ಪ್ರಧಾನಿ ಮೋದಿ - ಸಿಜೆಐ ಚಂದ್ರಚೂಡ್ ಅವರ "ಬಾಂಡ್" ಅನುಮಾನ ಮೂಡಿಸಿದೆ ಎಂದವರು ಯಾರು ?
ಪ್ರಧಾನಿ ನರೇಂದ್ರ ಮೋದಿ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಅವರ ಮನೆಯಲ್ಲಿ ನಡೆದಿರುವ ಗಣೇಶ ಪೂಜೆಯಲ್ಲಿ ಭಾಗವಹಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಮಹಾರಾಷ್ಟ್ರದ ವಿರೋಧ ಪಕ್ಷಗಳು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿವೆ. ಶಿವಸೇನೆಯ (ಯುಬಿಟಿ) ಪ್ರಮುಖ ನಾಯಕರಾದ ಸಂಜಯ್ ರಾವತ್ ಅವರು, ನಮಗೆ ನ್ಯಾಯ ಮೂರ್ತಿ ಡಿ.ವೈ. ಚಂದ್ರಚೂಡ್ ಅವರಿಂದ ನ್ಯಾಯ ಸಿಗಲಿದೆ ಎನ್ನುವ ಬಗ್ಗೆ ಅನುಮಾನ ಮೂಡಿದೆ ಎಂದು ಹೇಳಿದ್ದಾರೆ.
ಸಿಜೆಐ ಚಂದ್ರಚೂಡ್ ಅವರು ನಮ್ಮ ಪಕ್ಷದ ಪ್ರಕರಣದ ತನಿಖೆಯಿಂದ ದೂರವುಳಿಯಬೇಕು. ಏಕೆಂದರೆ ಅವರು ವಿವಿಧ ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ರಾವತ್ ಹೇಳಿದ್ದಾರೆ. ಪಕ್ಷಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಕೇಸ್‌ನಲ್ಲಿ ನಮಗೆ ನ್ಯಾಯ ನೀಡಲಿದ್ದಾರೆಯೇ ಎನ್ನುವ ಅನುಮಾನ ಮೂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಪಕ್ಷವು (ಬಿಜೆಪಿ) ಈ ಪ್ರಕರಣದಲ್ಲಿ ಪ್ರತಿವಾದಿಯಾಗಿದೆ.

ರಾಷ್ಟ್ರದಲ್ಲಿ ಗಣೇಶ ಚತುರ್ಥಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಜನ ಪರಸ್ಪರ ಮನೆಗಳಿಗೆ ಭೇಟಿ ನೀಡಿ, ಶುಭ ಹಾರೈಸುವುದು ಹಾಗೂ ಸಿಹಿ ಹಂಚಿಕೊಳ್ಳುತ್ತಿದ್ದಾರೆ. ಇದರ ಬಗ್ಗೆ ನನಗೆ ಯಾವುದೇ ಆಕ್ಷೇಪಣೆಗಳು ಸಹ ಇಲ್ಲ. ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಎಷ್ಟು ಮನೆಗಳಿಗೆ ಅಥವಾ ಯಾರ ಮನೆಗಾದರೂ ಭೇಟಿ ನೀಡಿದರೂ, ನನಗೆ ಯಾವ ಅಭ್ಯಂತರವೂ ಇಲ್ಲ. ಆದರೆ ಅವರು, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ಮನೆಯ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಚಂದ್ರಚೂಡ್ ದಂಪತಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಗಣೇಶ ಮೂರ್ತಿಗೆ ಒಟ್ಟಾಗಿ ಆರತಿ ಬೆಳಗಿದ್ದಾರೆ. ಸಂವಿಧಾನದ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ರಾಜಕಾರಣಿಗಳನ್ನು ಭೇಟಿ ಮಾಡುವುದೆಂದರೆ ಜನರ ಮನಸ್ಸಿನಲ್ಲಿ ಅನುಮಾನದ ಭಾವನೆ ಮೂಡಿಸುತ್ತದೆ ಎಂದು ರಾವತ್ ಹೇಳಿದ್ದಾರೆ.
ಇನ್ನು ನಮ್ಮ ಪ್ರಕರಣದಲ್ಲಿ ಕೇಂದ್ರ ಸರ್ಕಾರ (ಬಿಜೆಪಿ) ಪ್ರತಿವಾದಿಯಾಗಿದೆ. ಹೀಗಾಗಿ, ಚಂದ್ರಚೂಡ್ ಅವರು ಈ ಪ್ರಕರಣದ ವಿಚಾರಣೆಯಿಂದ ಅಂತರ ಕಾಪಾಡಿಕೊಳ್ಳಬೇಕು. ಅವರು ಇತರ ಪಕ್ಷದೊಂದಿಗೆ ಒಡನಾಟ (ಸಂಪರ್ಕ)ದಲ್ಲಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಹೀಗಾಗಿ, ಅವರು ನಮ್ಮ ಕೇಸ್‌ನ ವಿಚಾರಣೆಯಿಂದ ದೂರವುಳಿಯಬೇಕು ಎಂದು ರಾವತ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಈ ಪ್ರಕರಣದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್‌ನಿಂದ ನಮಗೆ ವಿಚಾರಣೆ ಮುಂದೂಡಿಕೆಯ ದಿನಾಂಕಗಳು ಬರುತ್ತಿವೆ (ವಿಚಾರಣೆ ಮುಂದೂಡಿಕೆ ಆಗುತ್ತಿದೆ). ಅಕ್ರಮ ಸರ್ಕಾರ ಮಹಾರಾಷ್ಟ್ರದಲ್ಲಿ ಮುಂದುವರಿದಿದೆ. ಶಿವಸೇನೆ ಹಾಗೂ ಎನ್‌ಸಿಪಿ ಪಕ್ಷಗಳು ತೀವ್ರ ಸಂಕಷ್ಟದಲ್ಲಿವೆ. ನಮಗೆ ನ್ಯಾಯ ಸಿಗುತ್ತಿಲ್ಲ. ಮಹಾರಾಷ್ಟ್ರದಲ್ಲಿರುವ ಅಕ್ರಮ ಸರ್ಕಾರವನ್ನು ಉಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶ್ರಮಿಸುತ್ತಿದ್ದಾರೆ ಎಂದು ರಾವತ್ ಅವರು ದೂರಿದ್ದಾರೆ.
ಇನ್ನು ಚಂದ್ರಚೂಡ್ ಅವರು ಹಾಗೂ ಪ್ರಧಾನಿ ನರೇಂದ್ರ ಮೋದಿ ನಡುವಿನ ಬಂಧವು (ಬಾಂಡ್) ಮಹಾರಾಷ್ಟ್ರದ ಜನರ ಮನಸ್ಸಿನಲ್ಲಿ ಅನುಮಾನದ ಬೀಜವನ್ನು ಸೃಷ್ಟಿಸಿದೆ ಎಂದೂ ರಾವತ್ ಹೇಳಿರುವುದು ವರದಿಯಾಗಿದೆ. ಇನ್ನು ಚಂದ್ರಚೂಡ್ ಅವರು ಮೂಲತಃ ಮಹಾರಾಷ್ಟ್ರದವರಾಗಿದ್ದಾರೆ. ಇದೀಗ ಇನ್ನು ಕೆಲವೇ ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ನಡೆದಿರುವ ಘಟನೆ ಮುಂದಿನ ದಿನಗಳಲ್ಲಿ ಯಾವ ರೀತಿಯ ತಿರುವು ಪಡೆದುಕೊಳ್ಳಲಿದೆ ಎನ್ನುವ ಕುತೂಹಲವನ್ನು ಮೂಡಿಸಿದೆ.












Click it and Unblock the Notifications