PF Good News: ಪಿಎಫ್ ಹಣ ಹಿಂಪಡೆಯುವ ನಿಯಮದಲ್ಲಿ ಬದಲಾವಣೆ; ಪಿಂಚಣಿದಾರರಿಗೂ ಭರ್ಜರಿ ಸಿಹಿಸುದ್ದಿ
ಕೇಂದ್ರ ಸರ್ಕಾರವು ಭವಿಷ್ಯ ನಿಧಿ (ಪಿಎಫ್) ಕುರಿತು ಮಹತ್ವದ ತೀರ್ಮಾನಕ್ಕೆ ಬಂದಿದೆ. ನವದೆಹಲಿಯಲ್ಲಿ ನಡೆದ ನೌಕರರ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಕೇಂದ್ರೀಯ ಟ್ರಸ್ಟಿಗಳ ಮಂಡಳಿಯ (ಸಿಬಿಟಿ) ಸಭೆಯಲ್ಲಿ ಕನಿಷ್ಠ ಪಿಎಫ್ ಪಿಂಚಣಿಯನ್ನು ಹೆಚ್ಚಿಸುವ ಬಗ್ಗೆ ಸಂಪುಟ ಸಕ್ರಿಯವಾಗಿ ಪರಿಗಣಿಸುತ್ತಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ. ಇಪಿಎಫ್‌ಒ ಧರ್ಮದರ್ಶಿಗಳ ಮಂಡಳಿಯು ಪಿಎಫ್ ಹಣ ಹಿಂಪಡೆಯಲು ಇದ್ದ ನಿಯಮಗಳನ್ನು ಸಡಿಲಗೊಳಿಸುವ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಿದೆ.
ಈ ವಿಷಯವು ಕಾರ್ಯಸೂಚಿಯಲ್ಲಿಲ್ಲದಿದ್ದರೂ ಕೇಂದ್ರೀಯ ಟ್ರಸ್ಟಿಗಳ ಮಂಡಳಿಯಲ್ಲಿರುವ ಟ್ರೇಡ್ ಯೂನಿಯನ್ ಸದಸ್ಯರು ಚರ್ಚೆಯ ಸಮಯದಲ್ಲಿ ಕನಿಷ್ಠ ಪಿಎಫ್ ಪಿಂಚಣಿಯನ್ನು ತಿಂಗಳಿಗೆ 1,000 ರೂಪಾಯಿಯಿಂದ ಪರಿಷ್ಕರಿಸಬೇಕು ಎಂದು ಹೇಳಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಹೆಚ್ಚಿನ ಪಿಂಚಣಿ ವಿತರಣೆಯಲ್ಲಿನ ವಿಳಂಬದ ವಿಷಯದ ಬಗ್ಗೆಯೂ ಈ ಸಭೆಯಲ್ಲಿ ಚರ್ಚಿಸಲಾಗಿದೆ. ಕಾರ್ಮಿಕರನ್ನು ಪ್ರತಿನಿಧಿಸುವ ಕೆಲವು ಸಿಬಿಟಿ ಸದಸ್ಯರು, ಸುಪ್ರೀಂಕೋರ್ಟ್ ಆದೇಶಕ್ಕೆ ಅನುಗುಣವಾಗಿ ಇಪಿಎಫ್‌ಒ ಹೊಸ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

ಸಭೆಯಲ್ಲಿ ಹಲವಾರು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಅವುಗಳಲ್ಲಿ 13 ಸಂಕೀರ್ಣ ನಿಬಂಧನೆಗಳನ್ನು ಒಂದೇ, ಸುವ್ಯವಸ್ಥಿತ ನಿಯಮವಾಗಿ ವಿಲೀನಗೊಳಿಸುವ ಮೂಲಕ ಇಪಿಎಫ್ ಭಾಗಶಃ ಹಿಂಪಡೆಯುವಿಕೆ ನಿಬಂಧನೆಗಳನ್ನು ಸರಳೀಕರಿಸಲಾಗಿದೆ ಎಂದು ಕಾರ್ಮಿಕ ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ. ಅನಾರೋಗ್ಯ, ಶಿಕ್ಷಣ, ಮದುವೆ, ವಸತಿ ಅಗತ್ಯಗಳು ಮತ್ತು ವಿಶೇಷ ಸಂದರ್ಭಗಳಲ್ಲಿ ಪಿಎಫ್ ಹಣ ಹಿಂಪಡೆಯುವ ನಿಯಮಗಳನ್ನು ಸರಳಗೊಳಿಸಲಾಗಿದೆ ಎಂದು ತಿಳಿಸಿದೆ.
ಸದಸ್ಯರು ಈಗ ಭವಿಷ್ಯ ನಿಧಿಯಲ್ಲಿ ಅರ್ಹ ಬಾಕಿಯ ಶೇ 100ರವರೆಗೆ ಹಣ ಹಿಂಪಡೆಯಲು ಸಾಧ್ಯವಾಗುತ್ತದೆ, ಇದರಲ್ಲಿ ಉದ್ಯೋಗಿ ಮತ್ತು ಉದ್ಯೋಗದಾತ ಷೇರುಗಳು ಸಹ ಸೇರಿವೆ ಎಂದು ಹೇಳಿದೆ. ಹಣ ಹಿಂಪಡೆಯುವಿಕೆ ಮಿತಿಗಳನ್ನು ಸಹ ಸುಲಭಗೊಳಿಸಲಾಗಿದೆ. ಶಿಕ್ಷಣಕ್ಕಾಗಿ ಹಿಂಪಡೆಯುವಿಕೆಗಳನ್ನು 10 ಬಾರಿ ಮತ್ತು ಮದುವೆ ಉದ್ದೇಶಕ್ಕೆ ಐದು ಬಾರಿ ಅನುಮತಿಸಲಾಗುವುದು ಎಂದು ಹೇಳಿದೆ. ಈ ಎಲ್ಲ ಭಾಗಶಃ ಹಿಂಪಡೆಯುವಿಕೆಗಳಿಗೆ ಕನಿಷ್ಠ ಸೇವೆಯ ಅಗತ್ಯವನ್ನು ಏಕರೂಪವಾಗಿ ಕೇವಲ 12 ತಿಂಗಳುಗಳಿಗೆ ಇಳಿಸಲಾಗಿದೆ ಎಂದು ವಿವರಿಸಿದೆ.
ಹೊಸ ನಿಯಮದಿಂದ ಅನುಕೂಲವೇನು?
ಇನ್ನು ಮುಂದೆ ಇಪಿಎಫ್‌ಒ ಚಂದಾದಾರರು ಹಿಂಪಡೆಯಲು ಲಭ್ಯವಿರುವ ಅಷ್ಟೂ ಮೊತ್ತವನ್ನು ಪಡೆಯಬಹುದು. ಒಂದು ವೇಳೆ ಭಾಗಶಃ ಹಿಂಪಡೆಯಬೇಕು ಎಂದಾದರೆ ನೌಕರರು ಕನಿಷ್ಠ 12 ತಿಂಗಳು ಸೇವೆ ಸಲ್ಲಿಸಿದ್ದರೆ ಸಾಕು. ಜೊತೆಗೆ ಶಿಕ್ಷಣ, ಮದುವೆ ಉದ್ದೇಶಕ್ಕೆ ಹೆಚ್ಚಿನ ಮೊತ್ತ ಹಿಂಪಡೆಯಲು ಸಾಧ್ಯವಾಗುತ್ತೆ. ಈ ಹಿಂದೆ ವಿಶೇಷ ಸಂದರ್ಭಗಳಲ್ಲಿ ಹಣ ಹಿಂಪಡೆಯುವಾಗ ನೌಕರರು ನಿಖರ ಕಾರಣ ಉಲ್ಲೇಖಿಸಬೇಕು ಎಂಬ ನಿಯಮ ಇತ್ತು. ಆದರೆ ಇನ್ಮುಂದೆ ಯಾವುದೇ ಕಾರಣ ನೀಡದೆ ಹಣವನ್ನು ಹಿಂಪಡೆಯಲು ಅರ್ಜಿ ಸಲ್ಲಿಕೆ ಮಾಡಬಹುದು.

ಪಿಂಚಣಿದಾರರ ಮನೆ ಬಾಗಿಲಿಗೆ ಸೇವೆ
ಇಪಿಎಸ್-95 ಪಿಂಚಣಿದಾರರಿಗೆ ಪ್ರತಿ ಪ್ರಮಾಣಪತ್ರಕ್ಕೆ 50 ರೂಪಾಯಿ ವೆಚ್ಚದಲ್ಲಿ ಮನೆ ಬಾಗಿಲಿಗೆ ಡಿಜಿಟಲ್ ಲೈಫ್ ಸರ್ಟಿಫಿಕೇಟ್ (ಡಿಎಲ್‌ಸಿ) ಸೇವೆಗಳನ್ನು ಒದಗಿಸಲು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಜೊತೆ ಒಪ್ಪಂದಕ್ಕೆ ಸಹಿ ಹಾಕಲು ಸಿಬಿಟಿ ಅನುಮೋದನೆ ನೀಡಿದೆ. ಇದನ್ನು ಸಂಪೂರ್ಣವಾಗಿ ಇಪಿಎಫ್‌ಒ ಭರಿಸುವುದಾಗಿ ತಿಳಿಸಿದೆ.












Click it and Unblock the Notifications