ಪಾಕಿಸ್ತಾನದ ಜೈಲಿನಲ್ಲಿ ಕೊಳೆಯುತ್ತಿದ್ದಾರೆ 75 ಭಾರತೀಯ ಸೈನಿಕರು
ನವದೆಹಲಿ, ಆಗಸ್ಟ್ 3: 54 ಯುದ್ಧಾಪರಾಧಿಗಳು ಸೇರಿ ನಾಪತ್ತೆಯಾಗಿರುವ 75 ಭಾರತೀಯ ಸೈನಿಕರು ಪಾಕಿಸ್ತಾನದ ಜೈಲಿನಲ್ಲಿದ್ದಾರೆ ಎಂದು ಕೇಂದ್ರ ಸರಕಾರ ಬುಧವಾರ ಲೋಕಸಭೆಯಲ್ಲಿ ಹೇಳಿದೆ.
ಆದರೆ ಇವರೆಲ್ಲಾ ನಮ್ಮಲ್ಲಿ ಇದ್ದಾರೆ ಎಂಬುದನ್ನು ಪಾಕಿಸ್ತಾನ ಇಲ್ಲಿಯವರೆಗೆ ಬಹಿರಂಗವಾಗಿ ಒಪ್ಪಿಕೊಂಡಿಲ್ಲ ಎಂದು ವಿದೇಶಾಂಗ ಖಾತೆ ರಾಜ್ಯ ಸಚಿವ ವಿಕೆ ಸಿಂಗ್ ಹೇಳಿದ್ದಾರೆ.

ಇನ್ನು ಜುಲೈ 27ರ ಅಂತ್ಯಕ್ಕೆ ಪಾಕಿಸ್ತಾನದ ಜೈಲಿನಲ್ಲಿ 417 ಮೀನುಗಾರರು ಹಾಗೂ ಶ್ರೀಲಂಕಾದ ಜೈಲಿನಲ್ಲಿ 15 ಭಾರತೀಯ ಮೀನುಗಾರರು ಇದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
"ಪಾಕಿಸ್ತಾನದ ವಿಚಾರದಲ್ಲಿ ರಾಜತಾಂತ್ರಿಕ ಸಂಪರ್ಕವನ್ನು ಎದುರು ನೋಡಲಾಗುತ್ತಿದೆ. ಈ ಮೀನುಗಾರರು ಯಾವ ರಾಜ್ಯಕ್ಕೆ ಸೇರಿದವರು ಎಂಬ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಆದರೆ ಶ್ರೀಲಂಕಾದಲ್ಲಿರುವ ಮೀನುಗಾರರು ತಮಿಳುನಾಡು ಮತ್ತು ಪುದುಚೆರಿಗೆ ಸೇರಿದವರು," ಎಂದು ಸಿಂಗ್ ಮಾಹಿತಿ ನೀಡಿದ್ದಾರೆ.
ಇಷ್ಟಲ್ಲದೆ ಶ್ರೀಲಂಕಾ ಮತ್ತು ಪಾಕಿಸ್ತಾನದ ಜತೆ ಭಾರತ ನಿರಂತರ ಸಂಪರ್ಕದಲ್ಲಿದ್ದು ಶೀಘ್ರವಾಗಿ ಮೀನುಗಾರರು ಮತ್ತು ಅವರ ಬೋಟುಗಳ ಬಿಡುಗಡೆ ಒತ್ತಾಯಿಸುತ್ತಾ ಬರಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications