್ ಅಲರ್ಟ್ ನೀಡಿದೆ. ಇದಕ್ಕೂ ಮುನ್ನ ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ ಅವರು ಕೊನೆಯ ಕ್ಷಣದ ಗೊಂದಲಗಳನ್ನು ತಪ್ಪಿಸಲು ಮುಂಚಿತವಾಗಿ ರಜೆ ಘೋಷಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಕಣ್ಣೂರು, ಇಡುಕ್ಕಿ, ತ್ರಿಶೂರ್ ಮತ್ತು ಎರ್ನಾಕುಲಂ ಜಿಲ್ಲಾಧಿಕಾರಿಗಳು ವೃತ್ತಿಪರ ಕಾಲೇಜುಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದ್ದಾರೆ. ಕಾಸರಗೋಡು ಜಿಲ್ಲಾಧಿಕಾರಿಗಳು ಶಾಲೆಗಳಿಗೆ ಮಾತ್ರ ರಜೆ ನೀಡುವುದಾಗಿ ಘೋಷಿಸಿದ್ದಾರೆ.
ಕೇರಳದಲ್ಲಿ ಮಂಗಳವಾರ ವ್ಯಾಪಕ ಮಳೆಯಾಗಿದೆ. ಕೊಚ್ಚಿ ನಗರ, ಆಲಪ್ಪುಳದ ಕೆಲವು ಭಾಗಗಳು ಮತ್ತು ಮಣಿಮಲಯಾರ್ ನದಿಯ ಸುತ್ತಲಿನ ಪ್ರದೇಶಗಳಲ್ಲಿ ಮಳೆ ಸುರಿದಿದೆ. ಇದರಿಂದ ವಿವಿಧ ಸ್ಥಳಗಳಲ್ಲಿ ಜಲಾವೃತವಾಗಿದೆ.

ಪಾಲಕ್ಕಾಡ್ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ತೆಂಗಿನ ಮರವೊಂದು ಉರುಳಿ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. 55 ವರ್ಷದ ತಂಗಮಣಿ ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ, ಘಟನೆ ನಡೆದಿದೆ.
ಇಡುಕ್ಕಿ ಜಿಲ್ಲಾಡಳಿತವು ಮುಂದಿನ ಕೆಲವು ದಿನಗಳವರೆಗೆ ಈ ಪ್ರದೇಶದಲ್ಲಿ ರಾತ್ರಿ ಪ್ರಯಾಣವನ್ನು ನಿಷೇಧಿಸಿದೆ.
ರಜೆ ಪಡೆದ ಎಲ್ಲ ಇಲಾಖೆ ಅಧಿಕಾರಿಗಳು 36 ಗಂಟೆಯೊಳಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಕೆ.ರಾಜಣ್ಣ ತಿಳಿಸಿದ್ದಾರೆ. ಜನರು ಗಾಬರಿಯಾಗದೆ ಜಾಗೃತರಾಗಿರಿ ಎಂದು ಮನವಿ ಮಾಡಿದ್ದಾರೆ. ಕೆಲವು ನದಿಗಳನ್ನು ಹೊರತುಪಡಿಸಿ ರಾಜ್ಯದ ಬಹುತೇಕ ನದಿಗಳ ನೀರಿನ ಮಟ್ಟವು ಏರಿಕೆ ಕಂಡಿದೆ.
ಕರ್ನಾಟಕದ ಕರಾವಳಿಯಲ್ಲಿಯೂ ರೆಡ್ ಅಲರ್ಟ್
ಕೇರಳದಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆಯು ಕರ್ನಾಟಕದ ಕರಾವಳಿಯಲ್ಲಿ ಸುರಿಯುತ್ತಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಳೆದ 48 ಗಂಟೆಗಳಲ್ಲಿ ಸತತ ಮಳೆ ಸುರಿಯುತ್ತಿದೆ. ಮುಂದಿನ ಮೂರು ದಿನಗಳ ಕಾಲ ವ್ಯಾಪಕ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಈ ಹಿನ್ನೆಲೆಯಲ್ಲಿ ಮೂರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.












Click it and Unblock the Notifications