ಬ್ಲಿಂಕಿಟ್ ಬಾಯ್ ಆಗಿ ಡೆಲಿವರಿ ಕೆಲಸ ಮಾಡಿದ ಸಂಸದ ರಾಘವ್ ಚಡ್ಡಾ
ನವದೆಹಲಿ: ರಾಜ್ಯಸಭಾ ಸಂಸದ ಹಾಗೂ ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಅವರು ವಿಭಿನ್ನ ಹೆಜ್ಜೆ ಇಟ್ಟಿದ್ದಾರೆ. ಕಾರ್ಪೊರೇಟ್ ಬೋರ್ಡ್‌ರೂಮ್‌ಗಳಿಂದ ದೂರ ಸರಿದು, ಅವರು ಸ್ವತಃ ಡೆಲಿವರಿ ರೈಡರ್ ಆಗಿ ಬದಲಾಗಿದ್ದಾರೆ. ಗಿಗ್ ಕಾರ್ಮಿಕರ ಸಮಸ್ಯೆಗಳನ್ನು ದೇಶದ ಗಮನಕ್ಕೆ ತರಲು ಈ ಹೆಜ್ಜೆ ಇಟ್ಟಿದ್ದು, ಈ ಸಂಬಂಧ ಚಡ್ಡಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ವಿಡಿಯೋದಲ್ಲಿ ರಾಘವ್ ಚಡ್ಡಾ ಅವರು ಬ್ಲಿಂಕಿಟ್ (Blinkit) ಡೆಲಿವರಿ ಯೂನಿಫಾರ್ಮ್ ಧರಿಸಿ, ಒಬ್ಬ ರೈಡರ್ ಜೊತೆ ಕೂತು, ಡೆಲಿವರಿ ಬ್ಯಾಗ್ ಹಿಡಿದು ಅಂಗಡಿಯಿಂದ ಸಾಮಗ್ರಿ ಸಂಗ್ರಹಿಸಿ ಗ್ರಾಹಕರ ಮನೆಗೆ ತಲುಪಿಸಿದ್ದಾರೆ. ಲಿಫ್ಟ್‌ನಿಂದ ಗ್ರಾಹಕರ ಮನೆ ಕಡೆಗೆ ಸಾಗುವ ವೇಳೆ ರೈಡರ್ ಮುನ್ನಡೆಯುತ್ತಿದ್ದರೆ, ಚಡ್ಡಾ ಅವರೂ ಹಿಂಬಾಲಿಸುತ್ತಾರೆ. ವಿಡಿಯೋ ಕೊನೆಯಲ್ಲಿ "Stay tuned" ಎಂಬ ಸಂದೇಶದೊಂದಿಗೆ ಮುಕ್ತಾಯಗೊಳ್ಳುತ್ತದೆ.

ಗಿಗ್ ಕಾರ್ಮಿಕರೊಂದಿಗೆ ಹೊಸ ವರ್ಷ
ಈ ವಿಡಿಯೋ ಹೊರಬರುವ ಕೆಲವೇ ದಿನಗಳ ಹಿಂದೆ, ರಾಘವ್ ಚಡ್ಡಾ ಅವರು ಹೊಸ ವರ್ಷದ ದಿನದಂದು ದೇಶಾದ್ಯಂತ ಮುಷ್ಕರ ನಡೆಸುತ್ತಿದ್ದ ಗಿಗ್ ಕಾರ್ಮಿಕರೊಂದಿಗೆ ಕಾಲ ಕಳೆಯುವ ಮೂಲಕ ಅವರ ಬೇಡಿಕೆಗಳು ಮತ್ತು ಕೆಲಸದ ಪರಿಸ್ಥಿತಿಗಳ ಬಗ್ಗೆ ಬೆಳಕು ಚೆಲ್ಲಿದ್ದರು. ಗಿಗ್ ವರ್ಕರ್ಸ್ ಎದುರಿಸುತ್ತಿರುವ ಕಡಿಮೆ ಭದ್ರತೆ ಮತ್ತು ಕೆಲಸದ ಒತ್ತಡಗಳ ಬಗ್ಗೆ ಅವರು ನಿರಂತರವಾಗಿ ಧ್ವನಿ ಎತ್ತುತ್ತಿದ್ದಾರೆ. ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ನೀಡುತ್ತಿರುವ "10 ನಿಮಿಷದಲ್ಲಿ ಡೆಲಿವರಿ" ಭರವಸೆಗಳ ವಿರುದ್ಧ ರಾಘವ್ ಚಡ್ಡಾ ತೀವ್ರ ಟೀಕಿಸಿದ್ದಾರೆ. ಇಂತಹ ಗಡುವುಗಳು ರೈಡರ್‌ಗಳ ಮೇಲೆ ಭಾರೀ ಒತ್ತಡ ಸೃಷ್ಟಿಸುತ್ತಿದ್ದು, ಅವರ ಜೀವ ಸುರಕ್ಷತೆಯನ್ನೇ ಅಪಾಯಕ್ಕೆ ತಳ್ಳುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಹಿಂದಿನ ವರ್ಷ ರಾಜ್ಯಸಭೆಯ ಜೀರೋ ಅವರ್ ಸಂದರ್ಭದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದ ಚಡ್ಡಾ, ಈ ಜನರು ರೋಬೋಟ್‌ಗಳಲ್ಲ. ಅವರು ಯಾರಾದರೂ ಒಬ್ಬರ ತಂದೆ, ಗಂಡ, ಸಹೋದರ ಅಥವಾ ಮಗ. ಮನೆ ತಲುಪುವ ಸೌಲಭ್ಯ ಮಾತ್ರವಲ್ಲ, ಅದರ ಹಿಂದೆ ಇರುವ ಮಾನವೀಯ ಬೆಲೆಗೂ ಈ ಸದನ ಗಮನ ನೀಡಬೇಕು. ಈ 10 ನಿಮಿಷ ಡೆಲಿವರಿಯ ಕ್ರೌರ್ಯಕ್ಕೆ ಅಂತ್ಯವಾಗಬೇಕು ಎಂದು ಹೇಳಿದ್ದರು.
Away from boardrooms, at the grassroots. I lived their day.
— Raghav Chadha (@raghav_chadha) January 12, 2026
Stay tuned! pic.twitter.com/exGBNFGD3T
ರಾಘವ್ ಚಡ್ಡಾ ಅವರ ಈ ಡೆಲಿವರಿ ರೈಡರ್ ರೂಪಾಂತರ ಕೇವಲ ಒಂದು ಸ್ಟಂಟ್ ಅಲ್ಲ, ಬದಲಾಗಿ ಗಿಗ್ ಆರ್ಥಿಕತೆಯಲ್ಲಿ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರ ಬದುಕಿನ ವಾಸ್ತವವನ್ನು ಸಮಾಜ ಮತ್ತು ಸರ್ಕಾರದ ಮುಂದಿಡುವ ಪ್ರಯತ್ನವೆಂದು ವಿಶ್ಲೇಷಿಸಲಾಗುತ್ತಿದೆ. "Stay tuned" ಎಂಬ ಸಂದೇಶದಿಂದ, ಈ ವಿಚಾರವಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ರಮಗಳು ಅಥವಾ ಅಭಿಯಾನಗಳು ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ರಾಜಕಾರಣಿಯೊಬ್ಬರು ಈ ರೀತಿ ನೆಲಮಟ್ಟಕ್ಕೆ ಇಳಿದು ಗಿಗ್ ಕಾರ್ಮಿಕರ ಪಾತ್ರ ವಹಿಸಿರುವ ಈ ಘಟನೆ, ಕ್ವಿಕ್ ಕಾಮರ್ಸ್, ಕಾರ್ಮಿಕ ಹಕ್ಕುಗಳು ಮತ್ತು ಮಾನವೀಯತೆಯ ನಡುವಿನ ಸಮತೋಲನ ಕುರಿತು ದೇಶವ್ಯಾಪಿ ಚರ್ಚೆಗೆ ಕಾರಣವಾಗುತ್ತಿದೆ.












Click it and Unblock the Notifications