2000 ರೂ. ನೋಟು ನರೇಂದ್ರ ಮೋದಿಗೆ ಇಷ್ಟವಿರಲಿಲ್ಲ; ಬಹಿರಂಗಪಡಿಸಿದ ಮಾಜಿ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ
ದೇಶದಲ್ಲಿ 2016ರಿಂದ ಚಲಾವಣೆಯಲ್ಲಿದ್ದ 2000 ರೂ. ಮುಖಬೆಲೆಯ ನೋಟುಗಳನ್ನು ಸ್ಥಗಿತಗೊಳಿಸಿ ವಾಪಸ್ ಪಡೆಯುವುದಾಗಿ ಶುಕ್ರವಾರ, ಮೇ 19ರಂದು ಆರ್‌ಬಿಐ ತಿಳಿಸಿದೆ.
ಮೇ 23ರಿಂದ ಬ್ಯಾಂಕ್‌ಗಳಲ್ಲಿ 2000 ರೂ. ನೋಟು ಬದಲಿಸಿಕೊಳ್ಳಲು ಸೆಪ್ಟೆಂಬರ್ 30ರವರೆಗೆ ಅವಕಾಶ ನೀಡಲಾಗಿದ್ದು, ಅಕ್ಟೋಬರ್ 1ರಿಂದ ನೋಟು ಚಲಾವಣೆಯನ್ನು ಸಂಪೂರ್ಣ ಬಂದ್ ಮಾಡಲಾಗುವುದು ಎಂದು ಆರ್‌ಬಿಐ ಹೇಳಿದೆ.

ಇನ್ನು ಈ ಕುರಿತು ಕುತೂಹಲಕಾರಿ ವಿಷಯವೊಂದನ್ನು ಪ್ರಧಾನಮಂತ್ರಿ ಮಾಜಿ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಬಹಿರಂಗಪಡಿಸಿದ್ದು, 2000 ರೂ. ನೋಟು ಚಲಾವಣೆಗೆ ತರುವುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಷ್ಟವಿರಲಿಲ್ಲ ಎಂದು ಹೇಳಿದ್ದಾರೆ.
"2016ರ ನವೆಂಬರ್ 8ರಂದು 500, 1000 ರೂ. ಮುಖಬೆಲೆ ನೋಟುಗಳನ್ನು ನಿಷೇಧಿಸಿ 2000 ರೂ. ಹೊಸ ನೋಟುಗಳನ್ನು ಪ್ರಿಂಟ್ ಮಾಡಲು ಅಧಿಕಾರಿಗಳ ಸಲಹೆಯಾಗಿತ್ತು. ಆದರೆ, ಇದು ಪ್ರಧಾನಿ ನರೇಂದ್ರ ಮೋದಿಯವರಿಗೆ ಇಷ್ಟವಿರಲಿಲ್ಲ".
"ಆದರೆ, ನೋಟು ನಿಷೇಧ ಕುರಿತ ಚರ್ಚೆಯಲ್ಲಿ ಅಧಿಕಾರಿಗಳ ಸಲಹೆಯ ಬಳಿಕ ಪ್ರಧಾನಿಯವರು ಹೊಸ 2000 ರೂ. ನೋಟು ಬಿಡುಗಡೆಗೆ ಒಪ್ಪಿದರು," ಎಂದು ಆಗ ಪ್ರಧಾನಮಂತ್ರಿ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದ ನೃಪೇಂದ್ರ ಮಿಶ್ರಾ ಬಹಿರಂಗಪಡಿಸಿದ್ದಾರೆ.

ನೋಟ್ ಬ್ಯಾನ್ ಸಭೆಯಲ್ಲಿ ನಡೆದಿದ್ದೇನು?
"500, 1000 ರೂ. ಮುಖಬೆಲೆ ನೋಟುಗಳನ್ನು ನಿಷೇಧ ಮಾಡಿದ ನಂತರ, ಹಣದ ತುರ್ತು ಅಗತ್ಯವನ್ನು ಪೂರೈಸಲು 2000 ರೂ. ಮುಖಬೆಲೆಯ ನೋಟು ಬಿಡುಗಡೆಯ ಪ್ರಸ್ತಾಪವನ್ನು ಅಧಿಕಾರಿಗಳು ಮುಂದಿಟ್ಟಿದ್ದರು".
"ಆಗ ಪ್ರಧಾನಿ ನರೇಂದ್ರ ಮೋದಿ ಬಡವರು ಹಾಗೂ ಮಧ್ಯಮ ವರ್ಗದ ಜನ 2000 ರೂ. ನೋಟು ಬಳಸುವುದಿಲ್ಲ. ಹೆಚ್ಚಾಗಿ 100, 500 ರೂ. ನೋಟು ಬಳಸುತ್ತಾರೆ. ಬಡ ಜನರಿಗೆ ತೊಂದರೆಯಾಗುವುದು ಬೇಡ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು," ಎಂದು ನೃಪೇಂದ್ರ ಮಿಶ್ರಾ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಆಕ್ಷೇಪಕ್ಕೆ ಆಪ್ತ ಅಧಿಕಾರಿಗಳ ತಂಡ, ಇದು ತಾತ್ಕಾಲಿಕ ಕ್ರಮ ಅಷ್ಟೇ ಎಂದು ಮನವರಿಕೆ ಮಾಡಿದ್ದರು. ಅಧಿಕಾರಿಗಳ ತಂಡದ ಸಲಹೆ ಪ್ರಕಾರ, ಪ್ರಧಾನಿ ಮೋದಿಯವರು 2000 ರೂ. ನೋಟು ಬಿಡುಗಡೆಗೆ ಸಹಮತ ನೀಡಿದರು ಎಂದು ಮಾಧ್ಯಮವೊಂದಕ್ಕೆ ನೃಪೇಂದ್ರ ಮಿಶ್ರಾ ಹೇಳಿಕೆ ನೀಡಿದ್ದಾರೆ.
ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರ 70ನೇ ಜನ್ಮದಿನ ಹಿನ್ನೆಲೆಯಲ್ಲಿ ಪತ್ರಿಕೆಗೆ ಬರೆದಿದ್ದ ಲೇಖನವೊಂದರಲ್ಲಿ ನೃಪೇಂದ್ರ ಮಿಶ್ರಾ ಈ ವಿಚಾರವನ್ನು ತಿಳಿಸಿದ್ದರು.
ಆಗ ನೋಟು ನಿಷೇಧದ ಬಗ್ಗೆ ಭಾರೀ ಟೀಕೆ ವ್ಯಕ್ತವಾದಾಗ ಪ್ರಧಾನಿ ಮೋದಿ ಅವರು ಅಧಿಕಾರಿಗಳನ್ನು ದೂಷಿಸದೇ, ಸ್ವತಃ ತಾವೇ ಹೊಣೆಯನ್ನು ಹೊತ್ತುಕೊಂಡರು. 2000 ರೂ. ನೋಟು ಬಿಡುಗಡೆ ಸಹಮತ ಇಲ್ಲದಿದ್ದರೂ, ಆಪ್ತ ಅಧಿಕಾರಿಗಳು ನೀಡಿದ ಸಲಹೆಯನ್ನು ಒಪ್ಪಿಕೊಂಡು, ಅದನ್ನು ದೇಶದ ಮುಂದೆ ಸಮರ್ಥಿಸಿಕೊಂಡಿದ್ದರು ಎಂದು ಪ್ರಧಾನಿಯವರ ಮಾಜಿ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ತೆರೆದಿಟ್ಟಿದ್ದಾರೆ.












Click it and Unblock the Notifications