'ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಾಗೋಲ್ಲ'
ನವದೆಹಲಿ, ಜ.16: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯೇನೋ ಪ್ರಧಾಅನಿ ಹುದ್ದೆ ನಿಭಾಯಿಸಲು ಸಿದ್ಧ ಘೋಷಿಸಿದ್ದಾರೆ. ಆದರೆ, ಶುಕ್ರವಾರ ನಡೆಯಲಿರುವ ಎಐಸಿಸಿ ಸಭೆಯಲ್ಲಿ ರಾಹುಲ್ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸುವುದಿಲ್ಲ ಎಂದು ಕಾಂಗ್ರೆಸ್ ಮೂಲಗಳಿಂದ ತಿಳಿದು ಬಂದಿದೆ.
'ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷ ನನಗೆ ಯಾವುದೇ ಜವಾಬ್ದಾರಿ ನೀಡಿದರು ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಪಕ್ಷಕ್ಕಾಗಿ ನಾನು ಏನೂ ಬೇಕಾದರು ಮಾಡಲು ಸಿದ್ಧ. ನನಗೆ ಜವಾಬ್ದಾರಿ ನೀಡುವ ಬಗ್ಗೆ ಪಕ್ಷದ ಹಿರಿಯ ನಾಯಕರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ' ಎಂದು ರಾಹುಲ್ ಹಿಂದಿ ದಿನಪತ್ರಿಕೆ 'ದೈನಿಕ ಬಾಸ್ಕರ್' ನೀಡಿದ ಸಂದರ್ಶನದಲ್ಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಮುಂಬರುವ 2014ರ ಲೋಕಸಭಾ ಚುನಾವಣೆಯಲ್ಲೂ ತಮ್ಮ ಪಕ್ಷ ಭರ್ಜರಿ ಗೆಲುವು ಸಾಧಿಸುವ ಮೂಲಕ ಮತ್ತೆ ಅಧಿಕಾರಕ್ಕೆ ಬರಲಿದೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಎಂದಿಗೂ ಅಧಿಕಾರಕ್ಕೆ ಬರುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಕಾಂಗ್ರೆಸ್ ಯುವರಾಜ ಹೇಳಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಮಿತ್ರ ಪಕ್ಷಗಳನ್ನು ಕಳೆದುಕೊಳ್ಳಲಿದೆ ಎಂಬ ವರದಿಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದ ರಾಹುಲ್ ಗಾಂಧಿ, ಅದು ಸತ್ಯಕ್ಕೆ ದೂರವಾದ ಮಾತು. ಮಹಾರಾಷ್ಟ್ರ ಮತ್ತು ಜಮ್ಮು, ಕಾಶ್ಮೀರದಲ್ಲಿ ಈಗಲೂ ನಮ್ಮ ಮೈತ್ರಿ ಮುಂದುವರಿದಿದೆ ಎಂದರು.
ಇದೇ ವೇಳೆ ತಮ್ಮ ಸಹೋದರಿ ಪ್ರಿಯಾಂಕಾ ವಾಧ್ರಾ ಅವರು ಮುಂದಿನ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂಬ ವರದಿಗಳನ್ನು ಸಹ ರಾಹುಲ್ ತಳ್ಳಿಹಾಕಿದರು.

ಚುನಾವಣೆಗೂ ಮುನ್ನ ಪ್ರಧಾನಿ ಅಭ್ಯರ್ಥಿ ಘೋಷಣೆ ಮಾಡುವುದು ಕಾಂಗ್ರೆಸ್ ಸಂಪ್ರದಾಯಕ್ಕೆ ವಿರೋಧವಾಗಿದ್ದು, ರಾಹುಲ್ ಆಗಲಿ ಮತ್ತೊಬ್ಬ ನಾಯಕರ ಹೆಸರನ್ನಾಗಲಿ ಘೋಷಿಸುವ ಅವಶ್ಯಕತೆ ಇಲ್ಲ ಎಂದು ಹಿರಿಯ ಕಾಂಗ್ರೆಸ್ಸಿಗರು ಪಟ್ಟು ಹಿಡಿದಿದ್ದಾರೆ. 2009ರಲ್ಲಿ ಮಾತ್ರ ಸೋನಿಯಾ ಗಾಂಧಿ ಅವರು ಪತ್ರಿಕಾ ಹೇಳಿಕೆ ನೀಡಿ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿ ತಮ್ಮ ಹೆಸರನ್ನು ಹಿಂದಕ್ಕೆ ಹಾಕಿದ್ದರು.
ಕಾಂಗ್ರೆಸ್ ನಲ್ಲಿ ಮನಮೋಹನ್ ಸಿಂಗ್, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನೊಳಗೊಂಡ ತ್ರಿಮೂರ್ತಿ ನಾಯಕರಿದ್ದಾರೆ. ಅಂತಿಮವಾಗಿ ಸೋನಿಯಾ ಗಾಂಧಿ ಅವರು ಪಕ್ಷದ ಇತರೆ ಹಿರಿಯ ನಾಯಕರೊಂದಿಗೆ ಚರ್ಚಿಸಿ ಪ್ರಧಾನಿ ಅಭ್ಯರ್ಥಿಯನ್ನು ನಿರ್ಧರಿಸಲಿದ್ದಾರೆ. ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ಸದಸ್ಯರಾಗಿದ್ದು, ಲೋಕಸಭೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕೇಂದ್ರ ವಾರ್ತಾ ಸಚಿವ ಮನೀಶ್ ತಿವಾರಿ ಇತ್ತೀಚೆಗೆ ಹೇಳಿದ್ದರು. (ಪಿಟಿಐ)












Click it and Unblock the Notifications