LPG Cylinder Subsidy: ಎಲ್‌ಪಿಜಿ ಸಿಲಿಂಡರ್ ಸಹಾಯಧನ ಹೆಚ್ಚಳ
ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಪ್ರತಿ ಎಲ್‌ಪಿಜಿ ಸಿಲಿಂಡರ್‌ಗೆ ಸಿಗುತ್ತಿದ್ದ ಸಹಾಯಧನವನ್ನು 200 ರೂಪಾಯಿಗಳಿಂದ 300 ರೂಪಾಯಿಗೆ ಹೆಚ್ಚಳ ಮಾಡಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದರು.
ಬುಧವಾರ ನಡೆದ ಸಂಪುಟ ನಿರ್ಧಾರಗಳ ಬಗ್ಗೆ ಮಾಹಿತಿ ನೀಡುವ ಸಂದರ್ಭದಲ್ಲಿ ಅವರು ಈ ಮಾಹಿತಿಯನ್ನು ಬಹಿರಂಗಪಡಿಸಿದರು. ಗೃಹಬಳಕೆಯ ಅಡುಗೆ ಅನಿಲದ ಸಿಲಿಂಡರ್‌ಗಳ ಬೆಲೆಯನ್ನು ಎಲ್ಲಾ ಗ್ರಾಹಕರಿಗೆ ₹200 ಕಡಿತಗೊಳಿಸಿದ ಒಂದು ತಿಂಗಳ ನಂತರ ಕೇಂದ್ರವು ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಈ ನಿರ್ಧಾರದ ನಂತರ ಪೂರಕ ಸಬ್ಸಿಡಿಯಿಂದಾಗಿ 2023-24 ರ ಆರ್ಥಿಕ ವರ್ಷಕ್ಕೆ 7,680 ಕೋಟಿ ರೂಪಾಯಿ ಹೆಚ್ಚುವರಿ ಆರ್ಥಿಕ ಪರಿಣಾಮ ಉಂಟಾಗಬಹುದು ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅನ್ವಯ
ಪ್ರಧಾನ ಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳು ಪ್ರಸ್ತುತ 14.2 ಕೆಜಿ ಗೃಹ ಬಳಕೆಯ ಸಿಲಿಂಡರ್‌ಗೆ ಮಾರುಕಟ್ಟೆ ಬೆಲೆ 903 ರೂಪಾಯಿಗಳ ಬದಲಾಗಿ 703 ರೂಪಾಯಿಗಳನ್ನು ಪಾವತಿಸುತ್ತಿದ್ದು, ಕೇಂದ್ರ ಸಚಿವ ಸಂಪುಟದ ನಿರ್ಧಾರದ ಬಳಿಕ ಈಗ 603 ರೂಪಾಯಿ ಪಾವತಿಸಲಿದ್ದಾರೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY), ಮೇ 1, 2016 ರಂದು ಪಿಎಂ ಮೋದಿ ಅವರು ಯುಪಿಯ ಬಲ್ಲಿಯಾದಲ್ಲಿ ಪ್ರಾರಂಭಿಸಿದರು, ಗ್ರಾಮೀಣ ಮನೆಗಳಿಗೆ ಎಲ್‌ಪಿಜಿಯಂತಹ ಅಡುಗೆ ಇಂಧನವನ್ನು ಒದಗಿಸುವ ಗುರಿಯನ್ನು ಈ ಯೋಜನೆ ಹೊಂದಿದೆ.
ಬಡತನ ರೇಖೆಗಿಂತ ಕೆಳಗಿರುವ (BPL) ಕುಟುಂಬಗಳು, ಎಸ್‌ಸಿ/ ಎಸ್‌ಟಿ ಸಮುದಾಯಗಳು, ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY), ಅಂತ್ಯೋದಯ ಅನ್ನ ಯೋಜನೆ (AAY), ಅರಣ್ಯವಾಸಿಗಳು ಮತ್ತು ಇತರ ಅನನುಕೂಲಕರ ಗುಂಪುಗಳ ಫಲಾನುಭವಿಗಳಿಗೆ ಎಲ್‌ಪಿಜಿ ಸಂಪರ್ಕಗಳನ್ನು ನೀಡಲು ಯೋಜನೆಯನ್ನು ಜಾರಿ ಮಾಡಲಾಗಿದೆ.












Click it and Unblock the Notifications