NDA Government: ಮೋದಿ ಸಚಿವ ಸಂಪುಟದಲ್ಲಿ ಆರು ಮಾಜಿ ಮುಖ್ಯಮಂತ್ರಿಗಳು
ಭಾನುವಾರ ನರೇಂದ್ರ ಮೋದಿ ಜೊತೆ 71 ಮಂದಿ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನರೇಂದ್ರ ಮೋದಿ ಕ್ಯಾಬಿನೆಟ್‌ನಲ್ಲಿ ಈ ಬಾರಿ ಆರು ಮಾಜಿ ಮುಖ್ಯಮಂತ್ರಿಗಳು ಸಚಿವ ಸ್ಥಾನ ಪಡೆದಿರುವುದು ವಿಶೇಷವಾಗಿದೆ.
30 ಮಂತ್ರಿಗಳ ಸಂಪುಟದಲ್ಲಿ ಮಧ್ಯಪ್ರದೇಶದ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಶಿವರಾಜ್ ಸಿನ್ ಚೌಹಾಣ್, ಎರಡು ಬಾರಿ ಹರಿಯಾಣದ ಮಾಜಿ ಮುಖ್ಯಮಂತ್ರಿಯಾಗಿದ್ದ ಮನೋಹರ್ ಲಾಲ್ ಖಟ್ಟರ್, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ರಾಜನಾಥ್ ಸಿಂಗ್ ಮತ್ತು ಅಸ್ಸಾಂನ ಮಾಜಿ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಸೇರಿದ್ದಾರೆ. ಎನ್‌ಡಿಎ ಮಿತ್ರಪಕ್ಷಗಳಲ್ಲಿ ಬಿಹಾರ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಮತ್ತು ಕರ್ನಾಟಕ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಇದ್ದಾರೆ.

ಪ್ರಧಾನಿಯಾಗುವ ಮೊದಲು ಪ್ರಧಾನಿ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಇವರನ್ನು ಸೇರಿಸಿದರೆ ಪ್ರಸ್ತುತ 7 ಮಾಜಿ ಸಿಎಂಗಳು ಈಗ ಕೇಂದ್ರದಲ್ಲಿದ್ದಾರೆ.
30 ಕ್ಯಾಬಿನೆಟ್ ಮಂತ್ರಿಗಳಲ್ಲದೆ, ಸ್ವತಂತ್ರ ಉಸ್ತುವಾರಿ ಹೊಂದಿರುವ ಐದು ರಾಜ್ಯ ಸಚಿವರು ಮತ್ತು 36 ಕಿರಿಯ ಮಂತ್ರಿಗಳನ್ನು ಒಳಗೊಂಡಿದೆ. ಪರಿಷತ್ತಿನಲ್ಲಿ ಇತರ 23 ಸಚಿವರು ರಾಜ್ಯಗಳಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ, 39 ಕೇಂದ್ರದ ಮಾಜಿ ಸಚಿವರಾಗಿದ್ದಾರೆ.
ಅನುಭವಿಗಳಿಗೆ ಹೆಚ್ಚಿನ ಅವಕಾಶ
ಪ್ರಧಾನಿ ಮೋದಿಯವರು ಅನುಭವಕ್ಕೆ ಒತ್ತು ನೀಡಿದ್ದು, ಸಂಪುಟದ ಉನ್ನತ ಶ್ರೇಣಿಯಲ್ಲಿ ಅಮಿತ್ ಶಾ, ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್, ಎಸ್ ಜೈಶಂಕರ್, ಪಿಯೂಷ್ ಗೋಯಲ್, ಜ್ಯೋತಿರಾದಿತ್ಯ ಸಿಂಧಿಯಾ, ಧರ್ಮೇಂದ್ರ ಪ್ರಧಾನ್, ಭೂಪೇಂದರ್ ಯಾದವ್, ಅಶ್ವಿನಿ ವೈಷ್ಣವ್, ಪ್ರಲ್ಹಾದ್ ಸಿಂಗ್, ಮತ್ತು ಪ್ರಲ್ಹಾದ್ ಜೊಶಿಗೆ ಅವಕಾಶ ಸಿಕ್ಕಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಎಲ್ಲ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.
16 ಸ್ಥಾನಗಳನ್ನು ಗೆದ್ದಿರುವ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ ಮತ್ತು 12 ಸ್ಥಾನಗಳನ್ನು ಗೆದ್ದಿರುವ ನಿತೀಶ್ ಕುಮಾರ್ ಅವರ ಜನತಾ ದಳ ಯುನೈಟೆಡ್ ಬಿಜೆಪಿಗೆ ಬೆಂಬಲ ನೀಡಿದ್ದು, ಸಚಿವ ಸ್ಥಾನ ಪಡೆದಿವೆ.
ರಾಷ್ಟ್ರಪತಿ ಭವನದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಸುಮಾರು 9000 ಅತಿಥಿಗಳು ಉಪಸ್ಥಿತರಿದ್ದರು. ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ 'ಪ್ರಚಂಡ', ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ, ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನಾಥ್, ಭೂತಾನ್ ಪ್ರಧಾನಿ ತ್ಶೇರಿಂಗ್ ಮತ್ತು ಸೆಶೆಲ್ಸ್‌ನ ಉಪಾಧ್ಯಕ್ಷ ಅಹ್ಮದ್ ಅಫೀಫ್ ಅವರು ಸಮಾರಂಭದಲ್ಲಿ ಭಾಗವಹಿಸಿದ್ದ ವಿಶೇಷ ಅತಿಥಿಗಳಾಗಿದ್ದರು.












Click it and Unblock the Notifications