ಗಣೇಶ ಚತುರ್ಥಿ ಹಿನ್ನೆಲೆ ಮುಂಬೈನ ಪ್ರಸಿದ್ಧ 'ಚಿಂಚ್‌ಪೋಕ್ಲಿ ಚಾ ಚಿಂತಾಮಣಿ'ಗೆ ಪ್ರಣವ್, ಕರಣ್ ಅದಾನಿ ಭೇಟಿ
Pranav Adani: ಮಹಾರಾಷ್ಟ್ರದ ಮುಂಬೈನ ಅತ್ಯಂತ ಹಳೆಯ ಅತ್ಯಂತ ಜನಪ್ರಿಯ ಮತ್ತು ಐತಿಹಾಸಿಕ ಗಣೇಶೋತ್ಸವ ಮಂಡಳಿಗಳಲ್ಲಿ ಚಿಂಚ್‌ಪೋಕ್ಲಿ ಚಾ ಚಿಂತಾಮಣಿಯು ಒಂದಾಗಿದೆ. ಇದು ನಗರದ ಹಳೆಯ ಜವಳಿ ಮಿಲ್ ಪ್ರದೇಶಗಳಾದ ಪರೇಲ್, ಗಿರ್‌ಗಾಂವ್ ಮತ್ತು ಲಾಲ್‌ಬಾಗ್‌ಗಳೊಂದಿಗೆ ನಂಟನ್ನು ಹೊಂದಿದೆ. ಇದೀಗ ಪ್ರಣವ್ ಅದಾನಿ ಅವರು, ಇಲ್ಲಿಗೆ ತಮ್ಮ ಕುಟುಂಬದ ಸದಸ್ಯರೊಂದಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಇಂದು (ಸೆಪ್ಟೆಂಬರ್ 14) ದೇಶಾದ್ಯಂತ ಗಣೇಶ ಚತುರ್ಥಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಇದೇ ವೇಳೆ ಅದಾನಿ ಎಂಟರ್‌ಪ್ರೈಸಸ್ ನಿರ್ದೇಶಕರಾದ ಪ್ರಣವ್ ಅದಾನಿ ಮತ್ತು ಅದಾನಿ ಪೋರ್ಟ್ಸ್ ಅಂಡ್ ಸ್ಪೆಷಲ್ ಎಕನಾಮಿಕ್ ಜೋನ್ ಲಿಮಿಟೆಡ್ ಮ್ಯಾನೇಜಿಂಗ್ ಡೈರೆಕ್ಟರ್ ಕರಣ್ ಅದಾನಿ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಪ್ರಸಿದ್ಧ 'ಚಿಂಚ್‌ಪೋಕ್ಲಿ ಚಾ ಚಿಂತಾಮಣಿ' ಗಣಪತಿ ಮಂಡಳಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಪ್ರಣವ್ ಅದಾನಿ ಹೇಳಿದ್ದೇನು?
ಈ ವೇಳೆ ಮಾತನಾಡಿದ ಅದಾನಿ ಎಂಟರ್‌ಪ್ರೈಸಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಪ್ರಣವ್ ಅದಾನಿ ಅವರು, 'ಚಿಂಚ್‌ಪೋಕ್ಲಿ ಸಾರ್ವಜನಿಕ ಉತ್ಸವ ಮಂಡಳಿಯೊಂದಿಗೆ ಸಹಭಾಗಿತ್ವ ಹೊಂದಲು ಅದಾನಿ ಗ್ರೂಪ್ ಗೌರವಿಸುತ್ತದೆ. 107ನೇ ವರ್ಷದ ಆಚರಣೆಯಲ್ಲಿರುವ 'ಚಿಂಚ್‌ಪೋಕ್ಲಿ ಚಾ ಚಿಂತಾಮಣಿ' ಗಣಪತಿಯ ಪರಂಪರೆಯು ಭಕ್ತಿ, ಏಕತೆ ಮತ್ತು ಮುಂಬೈನ ಸಾಂಸ್ಕೃತಿಕ ಮನೋಭಾವದ ಸಂಕೇತವಾಗಿ ಮುಂದುವರಿದಿದೆ,' ಎಂದು ಹೇಳಿದರು.
'ಚಿಂಚ್‌ಪೋಕ್ಲಿ ಚಾ ಚಿಂತಾಮಣಿ'ಯ ವಿಶೇಷತೆ
ಮುಂಬೈನ ಎರಡನೇ ಅತ್ಯಂತ ಹಳೆಯ ಸಾರ್ವಜನಿಕ ಗಣಪತಿ ಮಂಡಳಿಯಾದ 'ಚಿಂಚ್‌ಪೋಕ್ಲಿ ಚಾ ಚಿಂತಾಮಣಿ'ಯ ಇತಿಹಾಸವು, ನಗರದ ಹಳೆಯ ಗಿರಣಿ (ಜವಳಿ) ಪ್ರದೇಶಗಳಾದ ಪರೇಲ್, ಗಿರ್‌ಗಾಂವ್ ಮತ್ತು ಲಾಲ್‌ಬಾಗ್‌ಗಳವರೆಗೂ ವಿಸ್ತರಿಸಿಕೊಂಡಿದೆ. ಸ್ವಾತಂತ್ರ್ಯ ಹೋರಾಟಗಾರ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರು 1890ರ ದಶಕದಲ್ಲಿ ಗಣೇಶ ಚತುರ್ಥಿಯನ್ನು ಸಾರ್ವಜನಿಕ ಉತ್ಸವವಾಗಿ ಪರಿವರ್ತಿಸುವ ಮೂಲಕ ಪ್ರಾರಂಭಿಸಿದ ಸಂಪ್ರದಾಯವನ್ನು ಈ ಆಚರಣೆಯು ಮುಂದುವರಿಸಿಕೊಂಡು ಬಂದಿದೆ.
ತನ್ನ ವಿಶಿಷ್ಟ ವಾರ್ಷಿಕ ಥೀಮ್‌ಗಳ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿರುವ ಈ ವರ್ಷದ ಆಚರಣೆಯು, ದಕ್ಷಿಣ ಭಾರತದ ದೇವಾಲಯಗಳ ವಾಸ್ತುಶಿಲ್ಪದಿಂದ ಸ್ಫೂರ್ತಿ ಪಡೆದಿದೆ. ಗರುಡ, ಕೀರ್ತಿಮುಖ, ಶಂಖ, ಚಕ್ರ ಮತ್ತು ಕರ್ಪೂರದ ತಿಲಕದಂತಹ ಪವಿತ್ರ ಸಂಕೇತಗಳನ್ನು ಅಳವಡಿಸಿಕೊಂಡು, ತಿರುಮಲ ತಿರುಪತಿಯ ಶ್ರೀ ವೆಂಕಟೇಶ್ವರ ಬಾಲಾಜಿಯ ರೂಪದಲ್ಲಿ ಈ ಬಾರಿಯ ಮೂರ್ತಿಯನ್ನು ವಿನ್ಯಾಸಗೊಳಿಸಲಾಗಿದೆ.
ಈ ಮಂಡಳಿಯು ಹೈದರಾಬಾದ್ ಮತ್ತು ಭುವನಗಿರಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದ ಭವ್ಯತೆಯನ್ನು ಮರುಸೃಷ್ಟಿಸಿದ್ದು, ಎತ್ತರದ ಗೋಪುರಗಳು, ಪವಿತ್ರ ದೀಪಸ್ತಂಭಗಳು ಹಾಗೂ ಸೂಕ್ಷ್ಮವಾಗಿ ಕೆತ್ತಲಾದ ವಿಗ್ರಹಗಳನ್ನು ಒಳಗೊಂಡಿದೆ. ಉತ್ಸವದ ಮೂಲದಲ್ಲಿ ಗಿರಣಿ ಕಾರ್ಮಿಕರು ಪ್ರಮುಖ ಪಾತ್ರ ವಹಿಸಿದ್ದರು.
1982ರ ಗಿರಣಿ ಮುಷ್ಕರ ಮತ್ತು ಆ ನಂತರ ನಗರದಲ್ಲಾದ ನಗರೀಕರಣ ಹಾಗೂ ರೂಪಾಂತರಗಳಿಂದ ಉಂಟಾದ ಅಡಚಣೆಗಳ ಹೊರತಾಗಿಯೂ, 'ಚಿಂಚ್‌ಪೋಕ್ಲಿ ಚಾ ಚಿಂತಾಮಣಿ' ತನ್ನ ಸುತ್ತಮುತ್ತಲ ಪ್ರದೇಶಕ್ಕೆ ಸಾಂಸ್ಕೃತಿಕ ಆಧಾರಸ್ತಂಭವಾಗಿ ತನ್ನ ಸೇವೆಯನ್ನು ಮುಂದುವರಿಸಿಕೊಂಡು ಬಂದಿದೆ. ಈ ಮಂಡಳಿಯು ಇಂದು ಸುಮಾರು 5,000 ದೇಣಿಗೆದಾರರನ್ನು ಹೊಂದಿದ್ದು, ತನ್ನ ಸೇವೆಯನ್ನು ಕೇವಲ ಗಣೇಶೋತ್ಸವಕ್ಕೆ ಮಾತ್ರ ಸೀಮಿತಗೊಳಿಸದೆ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೂ ವಿಸ್ತರಿಸಿದೆ.
ಕೋವಿಡ್ ವೇಳೆ ಸಾರ್ವಜನಿಕ ಆಚರಣೆಗಳಿಗೆ ನಿರ್ಬಂಧ
1939ರಿಂದಲೂ ಈ ಉತ್ಸವಗಳನ್ನು ಚಿಂಚ್‌ಪೋಕ್ಲಿ ರೈಲ್ವೆ ನಿಲ್ದಾಣದ ಪೂರ್ವ ಭಾಗದಲ್ಲಿ ಆಚರಿಸಲಾಗುತ್ತಿದ್ದು, ಚಿಂಚ್‌ಪೋಕ್ಲಿ ಸಾರ್ವಜನಿಕ ಉತ್ಸವ ಮಂಡಳಿಯು ಯಾವುದೇ ಅಡೆತಡೆಯಿಲ್ಲದೆ ಸತತವಾಗಿ ಇದನ್ನು ಆಯೋಜಿಸಿಕೊಂಡು ಬರುತ್ತಿದೆ. ಗಣೇಶೋತ್ಸವದ ಆಚರಣೆಯ ಹೊರತಾಗಿಯೂ, ರಕ್ತದಾನ ಶಿಬಿರಗಳು, ಆರೋಗ್ಯ ರಕ್ಷಣೆ ಕಾರ್ಯಕ್ರಮಗಳು ಹಾಗೂ ಮಕ್ಕಳಿಗಾಗಿ ವಿವಿಧ ಯೋಜನೆಗಳನ್ನು ಆಯೋಜಿಸುತ್ತದೆ. ಕೋವಿಡ್-19 ಮಹಾಮಾರಿ ಹಬ್ಬಿದ್ದ ಸಂಕಷ್ಟದ ಕಾಲದಲ್ಲಿ ಸಾರ್ವಜನಿಕ ಆಚರಣೆಗಳನ್ನು ಕಡಿಮೆ ಮಾಡಿ, ಆರೋಗ್ಯ ತಪಾಸಣೆ ಶಿಬಿರಗಳು, ವೈದ್ಯಕೀಯ ನೆರವು ಮತ್ತು ರಕ್ತದಾನ ಶಿಬಿರಗಳಂತಹ ಸಮಾಜಮುಖಿ ಕಾರ್ಯಗಳ ಮೂಲಕ ಮಾದರಿಯಾಗಿತ್ತು.


Click it and Unblock the Notifications
