ಉತ್ತರ ಪ್ರದೇಶ ಅಸೆಂಬ್ಲಿಯಲ್ಲಿ ಸಿಕ್ಕಿದ್ದು PETN ಸ್ಫೋಟಕ ಅಲ್ಲ
ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಸಿಕ್ಕಿದ್ದ ವಸ್ತು ಸಿಲಿಕಾನ್ ಆಕ್ಸೈಡ್. ಅದು ಪ್ಲಾಸ್ಟಿಕ್ ಸ್ಫೋಟಕವಲ್ಲ ಎಂದು ಹೇಳಿದ ತಜ್ಞರು.
ಲಖ್ನೋ, ಸೆಪ್ಟಂಬರ್ 4: ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಕೆಲ ದಿನಗಳ ಹಿಂದೆ ಪತ್ತೆಯಾಗಿದ್ದ ಅನುಮಾನಾಸ್ಪದ ವಸ್ತು ಸಿಲಿಕಾನ್ ಆಕ್ಸೈಡ್ ಆಗಿದ್ದು ಇದು ಭಯಾನಕ ಪ್ಲಾಸ್ಟಿಕ್ ಸ್ಫೋಟಕವಲ್ಲ (ಪಿಇಟಿಎನ್) ಎಂದು ಹೇಳಲಾಗಿದೆ.
ಜುಲೈ 14ರಂದು ಉತ್ತರ ಪ್ರದೇಶದ ವಿಧಾನ ಸಭೆಯಲ್ಲಿ ಬಿಳಿಪುಡಿಯುಳ್ಳ ವಸ್ತುವೊಂದು ಪತ್ತೆಯಾಗಿತ್ತು. ಸಮಾಜವಾದಿ ಪಕ್ಷದ ಶಾಸಕ ಮನೋ ಪಾಂಡೆ ಅವರು ಕುಳಿತುಕೊಳ್ಳುವ ಆಸನದ ಕೆಳಗೇ ಈ ಸ್ಫೋಟಕ ಪತ್ತೆಯಾಗಿದ್ದು ಎಲ್ಲರ ಹುಬ್ಬೇರಿಸಿತ್ತು. ಅತಿ ಭದ್ರತೆಯನ್ನೂ ದಾಟಿ ಇದು ಶಾಸಕರು ಕೂರುವ ಸ್ಥಳಕ್ಕೆ ಇದು ರವಾನೆಯಾಗಿದ್ದಾರೂ ಹೇಗೆಂಬುದು ಭಾರೀ ದೊಡ್ಡ ದಿಗಿಲನ್ನು ಹುಟ್ಟುಹಾಕಿತ್ತು.

ಇಡೀ ದೇಶವನ್ನೂ ತಲ್ಲಣಗೊಳಿಸಿದ್ದ ಪೆಂಟಾ ಎರಿಥ್ರಿಟೋಲ್ ಟೆಟ್ರಾ ನೈಟ್ರೇಟ್ (ಪಿಇಟಿಎನ್) ಎಂಬ ರಾಸಾಯನಿಕ ಎಂದು ಆರಂಭದಲ್ಲಿ ಹೇಳಲಾಗಿತ್ತು. ಇದು ಭದ್ರತೆಯ ಪರೀಕ್ಷಾ ಹಂತಗಳಲ್ಲಿ ಉಪಯೋಗಿಸುವ ಮೆಟಲ್ ಡಿಟೆಕ್ಟರ್ ಗೆ ಸಿಗುವುದಿಲ್ಲ ಹಾಗೂ ಅಲ್ಪ ಉಷ್ಣಾಂಶ ತಾಗಿದರೂ ಅದು ಸ್ಫೋಟಗೊಳ್ಳುತ್ತದೆ ಎಂದು ಹೇಳಲಾಗಿತ್ತು.
ಅದನ್ನು ಹೆಚ್ಚಿನ ತನಿಖೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲದೆ, ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಆಯೋಗಕ್ಕೆ (ಎನ್ಐಎ) ಹಸ್ತಾಂತರಿಸಲಾಗಿತ್ತು.
ಇದೀಗ, ಅದರ ಪರೀಕ್ಷಾ ಫಲಿತಾಂಶ ಬಂದಿದ್ದು, ಇದು ಸಾಮಾನ್ಯ ಸ್ಫೋಟಕಗಳಲ್ಲಿ ಬಳಕೆಯಾಗುವ ಸಿಲಿಕಾನ್ ಆಕ್ಸೈಡ್ ಎಂದು ತಜ್ಞರು ತಿಳಿಸಿದ್ದಾರೆ. ಇದಲ್ಲದೆ, ಇದು ಪಿಇಟಿಎನ್ ಮಾದರಿಯ ಸ್ಫೋಟಕವಲ್ಲ ಎಂದು ಹೇಳಿದ್ದಾರೆ.












Click it and Unblock the Notifications