50 ವರ್ಷಗಳಲ್ಲೇ ಮೈತ್ರಿಕೂಟಕ್ಕೆ ಅತಿದೊಡ್ಡ ಗೆಲುವು: ಪ್ರಧಾನಿ ಮೋದಿ
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಇಂದು ನವದೆಹಲಿಯಲ್ಲಿ ಪಕ್ಷವನ್ನುದ್ದೇಶಿಸಿ ಮಾತನಾಡಿದರು. ಮಹಾರಾಷ್ಟ್ರ ಎಲ್ಲಾ ದಾಖಲೆಗಳನ್ನು ಮುರಿದಿದೆ. ಕಳೆದ 50 ವರ್ಷಗಳಲ್ಲಿ ಯಾವುದೇ ಪಕ್ಷ ಅಥವಾ ಚುನಾವಣಾ ಪೂರ್ವ ಮೈತ್ರಿಕೂಟಕ್ಕೆ ಇದು ಅತಿದೊಡ್ಡ ಗೆಲುವು ಎಂದು ಮೋದಿ ಸಂತಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷ ಈಗ ದೇಶದ ರಾಜಕೀಯದಲ್ಲಿ ಪರ್ಜೀವಿ ಎನಿಸಿಕೊಂಡಿದೆ. ಸ್ವಂತವಾಗಿ ಗುಂಪು ಕಟ್ಟಿಕೊಳ್ಳುವುದು ಅವರಿಗೆ ಕಷ್ಟವಾಗುತ್ತಿದೆ. ಆಂಧ್ರಪ್ರದೇಶ, ಸಿಕ್ಕಿಂ, ಹರಿಯಾಣ ಮತ್ತು ಇಂದು ಮಹಾರಾಷ್ಟ್ರದಲ್ಲಿ ಅವರು ನಾಶವಾಗಿದ್ದಾರೆ. ಕಾಂಗ್ರೆಸ್‌ನ ಒಡೆದು ಆಳುವ ರಾಜಕಾರಣ ವಿಫಲವಾಗಿದೆ. ಆದರೆ ಕಾಂಗ್ರೆಸ್‌ನ ದುರಹಂಕಾರ ನೋಡಿ. ಕಾಂಗ್ರೆಸ್ ತನ್ನ ದೋಣಿ ಮಾತ್ರವಲ್ಲದೆ ತನ್ನ ಮಿತ್ರಪಕ್ಷಗಳ ದೋಣಿಯನ್ನೂ ಮುಳುಗಿಸುತ್ತಿದೆ. ಮಹಾರಾಷ್ಟ್ರದಲ್ಲಿ ನಾವು ಅದನ್ನೇ ನೋಡಿದ್ದೇವೆ ಎಂದು ವಾಗ್ದಾಳಿ ನಡೆಸಿದರು.

ಕರ್ನಾಟಕ, ತೆಲಂಗಾಣ ಮತ್ತು ಹಿಮಾಚಲದಲ್ಲಿ ಕಾಂಗ್ರೆಸ್ ಸರ್ಕಾರ ಹೇಗೆ ಜನರಿಗೆ ದ್ರೋಹ ಮಾಡುತ್ತಿದೆ ಎಂಬುದನ್ನು ಮಹಾರಾಷ್ಟ್ರದ ಜನರು ನೋಡಿದ್ದಾರೆ. ಇದನ್ನು ನೀವು ಪಂಜಾಬಿನಲ್ಲೂ ನೋಡುತ್ತೀರಿ. ಇಂದು ಮಹಾರಾಷ್ಟ್ರದ ಜನಾದೇಶದ ಮತ್ತೊಂದು ಸಂದೇಶವಿದೆ. ಇಡೀ ದೇಶದಲ್ಲಿ ಒಂದೇ ಒಂದು ಸಂವಿಧಾನ ಕೆಲಸ ಮಾಡುತ್ತದೆ, ಅದು ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ, ಭಾರತದ ಸಂವಿಧಾನ ಎಂದರು.
ದೇಶದಲ್ಲಿ ಎರಡು ಸಂವಿಧಾನಗಳ ಬಗ್ಗೆ ಯಾರೇ ಮಾತನಾಡಿದರೂ ದೇಶ ಅವುಗಳನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತದೆ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ 370ನೇ ವಿಧಿಯ ಗೋಡೆಯನ್ನು ನಿರ್ಮಿಸಲು ಪ್ರಯತ್ನಿಸಿದವು. ಇದು ಕೆಲಸ ಮಾಡುವುದಿಲ್ಲ ಎಂದು ಮಹಾರಾಷ್ಟ್ರ ಅವರಿಗೆ ಸ್ಪಷ್ಟವಾಗಿ ಹೇಳಿದೆ. ಈಗ ವಿಶ್ವದ ಯಾವುದೇ ಶಕ್ತಿಯು ಆರ್ಟಿಕಲ್ 370 ಅನ್ನು ಮರಳಿ ತರಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದರು.
ಈ ಮಹಾರಾಷ್ಟ್ರ ಚುನಾವಣೆಯು ಇಂಡಿಯಾ ಕೂಟ-ಅಘಾಡಿಯ ದ್ವಂದ್ವ ಮುಖವನ್ನು ಬಯಲು ಮಾಡಿದೆ. ಕಾಂಗ್ರೆಸ್ ನಾಯಕತ್ವವು ದೇಶದಾದ್ಯಂತ ವೀರ ಸಾವರ್ಕರ್ ಅವರನ್ನು ನಿರಂತರವಾಗಿ ಅವಮಾನಿಸಿದೆ. ಮಹಾರಾಷ್ಟ್ರದಲ್ಲಿ ಮತ ಪಡೆಯಲು, ಈ ಜನರು ಅವರನ್ನು ನಿಂದಿಸುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿದರು. ಆದರೆ ಅವರು ಸಾವರ್ಕರ್ ಅವರ ತ್ಯಾಗದ ಬಗ್ಗೆ ಒಮ್ಮೆಯೂ ಸತ್ಯವನ್ನು ಮಾತನಾಡಿಲ್ಲ. ವೀರ್ ಸಾವರ್ಕರ್ ಅವರ ಮಾನಹಾನಿ ಮಾಡುವುದೊಂದೇ ಅವರ ಉದ್ದೇಶ ಎಂದು ವಿಪಕ್ಷಗಳ ವಿರುದ್ಧ ಗುಡುಗಿದರು.

'ಏಕ್ ಹೇ ತೋ ಸೇಫ್ ಹೇ' ಎಂಬ ಭಾವನೆಯು ಜಾತಿ, ಧರ್ಮ, ಭಾಷೆ, ಪ್ರದೇಶದ ಹೆಸರಿನಲ್ಲಿ ಜಗಳವಾಡುವಂತೆ ಮಾಡುವವರಿಗೆ ತಕ್ಕ ಪಾಠ ಕಲಿಸಿದೆ. ಅದು ಅವರಿಗೆ ಶಿಕ್ಷೆ ವಿಧಿಸಿದೆ. ಆದಿವಾಸಿಗಳು, ಒಬಿಸಿಗಳು, ದಲಿತರು, ಸಮಾಜದ ಪ್ರತಿಯೊಂದು ವರ್ಗದವರು ಬಿಜೆಪಿ-ಎನ್‌ಡಿಎಗೆ ಮತ ಹಾಕಿದರು. ಸಮಾಜವನ್ನು ವಿಭಜಿಸುವ ಕಾರ್ಯಸೂಚಿಯನ್ನು ನಡೆಸುತ್ತಿದ್ದ ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟ ವ್ಯವಸ್ಥೆಗೆ ಇದು ಬಲವಾದ ಹೊಡೆತವಾಗಿದೆ ಎಂದರು. ಮಹಾರಾಷ್ಟ್ರದಲ್ಲಿ ಅಭಿವೃದ್ಧಿ, ಉತ್ತಮ ಆಡಳಿತ ಮತ್ತು ಸಾಮಾಜಿಕ ನ್ಯಾಯ ಗೆದ್ದಿದೆ. ಸುಳ್ಳು ಮತ್ತು ವಂಚನೆಯು ಹೀನಾಯ ಸೋಲನ್ನು ಅನುಭವಿಸಿದೆ ಎಂದು ಮೋದಿ ಹೇಳಿದರು.












Click it and Unblock the Notifications