Priyanka Gandhi: ವಯನಾಡ್‌ನಲ್ಲಿ ಪ್ರಿಯಾಂಕಾ ಗಾಂಧಿ ಭರ್ಜರಿ ಗೆಲುವು: ಮೊದಲ ಚುನಾವಣೆಯಲ್ಲೇ ಭರ್ಜರಿ ದಾಖಲೆ!
Priyanka Gandhi: ವಯನಾಡ್ ಲೋಕಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕಿ ಹಾಗೂ ರಾಹುಲ್ ಗಾಂಧಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಭರ್ಜರಿ ಗೆಲುವು ದಾಖಲಿಸಿದ್ದಾರೆ. ಪ್ರಿಯಾಂಕಾ ಗಾಂಧಿ ಅವರು ಇದೇ ಮೊದಲ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಮೊದಲ ಚುನಾವಣೆಯಲ್ಲೇ ದಾಖಲೆಯನ್ನು ಸೃಷ್ಟಿಸಿದ್ದು, ವಯನಾಡ್ ಲೋಕಸಭೆ ಉಪ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದಾರೆ.
ಈ ಕ್ಷೇತ್ರದಲ್ಲಿ ಒಟ್ಟು 16 ಜನ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಈ ಭಾಗದಲ್ಲಿ ಮೊದಲಿನಿಂದಲೂ ಜನ ಭಾರೀ ಬೆಂಬಲ ಸೂಚಿಸಿದ್ದರು. ಇದೀಗ ಅವರು ವಯನಾಡ್‌ನಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಇನ್ನು ಪ್ರಿಯಾಂಕಾ ಗಾಂಧಿ ಅವರು ಬರೋಬ್ಬರಿ 2 ಲಕ್ಷಗಳ ಮತಗಳ ಅಂತರವನ್ನು ಬೆಳಿಗ್ಗೆ 11.30ಕ್ಕೆ ದಾಖಲಿಸಿದ್ದರು.

ವಯನಾಡ್ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಅವರ ಗೆಲುವು ಕಾಂಗ್ರೆಸ್‌ನಲ್ಲಿ ಹಾಗೂ ರಾಹುಲ್‌ಗಾಂಧಿ ಕುಟುಂಬದಲ್ಲಿ ಸಂತೋಷವನ್ನು ಉಂಟು ಮಾಡಿದೆ. ಈ ಕ್ಷೇತ್ರವನ್ನು ಕಳೆದ ಐದು ವರ್ಷಗಳಿಂದ ರಾಹುಲ್ ಗಾಂಧಿ ಅವರು ಪ್ರತಿನಿಧಿಸುತ್ತಿದ್ದಾರೆ. ಈ ಭಾಗದಲ್ಲಿನ ಜನರ ಸಮಸ್ಯೆಗಳಿಗೆ ರಾಹುಲ್ ಗಾಂಧಿ ಅವರು ಸ್ಪಂದಿಸುವ ಮೂಲಕ ಖ್ಯಾತಿ ಗಳಿಸಿದ್ದರು.
ಲೋಕಸಭೆಯಲ್ಲಿ ಕುಟುಂಬ: ಪ್ರಿಯಾಂಕಾ ಗಾಂಧಿ ಅವರು ಲೋಕಸಭೆಯನ್ನು ಪ್ರವೇಶಿಸುವ ಮೂಲಕ ಒಂದೇ ಕುಟುಂಬದ ಮೂರು ಜನ ಲೋಕಸಭೆಯನ್ನು ಪ್ರವೇಶಿಸಿದಂತೆ ಆಗಿದೆ. ಅಣ್ಣ ಮತ್ತು ತಂಗಿ ಲೋಕಸಭೆ (ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ) ಯನ್ನು ಪ್ರವೇಶಿಸಿದಂತೆ ಆಗಿದೆ. ಇನ್ನು ಸೋನಿಯಾ ಗಾಂಧಿ ಅವರು ರಾಜ್ಯಸಭಾ ಸದಸ್ಯರಾಗಿದ್ದು, ಒಂದೇ ಕುಟುಂಬದ ಮೂರು ಜನ ರಾಷ್ಟ್ರ ರಾಜಕೀಯದಲ್ಲಿ ಮಿಂಚಲಿದ್ದಾರೆ.

ಕಾಂಗ್ರೆಸ್ ಮುಂದಾಳತ್ವ ವಹಿಸಬೇಕು ಎಂದಿದ್ದರು
ಕಾಂಗ್ರೆಸ್ ಇತ್ತೀಚಿನ ವರ್ಷಗಳಲ್ಲಿ ನಿರಂತರ ಸೋಲುತ್ತಿದ್ದು, ರಾಹುಲ್ ಗಾಂಧಿ ಅವರ ಬದಲು ಪ್ರಿಯಾಂಕಾ ಗಾಂಧಿ ಅವರಿಗೆ ಅವಕಾಶ ನೀಡಬೇಕು ಎಂದು ಕಾಂಗ್ರೆಸ್‌ನ ಘಾಟನುಘಟಿ ನಾಯಕರೇ ಈ ಹಿಂದೆ ಆಗ್ರಹಿಸಿದ್ದರು. ಆದರೆ, ಆ ಸಂದರ್ಭದಲ್ಲಿ ಪ್ರಿಯಾಂಕಾ ಗಾಂಧಿ ಅವರು ಮೌನವಾಗಿದ್ದರು. ಆದರೆ, ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಅವರು ಕಾಂಗ್ರೆಸ್‌ನ ಚುನಾವಣೆ ಪ್ರಚಾರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದರು.
ಪ್ರಿಯಾಂಕಾ ಗಾಂಧಿ ಅವರು ರಾಜಕೀಯಕ್ಕೆ ಪ್ರವೇಶ ಮಾಡಬೇಕು ಇದರಿಂದ ಕಾಂಗ್ರೆಸ್ ಪುನಶ್ಚೇತನಕ್ಕೆ ಸಹಕಾರಿಯಾಗಲಿದೆ ಎಂದು ಕಾಂಗ್ರೆಸ್‌ನ ನಾಯಕರು ಹಾಗೂ ಕಾಂಗ್ರೆಸ್‌ನ ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದರು. ಪ್ರಿಯಾಂಕಾ ಗಾಂಧಿ ಅವರು ಬಿಜೆಪಿ ನಾಯಕರು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟಾಂಗ್ ಕೊಡುವ ಮೂಲಕ ಭಾರೀ ಸುದ್ದಿಯಾಗಿದ್ದರು.
ಪ್ರಧಾನಿ ನರೇಂದ್ರ ಮೋದಿಗೆ ಪ್ರಿಯಾಂಕಾ ಗಾಂಧಿ ಟಾಂಗ್
ಪ್ರಧಾನಿ ನರೇಂದ್ರ ಅವರು ಶ್ರೀಮಂತರ ಪರವಾಗಿ ಇದ್ದಾರೆ. ಅವರು ಯಾವುದೇ ಬೆಲೆ ತೆತ್ತಾದರೂ ಅಧಿಕಾರ ಹಿಡಿಯುವುದಕ್ಕೆ ಮುಂದಾಗುತ್ತಾರೆ ಎಂದು ವಯನಾಡ್ ಲೋಕಸಭೆ ಉಪ ಚುನಾವಣೆ ಪ್ರಚಾರ ಸಭೆಯಲ್ಲಿ ಗುಡುಗಿದ್ದರು. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳ ಸೂತ್ರದ ಹೇಳಿಕೆಗೆ ಭಾರೀ ವಿರೋಧ ವ್ಯಕ್ತಪಡಿಸಿದ್ದರು. ನನ್ನ ತಾಯಿ ಈ ದೇಶಕ್ಕಾಗಿ ತನ್ನ ಮಂಗಳ ಸೂತ್ರವನ್ನೇ ಮುಡುಪಾಗಿ ಇರಿಸಿದ್ದರು ಎಂದು ಪ್ರಿಯಾಂಕಾ ಗಾಂಧಿ ಅವರು ತಿರುಗೇಟು ನೀಡಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಂಗಳಸೂತ್ರವನ್ನೇ ಕಸಿದುಕೊಳ್ಳಲಿದೆ ಎಂದು ಚುನಾವಣೆ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದರು. ಇದಕ್ಕೆ ಪ್ರಿಯಾಂಕಾ ಗಾಂಧಿ ಅವರು ತಿರುಗೇಟು ನೀಡಿದ್ದರು.
ಜಾರ್ಖಂಡ್ & ಮಹಾರಾಷ್ಟ್ರ: ಜಾರ್ಖಂಡ್ ಹಾಗೂ ಮಹಾರಾಷ್ಟ್ರದಲ್ಲೂ ವಿಧಾನಸಭೆ ಚುನಾವಣೆ ನಡೆದಿದ್ದು. ಈ ಎರಡೂ ಕ್ಷೇತ್ರಗಳಲ್ಲೂ ಶನಿವಾರ ಮತದಾನ ಫಲಿತಾಂಶ ಪ್ರಕಟವಾಗಿದೆ. ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿ ಕೂಟವು ಭರ್ಜರಿ ಮುನ್ನಡೆ ಸಾಧಿಸಿದೆ. ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮುನ್ನಡೆ ಕಾಪಾಡಿಕೊಂಡಿತ್ತು.












Click it and Unblock the Notifications