ಕ್ರಿಶ್ಚಿಯನ್ ಆದ್ರೂ ತಿರುಪತಿಗೆ ಬಂದು ಮುಡಿ ಕೊಟ್ಟ ಪವನ್ ಕಲ್ಯಾಣ್ ಪತ್ನಿ, ಕಾರಣವೇನು?
ಆಂಧ್ರಪ್ರದೇಶ ಉಪಮುಖ್ಯಮಂತ್ರಿ, ಟಾಲಿವುಡ್ ನಟ ಪವನ್ ಕಲ್ಯಾಣ್ ಅವರ ಪತ್ನಿ ಅನ್ನಾ ಲೆಜ್ನೆವಾ ಕೊನಿಡೇಲಾ (Anna Lezhneva) ಅವರು ತಿರುಪತಿಯಲ್ಲಿ ವೆಂಕಟೇಶ್ವರ ದರ್ಶನ ಮಾಡಿ ಮುಡಿ ಅರ್ಪಿಸಿದ್ದಾರೆ. ಇತ್ತೀಚೆಗೆ ಸಿಂಗಾಪುರದಲ್ಲಿ ನಡೆದ ಬೆಂಕಿ ಅವಘಡದಲ್ಲಿ ಗಾಯಗೊಂಡ ತಮ್ಮ ಮಗ ಮಾರ್ಕ್ ಶಂಕರ್ ಸುರಕ್ಷಿತವಾಗಿ ಹಿಂದಿರುಗಿ ಚೇತರಿಸಿಕೊಂಡಿರುವ ಕಾರಣ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ಇಲ್ಲಿನ ಪದ್ಮಾವತಿ ಕಲ್ಯಾಣ ಕಟ್ಟದಲ್ಲಿ ತಲೆ ಬೋಳಿಸಿಕೊಂಡು ತಮ್ಮ ಕೂದಲನ್ನು ವೆಂಕಟೇಶ್ವರನಿಗೆ ಅರ್ಪಿಸಿದ್ದಾರೆ.
ಅಚ್ಚರಿಯೆಂದರೆ ರಷ್ಯಾ ಮೂಲದ ಕ್ರಿಶ್ಚಿಯನ್ ಆಗಿದ್ದರೂ ಅವರು ಆಳವಾದ ಸಾಂಕೇತಿಕ ಭಕ್ತಿಯ ಕಾರ್ಯದಲ್ಲಿ ತೊಡಗಿದ್ದಾರೆ. ತಮ್ಮ ಪ್ರತಿಜ್ಞೆಯನ್ನು ಪೂರೈಸಲು ತಿರುಮಲದಲ್ಲಿ ತಮ್ಮ ಕೂದಲನ್ನು ಅರ್ಪಿಸಿದ್ದಾರೆ. ಅನ್ನಾ ತಮ್ಮ ಕೂದಲನ್ನು ಅರ್ಪಿಸುವ ಮೊದಲು ಭಗವಾನ್ ವೆಂಕಟೇಶ್ವರನಲ್ಲಿ ತಮ್ಮ ನಂಬಿಕೆಯನ್ನು ಘೋಷಿಸುವ ಪತ್ರಕ್ಕೂ ಸಹಿ ಹಾಕಿದ್ದಾರೆ. ಹಿಂದೂಯೇತರರು ಸಹಿ ಮಾಡುವುದು ಕಡ್ಡಾಯವಾಗಿದ್ದು, ಈ ಪ್ರಕ್ರಿಯೆ ಕೂಡ ಮುಗಿಸಿದ್ದಾರೆ.

ಪವನ್ ಕಲ್ಯಾಣ್ ಅವರ ಪತ್ನಿ ಅನ್ನಾ ಲೆಜ್ನೆವಾ ಕೊನಿಡೇಲಾ ಅವರು ಸಿಂಗಾಪುರದಲ್ಲಿ ನಡೆದ ಅಗ್ನಿ ಆಕಸ್ಮಿಕದಲ್ಲಿ ತಮ್ಮ ಮಗ ಬದುಕುಳಿದ ನಂತರ ಹರಕೆ ತೀರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಜನಸೇನಾ ಪಾರ್ಟಿ, ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಪತ್ನಿ ಶ್ರೀಮತಿ ಅನಾ ಕೊನಿಡೇಲಾ ಅವರು ತಿರುಮಲಕ್ಕೆ ಆಗಮಿಸಿ ಗಾಯತ್ರಿ ಸದನದಲ್ಲಿ ಟಿಟಿಡಿ ಉದ್ಯೋಗಿಗಳ ಸಮ್ಮುಖದಲ್ಲಿ ಘೋಷಣೆ ದಾಖಲೆಗಳಿಗೆ ಸಹಿ ಹಾಕಿದರು. ಶ್ರೀಮತಿ ಅನ್ನಾ ಕೊನಿದಲ ಅವರು ತಿರುಮಲದ ವೆಂಕಟೇಶ್ವರ ಸ್ವಾಮಿಗೆ ತಮ್ಮ ನಮನಗಳನ್ನು ಸಲ್ಲಿಸಿದರು. ಶ್ರೀವರಾಹ ಸ್ವಾಮಿಯ ದರ್ಶನ ಪಡೆದ ನಂತರ, ಎಲ್ಲಾ ಭಕ್ತರೊಂದಿಗೆ ಪದ್ಮಾವತಿ ಕಲ್ಯಾಣ ಕಟ್ಟೆಯಲ್ಲಿ ತಮ್ಮ ಮುಡಿ ಅರ್ಪಿಸಿದರು.
ಟಿಟಿಡಿ ನಿಯಮಗಳ ಪ್ರಕಾರ ಘೋಷಣೆ ದಾಖಲೆಗಳಿಗೆ ಸಹಿ ಮಾಡಿದ್ದಾರೆ. ಅವರ ಪುತ್ರ ಬೆಂಕಿ ಅವಘಡದಲ್ಲಿ ಸಿಲುಕಿಕೊಂಡಾದ ಕಲಿಯುಗದ ದೇವರು ಶ್ರೀವೆಂಕಟೇಶ್ವರ ಸ್ವಾಮಿ ಅವರನ್ನು ಪ್ರಾರ್ಥಿಸಿದ್ದರು. ಭಗವಂತ ತಕ್ಷಣವೇ ತನ್ನ ಮಗುವನ್ನು ರಕ್ಷಿಸಿ ಅವನಿಗೆ ಪುನರ್ಜನ್ಮ ನೀಡಿದನೆಂದು ಶ್ರೀಮತಿ ಅನ್ನಾ ಕೊನಿಡೇಲಾ ಅವರು ಆಳವಾಗಿ ನಂಬಿದ್ದಾರೆ. ಭಾರತೀಯ ಸನಾತನ ಧರ್ಮದ ಶ್ರೇಷ್ಠತೆಯನ್ನು ಗೌರವಿಸುತ್ತಾ, ಅವರು ಸಾಮಾನ್ಯ ಭಕ್ತರೊಂದಿಗೆ ಪದ್ಮಾವತಿ ಕಲ್ಯಾಣಕಟ್ಟೆಗೆ ಹೋಗಿ ಭಗವಂತನಲ್ಲಿ ತಮ್ಮ ನಂಬಿಕೆಯ ಸಂಕೇತವಾಗಿ ಮುಡಿ ಅರ್ಪಿಸಿದ್ದಾರೆ.

ವೆಂಕಟೇಶ್ವರ ಸ್ವಾಮಿಯ ಸನ್ನಿಧಿಗೆ ಬಂದು ತನ್ನ ಕೂದಲನ್ನು ಅರ್ಪಿಸುವ ಪ್ರತಿಜ್ಞೆಯ ಭಾಗವಾಗಿ, ಶ್ರೀಮತಿ ಅನ್ನಾ ಕೊನಿಡೇಲಾ ಅವರು ತಮ್ಮ ಕೂದಲನ್ನು ಅರ್ಪಿಸಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ ಎಂದು ಜನಸೇನಾ ಪಾರ್ಟಿ ಮಾಹಿತಿ ನೀಡಿದೆ. ಸೋಮವಾರ ಬೆಳಿಗ್ಗೆ ಶ್ರೀವಾರಿ ಸುಪ್ರಭಾತ ಸೇವೆಯಲ್ಲಿ ಭಾಗಿಯಾಗಿ ದೇವರ ದರ್ಶನ ಪಡೆದಿದ್ದಾರೆ. ದರ್ಶನದ ನಂತರ ರಂಗನಾಯಕುಲ ಮಂಟಪದಲ್ಲಿ ಅನ್ನಾ ಕೊನಿಡೇಲಾ ಅವರಿಗೆ ವೇದ ವಿದ್ವಾಂಸರು ಆಶೀರ್ವಾದ ಮಾಡಿದರು. ಬಳಿಕ ದೇವಸ್ಥಾನದ ಅಧಿಕಾರಿಗಳು ಶ್ರೀವಾರಿ ತೀರ್ಥ ಪ್ರಸಾದವನ್ನು ನೀಡಿದರು. ಬಳಿಕ ಮಗನ ಹೆಸರಿನಲ್ಲಿ ತಿರುಪತಿಯಲ್ಲಿ ಅನ್ನದಾನಕ್ಕೆ 17 ಲಕ್ಷ ರೂಪಾಯಿ ದೇಣಿಗೆ ಕೂಡ ನೀಡಿದ್ದಾರೆ. ಬಳಿಕ ಭಕ್ತರೊಂದಿಗೆ ಪ್ರಸಾದ ಸೇವಿಸಿ, ಬಳಿಕ ತಾವೇ ಖುದ್ದಾಗಿ ಬಡಿಸಿದ್ದಾರೆ.












Click it and Unblock the Notifications