Pahalgam Attack: ಚುನಾವಣೆ ಹಿನ್ನೆಲೆ ಬಿಹಾರಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ: ಭಾರೀ ಬಿಗಿ ಭದ್ರತೆ
Pahalgam Attack: ಜಮ್ಮು ಮತ್ತು ಕಾಶ್ಮೀರದ ಪಾಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಹಿನ್ನೆಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೇಂದ್ರದ ಕ್ಯಾಬಿನೆಟ್ ಸಮಿತಿ ಭದ್ರತೆ ಸಭೆಯನ್ನು ದೆಹಲಿಯಲ್ಲಿ ಆರಂಭಿಸಿದ್ದಾರೆ. ಇನ್ನು ಅವರು ನಾಳೆ ಅಂದರೆ ಏಪ್ರಿಲ್ 25ರಂದು ಬಿಹಾರಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಹಿನ್ನೆಲೆ ಬಿಹಾರ ಪೊಲೀಸರು ಭಾರೀ ಬಿಗಿ ಭದ್ರತೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಚುನಾವಣೆ ಹಿನ್ನೆಲೆ ಬಿಹಾರಕ್ಕೆ ಪ್ರಧಾನಿ ಮೋದಿಯವರು ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆ ರಾಜ್ಯ ಸರ್ಕಾರ ಭದ್ರತಾ ವ್ಯವಸ್ಥೆಗಳನ್ನು ಹೆಚ್ಚಿಸುತ್ತಿದೆ. ಪ್ರಧಾನಿಯವರಿಗಾಗಿ ಆಯೋಜಿಸಲಾದ ಕಾರ್ಯಕ್ರಮಗಳಲ್ಲಿ ಪಾಟ್ನಾದಲ್ಲಿ ನಡೆಯುವ ಸಮಾರಂಭವೂ ಸೇರಿದೆ.

ಈ ವೇಳೆ ಅವರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸುತ್ತಾರೆ ಮತ್ತು ಹೊಸ ರೈಲುಗಳಿಗೆ ಚಾಲನೆ ನೀಡುತ್ತಾರೆ. ನಂತರ, ಪಂಚಾಯತ್ ರಾಜ್ ದಿವಸ್ ಸಂದರ್ಭದಲ್ಲಿ ಮಧುಬನಿ ಜಿಲ್ಲೆಯ ಝಂಝರ್‌ಪುರದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯ ನಂತರ ರಾಜ್ಯಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ ಎಂದು ಬಿಹಾರ ಪೊಲೀಸ್ ಮಹಾನಿರ್ದೇಶಕ(ಡಿಜಿಪಿ) ವಿನಯ್ ಕುಮಾರ್ ಅವರು ಬುಧವಾರ ತಿಳಿಸಿದ್ದಾರೆ.
ಭಾರತ-ನೇಪಾಳ ಗಡಿಯಲ್ಲಿರುವ ಜಿಲ್ಲೆಗಳು, ವಿಮಾನ ನಿಲ್ದಾಣಗಳು ಮತ್ತು ಪ್ರವಾಸಿ ತಾಣಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ನಡೆಸಿದ ಪರಿಶೀಲನಾ ಸಭೆಯ ನಂತರ ಅವರು ಹೇಳಿದ್ದಾರೆ.
ಜಿಲ್ಲಾ ಪೊಲೀಸರು ಅಷ್ಟೇ ಅಲ್ಲದೆ, ರಾಜ್ಯ ಪೊಲೀಸ್ ಗುಪ್ತಚರ ವಿಭಾಗದ ಅಧಿಕಾರಿಗಳಿಗೆ, ನೇಪಾಳದಿಂದ ಭಾರತಕ್ಕೆ ಬರುವ ಜನರ ಚಲನವಲನಗಳ ಮೇಲೆ ತೀವ್ರ ನಿಗಾ ಇಡಲು ಸೂಚಿಸಲಾಗಿದೆ. ಭಾರತ-ನೇಪಾಳ ಗಡಿಯಲ್ಲಿರುವ ಗಡಿ ಪೊಲೀಸ್ ಹೊರಠಾಣೆಗಳನ್ನು ಜಾಗರೂಕತೆಯಿಂದ ಇರಿಸಲಾಗಿದೆ ಮತ್ತು ಗಡಿಯಾಚೆಗಿನ ಚಟುವಟಿಕೆಗಳನ್ನು ಪರಿಶೀಲಿಸಲು ಸೂಚಿಸಲಾಗಿದೆ.
ಡಿಕೆ ಶಿವಕುಮಾರ್ ಹೇಳಿದ್ದೇನು?: ಜಮ್ಮು-ಕಾಶ್ಮೀರದಲ್ಲಿನ ಉಗ್ರರ ದಾಳಿಯಿಂದ ಇಡೀ ದೇಶಾದ್ಯಂತ ಸದ್ದು ಮಾಡುತ್ತಿದೆ. ಈ ಉಗ್ರ ದಾಳಿಯನ್ನು ನಾವು ಖಂಡಿಸುತ್ತೇವೆ. ಈ ಉಗ್ರರು ಹಾಗೂ ಭಯೋತ್ಪಾದಕ ಸಂಘಟನೆಗಳನ್ನು ಸದೆಬಡಿಯಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾವು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಜಾಗೃತವಾಗಿ ಕೆಲಸ ಮಾಡಬೇಕಿದೆ. ಮುಖ್ಯಮಂತ್ರಿಗಳು ಈ ವಿಚಾರ ತಿಳಿದ ತಕ್ಷಣ ರಾಜ್ಯ ಸರ್ಕಾರದ ಪರ ಸಚಿವ ಸಂತೋಷ್ ಲಾಡ್ ಅವರ ಮುಖಂಡತ್ವದಲ್ಲಿ ಒಂದು ತಂಡವನ್ನು ಕಳುಹಿಸಿದ್ದಾರೆ ಎಂದು ತಿಳಿಸಿದರು.
ಧರ್ಮದ ಹೆಸರಿನಲ್ಲಿ ಭಯೋತ್ಪಾದಕ ದಾಳಿ ನಡೆದಿರುವುದು ನಿಜಕ್ಕೂ ಕೆಟ್ಟ ಬೆಳವಣಿಗೆ. ಕಾಂಗ್ರೆಸ್ ಪಕ್ಷ ಇದನ್ನು ಖಂಡಿಸುತ್ತದೆ. ಈ ವಿಚಾರದಲ್ಲಿ ನಮ್ಮ ಪಕ್ಷ ಕೇಂದ್ರ ಸರ್ಕಾರದ ಪರ ನಿಲ್ಲುವುದಾಗಿ ತಿಳಿಸಿದೆ. ಕೇಂದ್ರ ಸರ್ಕಾರ ಈ ಭಯೋತ್ಪಾದಕರನ್ನು ಸದೆಬಡಿಯಬೇಕು. ಇಂತಹ ಭಯೋತ್ಪಾದಕ ಸಂಘಟನೆಗಳ ವಿರುದ್ಧ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳಬೇಕು. ಇಂತಹ ಸಂಘಟನೆಗಳು ಯಾವುದೇ ದೇಶಕ್ಕೆ ಸಂಬಂಧಿಸಿದರೂ ಇವುಗಳನ್ನು ಬುಡಸಮೇತ ಕಿತ್ತೊಗೆಯಬೇಕು. ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕೆಂದು ಹೇಳಿದರು.
ಈ ಘಟನೆ ವಿದೇಶಾಂಗ ನೀತಿಯಿಂದ ಪ್ರವಾಸಿಗರು ಹಾಗೂ ದೇಶದ ಜನರ ಮೇಲೆ ಪ್ರಭಾವ ಬೀರುವುದರಿಂದ ಕೇಂದ್ರ ಸರ್ಕಾರ ಈ ವಿಚಾರವಾಗಿ ಸರ್ವಪಕ್ಷ ಸಭೆ ಕರೆಯಬೇಕು. ನಾನು ಈಗಷ್ಟೇ ದಾಳಿಯಲ್ಲಿ ಮೃತರ ಕುಟುಂಬದವರ ಜೊತೆ ಚರ್ಚೆ ಮಾಡಿದೆ. ಶಿವಮೊಗ್ಗ ಜಿಲ್ಲಾ ಸಚಿವರು ಹಾಗೂ ಪೊಲೀಸ್ ಅಧಿಕಾರಿಗಳ ಜತೆ ಮಾತನಾಡಿದ್ದು, ಮೃತರ ಕುಟುಂಬದವರನ್ನು ಭೇಟಿ ಮಾಡುವಂತೆ ತಿಳಿಸಿದ್ದೇನೆ ಎಂದರು.
ಧರ್ಮದ ಆಧಾರದ ಮೇಲೆ ಹತ್ಯೆ ಮಾಡಿರುವ ದಾಳಿಯನ್ನು ಇದೇ ಮೊದಲ ಬಾರಿ ನೋಡಿದ್ದೇನೆ. ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂದು ಆಘಾತವಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿ ಅವರ ಕುಟುಂಬದವರಿಗೆ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.












Click it and Unblock the Notifications