ಮ್ಯಾಚ್ ಫಿಕ್ಸಿಂಗ್ ಇಲ್ಲದೆ ಬಿಜೆಪಿ 400 ಸೀಟು ಗೆಲ್ಲಲು ಸಾಧ್ಯವಿಲ್ಲ: ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ಮ್ಯಾಚ್ ಫಿಕ್ಸಿಂಗ್ ಇಲ್ಲದೇ ಬಿಜೆಪಿ 400 ಪಾರ್ ಘೋಷಣೆ ಸಾಧ್ಯವಿಲ್ಲ, ಬಿಜೆಪಿ 400 ಸೀಟು ಗೆಲ್ಲಲು ಪ್ರಧಾನಿ ನರೇಂದ್ರ ಮೋದಿ "ಅಂಪೈರ್"ಗಳನ್ನು ಆಯ್ಕೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಮಾರ್ಚ್ 21 ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿರುವುದನ್ನು ವಿರೋಧಿಸಿ ಆಪ್ ಇಂಡಿಯಾ ಬ್ಲಾಕ್‌ನ ನಾಯಕರು ದೆಹಲಿಯಲ್ಲಿ ಕರೆ ನೀಡಿದ್ದ 'ಪ್ರಜಾಪ್ರಭುತ್ವ ಉಳಿಸಿ' ರ್‍ಯಾಲಿಯಲ್ಲಿ ಮಾತನಾಡಿದ ಅವರು, ಬಿಜೆಪಿ ವಿರುದ್ದ ಹರಿಹಾಯ್ದರು.

ರಾಮಲೀಲಾ ಮೈದಾನದಲ್ಲಿ ನಡೆದ ರ್‍ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, "ಇವಿಎಂಗಳು, ಮ್ಯಾಚ್ ಫಿಕ್ಸಿಂಗ್, ಸಾಮಾಜಿಕ ಮಾಧ್ಯಮಗಳು ಮತ್ತು ಪತ್ರಿಕಾ ಸಹಕಾರವಿಲ್ಲ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ180 ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಾಧ್ಯವಿಲ್ಲ" ಎಂದರು.
ರಾಜಕಾರಣವನ್ನು ಐಪಿಎಲ್‌ಗೆ ಹೋಲಿಕೆ
"ಪ್ರಸ್ತುತ ಐಪಿಎಲ್ ಪಂದ್ಯಗಳು ನಡೆಯುತ್ತಿವೆ, ಅಂಪೈರ್‌ಗಳಿಗೆ ಒತ್ತಡ ಹೇರಿದಾಗ ಆಟಗಾರರನ್ನು ಖರೀದಿಸಿದಾಗ ಮತ್ತು ನಾಯಕರನ್ನು ಪಂದ್ಯಗಳನ್ನು ಗೆಲ್ಲಿಸಲು ಬೆದರಿಕೆ ಹಾಕಿದಾಗ ಅದನ್ನು ಕ್ರಿಕೆಟ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ಎಂದು ಕರೆಯಲಾಗುತ್ತದೆ. ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ, ಪ್ರಧಾನಿ ಮೋದಿ ಅಂಪೈರ್‌ಗಳನ್ನು ಆಯ್ಕೆ ಮಾಡಿದ್ದು, ಪಂದ್ಯಕ್ಕೂ ಮುನ್ನವೇ ನಮ್ಮ ತಂಡದ ಆಟಗಾರರನ್ನು ಬಂಧಿಸಲಾಗಿತ್ತು" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಕಾಂಗ್ರೆಸ್ ಅತಿ ದೊಡ್ಡ ವಿರೋಧ ಪಕ್ಷವಾಗಿದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ನಮ್ಮ ಪಕ್ಷದ ಎಲ್ಲಾ ಬ್ಯಾಂಕ್ ಖಾತೆಗಳನ್ನು ಮುಚ್ಚಲಾಗಿದೆ. ಚುನಾವಣೆಗೆ ನಾವು ಪ್ರಚಾರಗಳನ್ನು ಮಾಡಬೇಕು, ರಾಜ್ಯಗಳಿಗೆ ಕಾರ್ಯಕರ್ತರನ್ನು ಕಳಿಸಬೇಕು, ಪೋಸ್ಟರ್ ಹಾಕಬೇಕು, ಆದರೆ ನಮ್ಮ ಎಲ್ಲಾ ಬ್ಯಾಂಕ್ ಖಾತೆಗಳನ್ನು ಮುಚ್ಚಲಾಗಿದೆ, ಇದ್ಯಾವ ರೀತಿಯ ಚುನಾವಣೆ ಎಂದು ಪ್ರಶ್ನೆ ಮಾಡಿದರು.
ಬಡವರ ಪರವಾಗಿರುವ ಸಂವಿಧಾನವನ್ನು ಕಸಿದುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮತ್ತು 3-4 ಬಂಡವಾಳಶಾಹಿಗಳು ಮ್ಯಾಚ್ ಫಿಕ್ಸಿಂಗ್ ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
"ದೇಶ ಮತ್ತು ಸಂವಿಧಾನವನ್ನು ಉಳಿಸಲು, ದೇಶದ ಪ್ರಜೆಗಳು ಪೂರ್ಣ ಬಲದಿಂದ ಮತಚಲಾವಣೆ ಮಾಡಬೇಕು, ಇಲ್ಲವಾದರೆ ಬಿಜೆಪಿ ಮಾಡಿಕೊಂಡಿರುವ ಮ್ಯಾಚ್ ಫಿಕ್ಸಿಂಗ್ ಯಶಸ್ವಿಯಾಗುತ್ತದೆ. ಒಂದು ವೇಳೆ ಅದು ಯಶಸ್ವಿಯಾದರೆ ಸಂವಿಧಾನ ನಾಶವಾಗುತ್ತದೆ. ಸಂವಿಧಾನ ಜನರ ಧ್ವನಿಯಾಗಿದ್ದು, ಸಂವಿಧಾನ ಇಲ್ಲದ ದಿನ ದೇಶ ಕೂಡ ಇರುವುದಿಲ್ಲ" ಎಂದು ಹೇಳಿದರು.
"400ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದರೆ ಸಂವಿಧಾನವನ್ನು ಬದಲಾಯಿಸುತ್ತೇವೆ" ಎಂದು ಬಿಜೆಪಿ ಸಂಸದರೊಬ್ಬರು ಹೇಳಿದ್ದಾರೆ ಎಂದು ನೆನಪಿಸಿದರು. ಭಾನುವಾರ ನಡೆದ ರ್‍ಯಾಲಿಯಲ್ಲಿ ಇಂಡಿಯಾ ಒಕ್ಕೂಟದ ಎಲ್ಲಾ ಮುಖ್ಯಸ್ಥರು ಪಾಲ್ಗೊಂಡಿದ್ದರು.












Click it and Unblock the Notifications